ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಭ್ರಷ್ಟಾಚಾರ: ವಾಕ್ಸಮರ, ಮುಖ್ಯಮಂತ್ರಿ ಕಚೇರಿ ಕಡೆ ಬೊಟ್ಟು

₹7.40 ಕೋಟಿ ಲಂಚದ ಆರೋಪ
Last Updated 24 ಸೆಪ್ಟೆಂಬರ್ 2020, 19:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣದ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಭ್ರಷ್ಟಾಚಾರ ಪ್ರಕರಣ ವಿಧಾನ ಪರಿಷತ್‌ನಲ್ಲಿ ಗುರುವಾರ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯದ ವಾಕ್ಸಮರಕ್ಕೆ ಕಾರಣವಾಯಿತು.

ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದರು. ಅಲ್ಪಕಾಲ ವಿಷಯ ಪ್ರಸ್ತಾಪಿಸಲು ಸಭಾಪತಿ ಅವಕಾಶ ಕಲ್ಪಿಸಿದರು.

‘ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯಲ್ಲಿ ₹ 666.27 ಕೋಟಿ ವೆಚ್ಚದಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ಬಿಡಿಎ ನಡೆಸಿರುವ ಟೆಂಡರ್‌ನಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ’ ಎಂದು ಪಾಟೀಲ ಆರೋಪಿಸಿದರು.

ಮಧ್ಯ ಪ್ರವೇಶಿಸಿದ ಸಚಿವ ಸಿ.ಟಿ. ರವಿ, ಪಕ್ಷದ ಹೆಸರು ಉಲ್ಲೇಖಿಸದಂತೆ ಆಗ್ರಹಿಸಿದರು. ಕ್ರಿಯಾಲೋಪ ಎತ್ತಿದ ಬಿಜೆಪಿಯ ಆಯನೂರು ಮಂಜುನಾಥ್‌, ‘ಪ್ರಶ್ನೋತ್ತರ, ಶೂನ್ಯವೇಳೆಯ ಬಳಿಕವೇ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಬೇಕು’ ಎಂದು ಪಟ್ಟು ಹಿಡಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಿ.ಟಿ. ರವಿ, ಎನ್‌. ರವಿಕುಮಾರ್‌, ತೇಜಸ್ವಿನಿಗೌಡ, ಭಾರತಿ ಶೆಟ್ಟಿ ಸೇರಿ ಬಿಜೆಪಿಯ ಸದಸ್ಯರು ಇದಕ್ಕೆ ದನಿಗೂಡಿಸಿದರು. ಇದು ಕೆಲಕಾಲ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು.

ಕೋವಿಡ್‌ ಕಾರಣದಿಂದ ಕಲಾಪದ ಕಾರ್ಯಸೂಚಿಯಲ್ಲಿ ಬದಲಾವಣೆ ತಂದಿದ್ದು, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ಎಂ. ನಾರಾಯಣಸ್ವಾಮಿ, ಎಸ್‌. ರವಿ, ಪಿ.ಆರ್‌. ರಮೇಶ್‌, ನಜೀರ್‌ ಅಹಮ್ಮದ್‌, ಪ್ರಕಾಶ್‌ ರಾಥೋಡ್‌, ಜೆಡಿಎಸ್‌ನ ಮರಿತಿಬ್ಬೇಗೌಡ ಆಗ್ರಹಿಸಿದರು.

‘ಭ್ರಷ್ಟಾಚಾರದ ಆರೋಪಕ್ಕೆ ಉತ್ತರ ನೀಡಲು ಹೆದರಿರುವ ಬಿಜೆಪಿ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ’ ಎಂದು ಪ್ರತಿಪಕ್ಷಗಳ ಸದಸ್ಯರು ದೂರಿದರು.

ಎಸ್‌ಐಟಿ ತನಿಖೆಗೆ ಆಗ್ರಹ: ‘ಗುತ್ತಿಗೆದಾರರು ಮತ್ತು ಕೆಲವು ವ್ಯಕ್ತಿಗಳ ನಡುವೆ ವಾಟ್ಸ್‌ ಆ್ಯಪ್‌ ಸಂಭಾಷಣೆ, ದೂರವಾಣಿ ಮಾತುಕತೆ ಹಾಗೂಹಣ ವರ್ಗಾವಣೆಗೆ ಸಂಬಂಧಿಸಿದ ಬ್ಯಾಂಕ್‌ ದಾಖಲೆಗಳು ನಮ್ಮ ಬಳಿ ಇವೆ. ಶಶಿಧರ ಮರಡಿ ಬ್ಯಾಂಕ್‌ ಖಾತೆಗೆ ಕೋಲ್ಕತ್ತಾದ ಏಳು ಕಂಪನಿಗಳಿಂದ ₹ 7.40 ಕೋಟಿ ಸಂದಾಯವಾಗಿದೆ. ಬಿಡಿಎ ಹಿಂದಿನ ಆಯುಕ್ತರು ₹ 12 ಕೋಟಿ ಪಡೆದಿದ್ದಾರೆ. ಮುಖ್ಯಮಂತ್ರಿ ಕಚೇರಿಯ ಸಿಬ್ಬಂದಿ, ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಇದೆ. ಈ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು’ ಎಂದು ಪಾಟೀಲ ಆಗ್ರಹಿಸಿದರು.

ಸರ್ಕಾರದ ವಿರುದ್ಧ ಕಾಂಗ್ರೆಸ್‌ ‘ಅವಿಶ್ವಾಸ’: ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಗುರುವಾರ ಅವಿಶ್ವಾಸ ನಿರ್ಣಯ ಮಂಡಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ನಿಯಮ 167ರಡಿ ನೋಟಿಸ್‌ ನೀಡಿ ಈ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ,‘ಬಿಜೆಪಿ ಸರ್ಕಾರ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ’ ಎಂದರು.

‘ಈ ಪ್ರಸ್ತಾಪಕ್ಕೆ ಸದನದ ಶೇ 10ರಷ್ಟು ಸದಸ್ಯರ ಬೆಂಬಲ ಬೇಕು’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಆಗ ಕಾಂಗ್ರೆಸ್‌ ಸದಸ್ಯರು ಎದ್ದು ನಿಂತು ಬೆಂಬಲ ಸೂಚಿಸಿದರು. ‘ಈ ಬಗ್ಗೆ ಚರ್ಚೆಗೆ ನಾಳೆ ಅಥವಾ ನಾಡಿದ್ದು ಅವಕಾಶ ನೀಡುತ್ತೇನೆ’ ಎಂದು ಕಾಗೇರಿ ಹೇಳಿದರು.

‘ವಿಶ್ವಾಸಮತ ಸಾಬೀತುಪಡಿಸುವವರೆಗೆ ಯಾವುದೇ ಮಸೂದೆಗಳನ್ನು ಮಂಡಿಸಬಾರದು. ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವರು ರಾಜೀನಾಮೆ ಕೊಡಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಸಚಿವ ಆರ್‌.ಅಶೋಕ, ಎಂ.ಪಿ.ರೇಣುಕಾಚಾರ್ಯ ಮತ್ತಿತರರು, ‘ಸರ್ಕಾರಕ್ಕೆ ಸಂಪೂರ್ಣ ಬಹುಮತ ಇದೆ. ಕಾಂಗ್ರೆಸ್‌ನ ಹಲವು ಮಂದಿ ನಮ್ಮ ಪಕ್ಷ ಸೇರಿದ್ದಾರೆ. ಅವಿಶ್ವಾಸ ನಿರ್ಣಯ ರಾಜಕೀಯ ಗಿಮಿಕ್‌’ ಎಂದರು.

‘ನಿಮ್ಮ ಅನೇಕ ಶಾಸಕರಿಗೆ ಸರ್ಕಾರದ ಮೇಲೆ ಅಸಮಾಧಾನ ಇದೆ. ಅವರು ನಮ್ಮ ಪರ ಮತ ಚಲಾಯಿಸಲಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು. ಆಗ ಬಿಜೆಪಿಯ ಅನೇಕ ಶಾಸಕರು ಎದ್ದು ನಿಂತು ‘ಇಲ್ಲ, ಇಲ್ಲ‘ ಎಂದರು.

**
ಗುತ್ತಿಗೆ ನೀಡಲು ಲಂಚ ಪಡೆದಿರುವುದಕ್ಕೆ ಎಲ್ಲ ದಾಖಲೆಗಳೂ ಇವೆ. ಅಧಿಕಾರಿಯನ್ನು ವರ್ಗಾವಣೆ ಮಾಡಿದರೆ ಸಾಕೆ? ಎಫ್‌ಐಆರ್‌ ಏಕೆ ದಾಖಲಿಸಿಲ್ಲ? ಏಕೆ ಗುತ್ತಿಗೆ ರದ್ದು ಮಾಡಿಲ್ಲ.
–ಎಸ್‌.ಆರ್‌.ಪಾಟೀಲ, ವಿರೋಧ ಪಕ್ಷದ ನಾಯಕ
**
ಭ್ರಷ್ಟಾಚಾರಿಗಳನ್ನು ಕಾಂಗ್ರೆಸ್‌, ಬಿಜೆಪಿ ಎಂದು ವಿಂಗಡಿಸಬಾರದು. ಗಂಗಾಕಲ್ಯಾಣ ಪ್ರಕರಣದಲ್ಲಿ ತೆಗೆದುಕೊಂಡ ನಿಲುವು ಇಲ್ಲೂ ಅನ್ವಯವಾಗಲಿ‌.
–ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್‌ ಸದಸ್ಯ

**
ಚರ್ಚೆಗೆ ಹೆದರಿ ಓಡಿಹೋಗುವುದಿಲ್ಲ. ವೃಥಾ ಆರೋಪ ಬೇಡ. ಸದನದ ನಿಯಮಗಳನ್ನು ಉಲ್ಲಂಘಿಸಬೇಡಿಆಯನೂರು ಮಂಜುನಾಥ್‌, ಬಿಜೆಪಿ ಸದಸ್ಯ ಚರ್ಚೆಗೆ ಹೆದರಿ ಓಡಿಹೋಗುವುದಿಲ್ಲ. ವೃಥಾ ಆರೋಪ ಬೇಡ. ಸದನದ ನಿಯಮಗಳನ್ನು ಉಲ್ಲಂಘಿಸಬೇಡಿ.
–ಆಯನೂರು ಮಂಜುನಾಥ್‌ ಬಿಜೆಪಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT