ಮಂಗಳವಾರ, ಮಾರ್ಚ್ 21, 2023
28 °C
ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ

ಬೆಳಗಾವಿ ಟು ಕನಕಪುರ ಸಿ.ಡಿ ಫ್ಯಾಕ್ಟರಿ ಇರುವುದು ಇಲ್ಲಿಯೇ: ಲಖನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ(ಬೆಳಗಾವಿ ಜಿಲ್ಲೆ): ‘ಕೆಪಿಸಿಸಿ ಅಧ್ಯಕ್ಷರೆಂದರೆ ಕರ್ನಾಟಕ ಪ್ರದೇಶ ಸಿ.ಡಿ ಕಮಿಟಿ ಅಧ್ಯಕ್ಷರಿದ್ದಂತೆ’ ಎಂದು ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ವಿರುದ್ಧ ವ್ಯಂಗ್ಯವಾಡಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ ಹಾಗೂ ಯುವತಿ ಸಿ.ಡಿ ಪ್ರಕರಣ ಸಿಬಿಐನಿಂದ ತನಿಖೆಯಾಗಬೇಕು. ಆಗ ಮಾತ್ರ ಎಲ್ಲಿ, ಯಾರು ಪ್ಯಾಂಟ್‌ ಮತ್ತು ಲುಂಗಿ ಬಿಚ್ಚಿದ್ದಾರೆ ಎಂಬುದು ತಿಳಿಯಲಿದೆ. ಲಂಚ ಮತ್ತು ಮಂಚದ ವಿಷಯ ಹೊರಬರಲಿದೆ’ ಎಂದರು.

‘ಬೆಳಗಾವಿ ಟು ಕನಕಪುರ ಸಿ.ಡಿ ಫ್ಯಾಕ್ಟರಿ ಇರುವುದು ಇಲ್ಲಿಯೇ. ಸಿ.ಡಿ. ಗಳು ಬೆಳಗಾವಿಯಲ್ಲಿ ತಯಾರಾಗಿ, ಕನಕಪುರದಲ್ಲಿ ಬಿಡುಗಡೆ ಆಗುತ್ತವೆ’ ಎಂದು ದೂರಿದರು.

‘ಯಾರು ತಮ್ಮೊಂದಿಗೆ ಶಾಮೀಲಾಗಿ ಕೆಲಸ ಮಾಡುತ್ತಾರೋ, ಅವರ ಬಗ್ಗೆ ಸುಮ್ಮನಿರುತ್ತಾರೆ. ಯಾರು ವಿರೋಧ ಮಾಡುತ್ತಾರೋ ಅವರ ಸಿ.ಡಿ ಬಿಡುಗಡೆಗೊಳಿಸುತ್ತಾರೆ’ ಎಂದು ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ರಮೇಶ ಜಾರಕಿಹೊಳಿ ಅವರ ಸಿ.ಡಿ ಪ್ರಕರಣದ ಹಿಂದೆ ಷಡ್ಯಂತ್ರವಿದೆ. ಹಲವು ವರ್ಷಗಳಿಂದ ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದೆ. ಚುನಾವಣೆ ಬಂದಾಗಂತೂ 6 ತಿಂಗಳು ಜೋರಾಗುತ್ತದೆ. ಆದರೆ, ಮತದಾರರು ಮತ್ತು ತಂದೆ–ತಾಯಿ ಆಶೀರ್ವಾದ ನಮ್ಮ ಜತೆಗಿದ್ದು, ಇಂತಹ ನೂರು ಸಿ.ಡಿ ಬಂದರೂ ನಾವು ಹೆದರುವುದಿಲ್ಲ’ ಎಂದರು.

ವೈಯಕ್ತಿಕ ಟೀಕೆ ಬೇಡ: ಬಾಲಚಂದ್ರ ಜಾರಕಿಹೊಳಿ

ಗೋಕಾಕ(ಬೆಳಗಾವಿ ಜಿಲ್ಲೆ): ‘ಸಿ.ಡಿ ಪ್ರಕರಣ ಮುಂದಿಟ್ಟುಕೊಂಡು ಸಹೋದರ ರಮೇಶ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಹಿರಂಗ ಚರ್ಚೆ, ವೈಯಕ್ತಿಕ ಟೀಕೆ ಮಾಡಬಾರದು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಬಗ್ಗೆ ರಮೇಶ ಅವರೊಂದಿಗೆ ಮಾತನಾಡುತ್ತೇನೆ. ಈ ವಿಚಾರವಾಗಿ ಹೇಳಿಕೆ ನೀಡಿದರೆ ಮೂರೂ ದೊಡ್ಡ ಕುಟುಂಬಗಳಿಗೆ ಹಾನಿ ಆಗುತ್ತದೆ. ಚುನಾವಣೆಗೆ ರಾಜಕೀಯವಾಗಿ ಹೋರಾಟ ಮಾಡೋಣ. ಆದರೆ, ಸಾರ್ವಜನಿಕವಾಗಿ ಕಿತ್ತಾಟ ಬೇಡ’ ಎಂದರು.

ಪಿತೂರಿ ಬಯಲಿಗೆಳೆಯಲು ರಮೇಶ ಮನವಿವಿ

ಬೆಂಗಳೂರು: ತಮ್ಮ ವಿರುದ್ಧದ ಸಿ.ಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಮಂಗಳವಾರ ಬೆಳಿಗ್ಗೆ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದ್ದಾರೆ. ತಮ್ಮ ರಾಜಕೀಯ ಭವಿಷ್ಯವನ್ನು ಮುಗಿಸುವ ದುರುದ್ದೇಶದಿಂದಲೇ ಸಿ.ಡಿ ಮಾಡಿ ಬಿಟ್ಟಿದ್ದಾರೆ. ಇದರ ಹಿಂದಿನ ಪಿತೂರಿದಾರರನ್ನು ಬಯಲಿಗೆಳೆಯಲು ಸಿಬಿಐ ತನಿಖೆಯೇ ಆಗಬೇಕು ಮತ್ತು ಅವರನ್ನು ಜೈಲಿಗೆ ಹಾಕಬೇಕೆಂದು ಒತ್ತಾಯಿಸಿರುವುದಾಗಿ ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು