ಭಾನುವಾರ, ಸೆಪ್ಟೆಂಬರ್ 25, 2022
20 °C

ಬಿಜೆಪಿಯಿಂದ ಬಿಬಿಎಂಪಿ ಚುನಾವಣೆ ವಿಳಂಬ: ಎನ್‌. ನಾಗರಾಜ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಜೆಪಿ ಸರ್ಕಾರ ಅವೈಜ್ಞಾನಿಕವಾಗಿ ಬಿಬಿಎಂಪಿ ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಿರುವುದರಿಂದ ಚುನಾವಣೆ ವಿಳಂಬವಾಗುತ್ತಿದೆ’ ಎಂದು ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಎನ್‌. ನಾಗರಾಜ್‌ ಆರೋಪಿಸಿದರು.

‘ಬಿಜೆಪಿ ಸರ್ಕಾರಕ್ಕೆ ಬಿಬಿಎಂಪಿಗೆ ಚುನಾವಣೆ ನಡೆದು ಕಾರ್ಪೊರೇಟರ್‌ಗಳು ಬರುವುದು ಬೇಕಿಲ್ಲ. ಹೀಗಾಗಿ ಎರಡು ವರ್ಷಗಳಿಂದ ಚುನಾವಣೆ ನಡೆಸಲು ಮುಂದಾಗಿಲ್ಲ. ಇದೀಗ ವಾರ್ಡ್‌ಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಪುನರ್‌ವಿಂಗಡಣೆ ಮಾಡದೆ ಎಲ್ಲರಿಗೂ ಅನ್ಯಾಯ ಮಾಡಿದ್ದಾರೆ’ ಎಂದು ದೂರಿದರು.

‘ವಾರ್ಡ್ ವಿಂಗಡಣೆಯನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರಿರುವ ಕ್ಷೇತ್ರದಲ್ಲಿ 39 ಸಾವಿರ ಮತದಾರರ ವಾರ್ಡ್ ಮಾಡಿದ್ದಾರೆ. ಅದೇ ಬಿಜೆಪಿ ಶಾಸಕರಿರುವ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 30 ಸಾವಿರ ಜನರಿಗೆ ವಾರ್ಡ್‌ ವಿಂಗಡಣೆ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಬಿಬಿಎಂಪಿ ವಾರ್ಡ್‌ಗಳನ್ನು ಆಯುಕ್ತರು, ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳ ತಂಡ ಜನಸಂಖ್ಯೆಗೆ ಅನುಗುಣವಾಗಿ ಪುನರ್‌ ವಿಂಗಡಣೆ ಮಾಡಬೇಕಿತ್ತು. ಆದರೆ ಬಿಜೆಪಿ ಶಾಸಕರು ಈ ಪುನರ್‌ವಿಂಗಡಣೆ ಕಾರ್ಯವನ್ನು ಮಾಡಿದ್ದಾರೆ. ಅವರ ಹಿತಾಸಕ್ತಿಗೆ ಅನುಗುಣವಾಗಿ ನ್ಯಾಯಯುತವಲ್ಲದ, ಜನವಿರೋಧಿ ರೀತಿಯಲ್ಲಿ ವಾರ್ಡ್‌ ಪುನರ್‌ವಿಂಗಡಣೆ ಮಾಡಿದ್ದಾರೆ’ ಎಂದು ದೂರಿದರು.

‘ವಾರ್ಡ್‌ ವಿಂಗಡಣೆಗೆ ಸಂಬಂಧಿಸಿದಂತೆ ನ್ಯಾಯಾಲಯ ಯಾವ ರೀತಿಯ ತೀರ್ಮಾನ ನೀಡುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು