ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಟ್ಟಿ ಸಭಾಪತಿ, ಪ್ರಾಣೇಶ್‌ ಉಪ ಸಭಾಪತಿ

ಮೇಲ್ಮನೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ l ಪ್ರಾಣೇಶ್‌ ಇಂದು ನಾಮಪತ್ರ
Last Updated 27 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ನಿರ್ಧರಿಸಿರುವ ಬಿಜೆಪಿಯು ಉಪ ಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್‌ ಅವರನ್ನು ಕಣಕ್ಕಿಳಿಸಲಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬುಧವಾರ ರಾತ್ರಿ ನಡೆದ ವಿಧಾನಪರಿಷತ್‌ ಸದಸ್ಯರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭಾಪತಿ ಸ್ಥಾನಕ್ಕೆ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಹೆಸರನ್ನು ಜೆಡಿಎಸ್‌ ಈಗಾಗಲೇ ಅಂತಿಮ
ಗೊಳಿಸಿದೆ. ಈ ಮೂಲಕ ಮೇಲ್ಮನೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ.

ಪ್ರಾಣೇಶ್‌ ಅವರು ಗುರುವಾರ ಬೆಳಿಗ್ಗೆ 10 ಗಂಟೆಗೆ ಉಪ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪರಿಷತ್‌ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.

ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್‌ ಶಾ ಅವರ ಅನುಮತಿ ಪಡೆದಿದ್ದಾರೆ. ಹೊರಟ್ಟಿ ಯವರ ವಿವರವನ್ನೂ ಪಡೆದ ಬಳಿಕ ವರಿಷ್ಠರು ಒಪ್ಪಿಗೆ ನೀಡಿದರು ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿಎಸ್‌ವೈ ಭೇಟಿ ಮಾಡಿದ ಹೊರಟ್ಟಿ

ಸಭೆಗೂ ಮುನ್ನ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಬಸವರಾಜ ಹೊರಟ್ಟಿ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಅವರು ಮನವಿ ಮಾಡಿದರು.

ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಎರಡನೇ ಬಾರಿ ಬಿಜೆಪಿ ಅವಿಶ್ವಾಸ ಮಂಡಿಸಿದ್ದು, ಇದಕ್ಕೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ.ಉಪ ಸಭಾಪತಿ ಹುದ್ದೆಗೆ ಆಯ್ಕೆ ಆದ ತಕ್ಷಣವೇ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಕಳೆದ ಅಧಿವೇಶನದ ವೇಳೆಯೂ ಬಿಜೆಪಿ ಮತ್ತು ಜೆಡಿಎಸ್‌ ಸಭಾಪತಿ ವಿರುದ್ಧ ಅವಿಶ್ವಾಸ ನೋಟಿಸ್‌ ನೀಡಿ ದ್ದವು. ನೋಟಿಸ್‌ ಕ್ರಮ ಬದ್ಧವಾಗಿಲ್ಲ ಎಂದು ತಳ್ಳಿಹಾಕಲಾಯಿತು. ಸರ್ಕಾರ ಒಂದು ದಿನದ ಅಧಿವೇಶನ ಕರೆದು (ಡಿ.15) ಪುನಃ ಅವಿಶ್ವಾಸ ಪ್ರಸ್ತಾಪಿಸುವ ಪ್ರಯತ್ನ ಭಾರಿ ಗಲಾಟೆಗೆ ಕಾರಣವಾಯಿತು. ಅಂದು ಸಭಾಪತಿ ಪೀಠದ ಮೇಲಿದ್ದ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರನ್ನು ಎಳೆದು ಹಾಕಲಾಗಿತ್ತು. ಈ ವಿದ್ಯಮಾನ ರಾಷ್ಟ್ರಮಟ್ಟದಲ್ಲಿ ಗಮನಸೆಳೆದಿತ್ತು.

ಪ್ರಾಣೇಶ್‌ಗೆ 11 ತಿಂಗಳ ಅವಧಿ: ನಗರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ರುವ ಬಿಜೆಪಿಯ ಎಂ.ಕೆ.ಪ್ರಾಣೇಶ್ ಸದಸ್ಯತ್ವದ ಅವಧಿ ಇನ್ನು 11 ತಿಂಗಳು ಬಾಕಿ ಇದೆ. ಇವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಸಂಬಂಧಿಯೂ ಹೌದು.

ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವಧಿ ಒಂದೂವರೆ ವರ್ಷ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT