ಶುಕ್ರವಾರ, ಮೇ 27, 2022
27 °C
ಎಸ್‌ಟಿಪಿ ನೀರಿನ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ ನಡೆಯುತ್ತಿದೆ ನಿಯಂತ್ರಣ ಕಾರ್ಯ

ಕೋವಿಡ್‌ ಮುನ್ಸೂಚನೆ ನೀಡುವ ಶೌಚನೀರು!

ಪ್ರವೀಣ್‌ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಯಾವ ಪ್ರದೇಶದಲ್ಲಿ ಕೋವಿಡ್‌ ಪ್ರಮಾಣ ಹೆಚ್ಚಾಗಲಿದೆ ಎಂಬ ಬಗ್ಗೆ ಮುನ್ಸೂಚನೆ ಪಡೆಯಲು ಬಿಬಿಎಂಪಿ ವಿನೂತನ ಕಾರ್ಯತಂತ್ರದ ಮೊರೆಹೋಗಿದೆ. ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕಗಳಲ್ಲಿ (ಎಸ್‌ಟಿಪಿ) ನೀರಿನ ಮಾದರಿಗಳನ್ನು ನಿರಂತರವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸುವ ಮೂಲಕ ಕೋವಿಡ್‌ ಪ್ರಮಾಣದ ಮಾಹಿತಿ ಪಡೆಯಲಾಗುತ್ತಿದೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ಪ್ರಾಂಗಣದಲ್ಲಿ (ಎನ್‌ಸಿಬಿಎಸ್‌) ಕಾರ್ಯನಿರ್ವಹಿಸುತ್ತಿರುವ ಟಾಟಾ ಇನ್‌ಸ್ಟಿಟ್ಯೂಟ್‌ ಫಾರ್‌ ಜೆನೆಟಿಕ್ಸ್‌ ಆ್ಯಂಡ್‌ ಸೊಸೈಟಿಯ (ಟಿಐಜಿಎಸ್‌) ವಾತಾವರಣ ಸರ್ವೇಕ್ಷಣೆ ಮತ್ತು ರೋಗ ಪರಿಸರ ವಿಜ್ಞಾನ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಫರಾ ಇಷ್ತಿಯಾಕ್ ವಿವರಿಸಿದರು.

‘ಮನುಷ್ಯನ ದೇಹದಲ್ಲಿ ಕೊರೊನಾ ವೈರಾಣು ಸೇರಿಕೊಂಡ ಏಳರಿಂದ ಹತ್ತು ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳದೆಯೂ ಇರಬಹುದು. ದೇಹದಲ್ಲಿ ಕೊರೊನಾ ವೈರಾಣು ಇದ್ದರೆ ಅದು ಶೌಚದ ಮೂಲಕ ಎಸ್‌ಟಿಪಿಗಳನ್ನು ಸೇರುತ್ತದೆ. ಅಂತಹ ನೀರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಿ ಕೊರೊನಾ ವೈರಾಣುವಿನ ಅಸ್ತಿತ್ವವನ್ನು ಖಚಿತವಾಗಿ ತಿಳಿದುಕೊಳ್ಳಬಹುದು’ ಎಂದು ಡಾ.ಫರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರ್ದಿಷ್ಟ ಪ್ರದೇಶದ ಎಸ್‌ಟಿಪಿಯ ಸಂಸ್ಕರಣೆಗೊಳಪಡುವ ಮುನ್ನ ನೀರಿನಲ್ಲಿ ಕೊರೊನಾ ವೈರಾಣುಗಳ ಸಾಂದ್ರತೆ ಹೆಚ್ಚಾಗಿ ಕಂಡು ಬಂದರೆ, ಅದು ಆ ಪರಿಸರದಲ್ಲಿ ರೋಗ ಹರಡುತ್ತಿರುವುದರ ಮುನ್ಸೂಚನೆ. ಅಂತಹ ವಾರ್ಡ್‌ಗಳಲ್ಲಿ ಬಿಬಿಎಂಪಿ ಕೋವಿಡ್‌ ಪರೀಕ್ಷೆ ಹೆಚ್ಚಿಸಬಹುದು. ನಗರದ ಪ್ರತಿಯೊಂದು ಎಸ್‌ಟಿಪಿಯ ನೀರಿನ ಮಾದರಿಗಳನ್ನು ನಿರಂತರವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸುವ ಮೂಲಕ ರೋಗ ಹರಡುವಿಕೆ ಮೇಲೆ ಸುಲಭವಾಗಿ ನಿಗಾ ಇಡಬಹುದು’ ಎಂದು ಅವರು ವಿವರಿಸಿದರು. 

‘ನಗರದ 28 ಎಸ್‌ಟಿಪಿಗಳಿಂದ ವಾರದಲ್ಲಿ ಎರಡು ದಿನ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸುತ್ತಿದ್ದೇವೆ. ‘ಸ್ವಸ್ತಿ– ದಿ ಹೆಲ್ತ್‌ ಕೆಟಲಿಸ್ಟ್‌’ ಸಂಸ್ಥೆಯವರು ರಾಜಕಾಲುವೆಗಳಲ್ಲಿ 46 ಕಡೆ ನೀರಿನ ಮಾದರಿ ಸಂಗ್ರಹಿಸಿ ಒಂದು ವರ್ಷದಿಂದ ಈ ಕಾರ್ಯವನ್ನು ನಡೆಸುತ್ತಿದ್ದೇವೆ. ನಗರದ ಶೇ 80ರಷ್ಟು ಜನರಿಗೆ ಸಂಬಂಧಿಸಿದ ಕೋವಿಡ್‌ ಮಾಹಿತಿ ಇದರಿಂದ ಕಲೆಹಾಕಬಹುದು. ಎನ್‌ಸಿಬಿಎಸ್‌, ಸ್ವಸ್ತಿ, ಬಯೋಮ್‌ ಪರಿಸರ ಟ್ರಸ್ಟ್‌ನಂತಹ ಸಂಸ್ಥೆಗಳು ಪ್ರಿಸಿಷನ್‌ ಹೆಲ್ತ್‌ ಸಂಸ್ಥೆಯಡಿ ಜಲಮಂಡಳಿ ಮತ್ತು ಬಿಬಿಎಂಪಿ ಸಹಕಾರದಿಂದ ಈ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿವೆ’ ಎಂದು ಅವರು ಮಾಹಿತಿ ನೀಡಿದರು.  

‘ಕೋವಿಡ್‌ ಪರೀಕ್ಷೆಯ ದತ್ತಾಂಶವನ್ನು ಸುಲಭವಾಗಿ ಅರ್ಥೈಸಲು ಡ್ಯಾಶ್‌ಬೋರ್ಡ್‌ಗಳನ್ನು ನಿರ್ವಹಿಸುತ್ತಿದ್ದೇವೆ. ನೀರಿನ ಮಾದರಿ ಸಂಗ್ರಹಿಸಿದ ಮರುದಿನವೇ ಡಾ.ಸಂಜಯ್‌ ಲಾಂಬಾ ನೇತೃತ್ವದಲ್ಲಿ ಸಚಿತ್ರ ದತ್ತಾಂಶಗಳ ವರದಿ ಸಿದ್ಧಪಡಿಸಲಾಗುತ್ತಿದೆ. ಸೋಂಕು ವ್ಯಾಪಿಸುವ ಅಪಾಯದ ಮುನ್ಸೂಚನೆಯನ್ನೂ ಅರ್ಥೈಸಲು ಇದು ಸಹಕಾರಿ. ಇದನ್ನು ಸಾರ್ವಜನಿಕವಾಗಿಯೂ ಹಂಚಿಕೊಳ್ಳುತ್ತಿದ್ದೇವೆ’ ಎಂದರು.

‘ಹೊಸ ರೂಪಾಂತರಿಯ ಸುಳಿವು’

‘ಎಸ್‌ಟಿಪಿ ನೀರಿನ ಮಾದರಿಯಲ್ಲಿ ಕಂಡುಬರುವ ವೈರಾಣುಗಳ ಸಾಂದ್ರತೆಯ ಮೇಲೆ ನಿಗಾ ಇಡುವುದರ ಜೊತೆಗೆ ಅವುಗಳ ವಂಶವಾಹಿ ಸಂರಚನಾ ವಿಶ್ಲೇಷಣೆಯನ್ನೂ (ಜೀನೋಮ್‌ ಸೀಕ್ವೆನ್ಸಿಂಗ್‌) ನಡೆಸುತ್ತೇವೆ. ನೀರಿನ ಮಾದರಿಗಳನ್ನು ನಿರಂತರವಾಗಿ ಹಾಗೂ ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸುವುದು ಕೋವಿಡ್‌ ನಿಯಂತ್ರಣಕ್ಕೆ ಅತ್ಯಂತ ಸುರಕ್ಷಿತ ವಿಧಾನ. ಹೊಸ ಅಲೆ ಹಾಗೂ ರೂಪಾಂತರಿಗಳ ಬಗ್ಗೆ ಮುನ್ಸೂಚನೆ ‍ಪಡೆಯುವ ಅತ್ಯುತ್ತಮವಾದ ಹಾಗೂ ಅಗ್ಗದ ಮಾದರಿ ಇದು. ನಿರ್ದಿಷ್ಟ ಅವಧಿಯಲ್ಲಿ ಓಮೈಕ್ರಾನ್‌ ಜಾಸ್ತಿ ಆಗಿದೆಯಾ, ಡೆಲ್ಟಾ ಜಾಸ್ತಿ ಇದೆಯೇ ಎಂಬುದೂ ಗೊತ್ತಾಗುತ್ತದೆ. ಪ್ರಪಂಚದ ಯಾವುದೋ ಪ್ರದೇಶ ಹೊಸ ರೂಪಾಂತರಿ ಪತ್ತೆಯಾದರೆ, ಅದು ಇಲ್ಲೂ ಕಾಣಿಸಿಕೊಂಡಿದೆಯೇ ಎಂಬುದನ್ನೂ ತಿಳಿಯಬಹುದು’ ಎಂದು ಡಾ.ಫರಾ ಇಷ್ತಿಯಾಕ್‌ ವಿವರಿಸಿದರು.

‘ಜನರನ್ನು ನೇರವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸದೆಯೂ ಈ ಕಾಯಿಲೆ ಹರಡುತ್ತಿರುವ ಬಗ್ಗೆ ನಿಗಾ ಇಡುವುದು ಈ ಕಾರ್ಯವಿಧಾನದ ವಿಶೇಷತೆ. ಶೌಚನೀರಿನಲ್ಲಿರುವ ಕೊರೊನಾ ವೈರಸ್‌ಗಳ ಬಲಕುಗ್ಗಿರುತ್ತದೆ. ಅವುಗಳನ್ನು ವೈರಸ್‌ ಆರ್‌ಎನ್‌ಎಯ ಶೇಷ ಪದಾರ್ಥ ಎನ್ನಬಹುದು. ಅವುಗಳಿಂದ ರೋಗ ಹರಡುವುದಿಲ್ಲ’ ಎಂದರು.

ನಗರದಲ್ಲಿ ಕೊರೊನಾ ವೈರಾಣು ಸಾಂದ್ರತೆ ವಿವರ (ಎಸ್‌ಟಿಪಿ ನೀರಿನ ಮಾದರಿಗಳ ಪರೀಕ್ಷೆಯಲ್ಲಿ ಕಂಡು ಬಂದಿದ್ದು)

ವೈರಾಣು ಸಾಂದ್ರತೆ ದೈನಂದಿನ ಪ್ರಮಾಣ

2021ರ ಮೇ, ಜೂನ್, ಜುಲೈ, ಆಗಸ್ಟ್‌, ಸೆಪ್ಟೆಂಬರ್, ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌, 2022ರ ಜನವರಿ, ಫೆಬ್ರುವರಿ, ಮಾರ್ಚ್‌, ಏಪ್ರಿಲ್‌

2000, 4000, 6000, 8000, 10,000, 12,000, 14,000, 16,000, 18,000, 20,000, 22,000.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು