ಬುಧವಾರ, ಸೆಪ್ಟೆಂಬರ್ 29, 2021
20 °C
ಮೈಸೂರು ಕಡೆಗಣನೆ, ಹಾಸನ, ಕೊಡಗು, ಚಾಮರಾಜನಗರ ಮೂಲೆಗುಂಪು

ಸಚಿವ ಸಂಪುಟ: ಮೈಸೂರು ಭಾಗದ ಐದು ಜಿಲ್ಲೆಗಳ ಪೈಕಿ ಮಂಡ್ಯಕ್ಕಷ್ಟೇ ಪ್ರಾತಿನಿಧ್ಯ

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

DH Photo

ಮೈಸೂರು: ಬಿಜೆಪಿ ನೇತೃತ್ವದಲ್ಲಿ ಎರಡನೇ ಬಾರಿಗೆ ರಚನೆಯಾಗಿರುವ ಸರ್ಕಾರದ ಸಚಿವ ಸಂಪುಟದಲ್ಲಿ ಮೈಸೂರು ಭಾಗದ ಐದು ಜಿಲ್ಲೆಗಳ ಪೈಕಿ ಮಂಡ್ಯಕ್ಕಷ್ಟೇ ಪ್ರಾತಿನಿಧ್ಯ ದೊರಕಿದೆ. ಮೈಸೂರಿಗೆ ಈ ಬಾರಿಯಾದರೂ ಪ್ರಾತಿನಿಧ್ಯ ದೊರಕಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಉಳಿದ ಮೂರು ಜಿಲ್ಲೆಗಳು ಕೂಡ ಮೂಲೆಗುಂಪಾಗಿವೆ.

‌ಮಂಡ್ಯದ ಕೆ.ಸಿ.ನಾರಾಯಣಗೌಡರಿಗೆ ಮತ್ತೆ ಅವಕಾಶ ದೊರಕಿದೆ. ಮೈಸೂರಿನ ಶಾಸಕರಾದ ಕೆ.ಆರ್‌.ಕ್ಷೇತ್ರದ ಎಸ್‌.ಎ.ರಾಮದಾಸ್‌, ಚಾಮರಾಜ ಕ್ಷೇತ್ರದ ಎಲ್‌.ನಾಗೇಂದ್ರ ಹಾಗೂ ನಂಜನಗೂಡು ಶಾಸಕ ಬಿ.ಹರ್ಷವರ್ಧನ್ –ಈ ಮೂವರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನವನ್ನು ನೀಡಬೇಕು ಎಂಬ ಆಗ್ರಹವು ವರಿಷ್ಠರ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಾಸನದ ಪ್ರೀತಂ ಜೆ ಗೌಡ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಶಾಸಕ ಪಿ.ಎಸ್‌.ನಿರಂಜನಕುಮಾರ್‌, ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಎಂ.ಪಿ.ಅಪ್ಪಚ್ಚುರಂಜನ್‌, ವಿರಾಜಪೇಟೆ ಕ್ಷೇತ್ರದ ಕೆ.ಜಿ.ಬೋಪಯ್ಯ ಸಚಿವ ಸ್ಥಾನವನ್ನು ನಿರೀಕ್ಷಿಸಿದ್ದರು. ಅವರ ನಿರೀಕ್ಷೆಯೂ ಹುಸಿಯಾಗಿದೆ.

ಐದು ಬಾರಿ ಆಯ್ಕೆಯಾಗಿರುವ ರಂಜನ್‌ , ತಲಾ ನಾಲ್ಕು ಬಾರಿ ಆಯ್ಕೆಯಾಗಿರುವ ರಾಮದಾಸ್‌ ಮತ್ತು ಬೋಪಯ್ಯ ಅವರ ಅನುಭವವೂ ಈ ಬಾರಿ ಕೈಹಿಡಿದಿಲ್ಲ. ನಿರಂಜನ್‌ಕುಮಾರ್ ಅವರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಷ್ಟೇ ಉಳಿದಿರುವ ಅವಕಾಶ.

ಮೈಸೂರು ಕಡೆಗಣನೆ

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲೂ ಮೈಸೂರು ಕಡೆಗಣಿಸಲ್ಪಟ್ಟಿದೆ.

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ, ನಂತರದ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದಲ್ಲಿ ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯ ದೊರಕಿತ್ತು. ಆದರೆ ನಂತರ ಬಂದಿರುವ ಬಿಜೆಪಿ ನೇತೃತ್ವದ ಸರ್ಕಾರಗಳಲ್ಲಿ ಪ್ರಾತಿನಿಧ್ಯ ದೊರಕಿಲ್ಲ. ಮೂವರು ಶಾಸಕರ ವೈಯಕ್ತಿಕ ವರ್ಚಸ್ಸು, ಕಾರ್ಯವೈಖರಿ, ಪ್ರಭಾವ, ಅನುಭವ ಮೂಲೆಗುಂಪಾಗಿದೆ.

ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕಾರಣಕ್ಕಾಗಿ ಮೈಸೂರು ಭಾಗದ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗದು ಎಂಬ ಕಾರಣವನ್ನು ಮೂರು ವರ್ಷದ ಹಿಂದೆ ನೀಡಲಾಗಿತ್ತು. ಈ ಬಾರಿಯಾದರೂ ಸ್ಥಾನ ಕೊಡಲೇಬೇಕು ಎಂದು ಶಾಸಕರು ತಮ್ಮ ಹಿತೈಷಿ ಹಿರಿಯರ ಮೂಲಕ ಗಮನ ಸೆಳೆದಿದ್ದರು.

‘ಮೂವರು ಶಾಸಕರ ಪೈಕಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಸಚಿವರಾಗಿ, ಜಿಲ್ಲೆಯ ಉಸ್ತುವಾರಿಯೂ ಆಗಿ ಅನುಭವವುಳ್ಳ ಎಸ್‌.ಎ.ರಾಮದಾಸ್‌ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ’ ಎಂದೇ ಹೇಳಲಾಗಿತ್ತು. ರಾಮದಾಸ್‌ ಕೂಡ ಆಶಾವಾದಿಯಾಗಿದ್ದರು.

’ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ. ಆದರೆ ಅವಕಾಶ ಕೊಟ್ಟರೆ ನಿಭಾಯಿಸಲು ಸಿದ್ಧ’ ಎಂದು ಎಲ್‌.ನಾಗೇಂದ್ರ ಗಮನ ಸೆಳೆದಿದ್ದರು.

‘ಬಲಗೈ ಸಮುದಾಯದವರಿಗೆ ಅವಕಾಶ ನೀಡಬೇಕು’ ಎಂಬ ನಂಜನಗೂಡು ಶಾಸಕ ಬಿ.ಹರ್ಷವರ್ಧನ ಅವರ ಪ್ರತಿಪಾದನೆಯೂ ವರಿಷ್ಠರನ್ನು ಮುಟ್ಟುವಲ್ಲಿ ವಿಫಲವಾಗಿದೆ.

ಕೃಷ್ಣರಾಜ ಕ್ಷೇತ್ರವನ್ನೇ ನಾನು ಇನ್ನು ಮುಂದೆ ಕರ್ನಾಟಕ ಎಂದುಕೊಂಡು ಮೂರು ತಿಂಗಳಲ್ಲಿ ಪಕ್ಷವನ್ನು ದೊಡ್ಡಮಟ್ಟದಲ್ಲಿ ಸಂಘಟಿಸುವೆ.
–ಎಸ್‌.ರಾಮದಾಸ್‌, ಕೃಷ್ಣರಾಜ ಶಾಸಕ

ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ದೊರಕಿಲ್ಲ ಎಂಬುದು ಹೆಚ್ಚು ಬೇಸರ ಮೂಡಿಸಿದೆ. ಪ್ರತಿ ಜಿಲ್ಲೆಗೊಂದು ಸಚಿವ ಸ್ಥಾನ ನೀಡಬೇಕು
– ಎಲ್‌.ನಾಗೇಂದ್ರ, ಚಾಮರಾಜ ಶಾಸಕ

ಮೈಸೂರಿಗೆ ಪ್ರಾತಿನಿಧ್ಯ ದೊರಕಿಲ್ಲ ಎಂಬುದಕ್ಕಿಂತಲೂ ಬಲಗೈ ಸಮುದಾಯದ ಪ್ರತಿನಿಧಿಗಳಿಗೆ ಅವಕಾಶವೇ ದೊರಕಿಲ್ಲ ಎಂಬುದು ಬೇಸರ ಮೂಡಿಸಿದೆ.

– ಬಿ.ಹರ್ಷವರ್ಧನ್‌, ನಂಜನಗೂಡು ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು