ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗಲಭೆ: ಮ್ಯಾಜಿಸ್ಟೀರಿಯಲ್ ತನಿಖೆ

ಶಾಸಕರ ಮನೆಗೆ ಬೆಂಕಿ ಇಟ್ಟ ಪ್ರಕರಣ * ಠಾಣೆಗೆ ನುಗ್ಗಿ ಗಲಾಟೆ ಯತ್ನ
Last Updated 12 ಆಗಸ್ಟ್ 2020, 21:16 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಇಸ್ಲಾಂ ಧರ್ಮ ಸ್ಥಾಪಕರಾದ ಪ್ರವಾದಿ ಮಹಮ್ಮದ್‌ ಪೈಗಂಬರ್‌ ಅವರ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದನ್ನು ಪ್ರತಿಭಟಿಸಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಮತ್ತು ಕಾವಲ್‌ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ಮತ್ತು ಗೋಲಿಬಾರ್‌ ಪ್ರಕರಣವನ್ನು ಮ್ಯಾಜಿಸ್ಟೀರಿಯಲ್‌ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಗಲಭೆ ಹಾಗೂ ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದ ಕಿಡಿಗೇಡಿಗಳನ್ನು ನಿರ್ಬಂಧಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿಮೂವರು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 145 ಜನರನ್ನು ಬಂಧಿಸಲಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ಬುಧವಾರ ಸಂಜೆ ನಡೆಯಿತು. ಜಿಲ್ಲಾ ಮಾಜಿಸ್ಟ್ರೇಟ್ (ಜಿಲ್ಲಾಧಿಕಾರಿ ಶ್ರೇಣಿಯ)‌ ಅವರಿಂದ ತನಿಖೆ ನಡೆಸಲು ತೀರ್ಮಾನಿಸಲಾಯಿತು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ, ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿ ಅನ್ವಯ ಜಿಲ್ಲಾಮಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಗಲಭೆ, ದೊಂಬಿ ಮತ್ತು ಆ ಹಿನ್ನೆಲೆಯಲ್ಲಿ ಪೊಲೀಸರು ತೆಗೆದುಕೊಂಡ ಕ್ರಮಗಳ ಬಗ್ಗೆ ತನಿಖೆ ನಡೆಯಲಿದೆ’ ಎಂದರು.

ಗಲಭೆಕೋರರಿಂದಲೇ ದಂಡ ವಸೂಲಿ: ಮುಖ್ಯಮಂತ್ರಿಗಳ ಜತೆಗಿನ ಸಭೆಗೂ ಮೊದಲೇ ಗೃಹ ಇಲಾಖೆ ಹಿರಿಯ‌ ಅಧಿಕಾರಿಗಳೊಂದಿಗೆ ಬೊಮ್ಮಾಯಿ ಸಭೆ ನಡೆಸಿದರು.

‘ಈ ಗಲಭೆಯಲ್ಲಿ ಅಪಾರ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿ–ಪಾಸ್ತಿಗೆ ಹಾನಿ ಆಗಿದೆ. ಆ ನಷ್ಟವನ್ನು ಗಲಭೆಕೋರರಿಂದಲೇ ಭರಿಸಲಾಗುವುದು. ಸರ್ಕಾರಗಳು ಗಲಭೆಕೋರರಿಂದಲೇ ದಂಡ ವಸೂಲಿ ಮೂಲಕ ನಷ್ಟ ತುಂಬಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹೀಗಾಗಿ ಇದಕ್ಕೆ ಪ್ರತ್ಯೇಕ ಕಾನೂನು ಬೇಕಿಲ್ಲ’ ಎಂದು ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

ರಾತ್ರಿ ನಡೆದ ಗಲಭೆಯ ಕುರಿತು ಬೆಳಿಗ್ಗೆ ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್ ಪಂತ್‌, ಆ ಬಳಿಕ ರಾಜ್ಯ ಪೊಲೀಸ್‌ ಮಹಾ
ನಿರ್ದೇಶಕ ಪ್ರವೀಣ್‌ ಸೂದ್‌ ಅವರು ಮುಖ್ಯಮಂತ್ರಿಯವರಿಗೆ ಸಮಗ್ರ ಮಾಹಿತಿ ನೀಡಿದರು.

‘ಈ ಗಲಭೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುವುದರ ಜತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಗಲಭೆಯನ್ನು ನಿಯಂತ್ರಣಕ್ಕೆ ತರಬೇಕು. ಕಠಿಣ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಬೇಕು. ಅಲ್ಲದೆ, ಸ್ಥಳೀಯ ಮುಸ್ಲಿಂ ಮುಖಂಡರ ಜತೆಗೂ ಮಾತುಕತೆ ನಡೆಸಬೇಕು’ ಎಂದೂ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು.

ನನ್ನ ಹತ್ಯೆ ಸಂಚು ನಡೆದಿತ್ತು: ಶಾಸಕ ಅಖಂಡ
‘ಮಂಗಳವಾರ ರಾತ್ರಿ ಸುಮಾರು ನಾಲ್ಕು ಸಾವಿರ ಜನರು ನನ್ನ ಮನೆ ಮೇಲೆ ದಾಳಿ ಮಾಡಿದ್ದಾರೆ. ಪೆಟ್ರೋಲ್ ‌ಬಾಂಬ್ ಬಳಸಿ ಬೆಂಕಿ ಹಚ್ಚುವ ಕೃತ್ಯ ಮಾಡಿದ್ದಾರೆ. ಚಿನ್ನಾಭರಣ ಲೂಟಿ ಮಾಡಿದ್ದಾರೆ. ನಾನು ಹುಟ್ಟಿ ಬೆಳೆದ ಮನೆಯನ್ನು ಸುಟ್ಟು‌ ಹಾಕಿದ್ದಾರೆ. ನನ್ನ ಹತ್ಯೆಗೆ ನಡೆದ ಸಂಚಿದು’ ಎಂದು ಹೇಳುತ್ತಾ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ದುಃಖಿತರಾದರು.

‘ಘಟನೆ ಬಗ್ಗೆ ಸಿಬಿಐ, ಸಿಐಡಿ ಸೇರಿದಂತೆ ಯಾವುದೇ ತನಿಖೆ ನಡೆಸಲಿ. ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆಯಾಗಬೇಕು. ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ನವೀನ್ ನನ್ನ ಅಕ್ಕನ ಮಗ. 10 ವರ್ಷಗಳಿಂದ ನಮಗೂ ಅವನಿಗೂ ಯಾವುದೇ ಸಂಪರ್ಕವಿಲ್ಲ. ಘಟನೆಯ ಹಿಂದೆ ಯಾರೇ ಇದ್ದರೂ ಶಿಕ್ಷೆಯಾಗಬೇಕು’ ಎಂದು ಅವರು ಆಗ್ರಹಿಸಿದರು.

‘ಎಸ್‌ಡಿಪಿಐ, 3 ಕಾರ್ಪೊರೇಟರ್‌ಗಳ ಕೈವಾಡ?’
‘ಗಲಭೆಯಲ್ಲಿ ಎಸ್‌ಡಿಪಿಐ ಹಾಗೂ ಮೂವರು ಕಾರ್ಪೊರೇಟರ್‌ಗಳ ಕೈವಾಡ ಇದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಅವರು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಜತೆ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಮುಖ್ಯಮಂತ್ರಿಯವರ ದೂರವಾಣಿ ಕರೆ ಬಂದಿತು. ಆಗ ಅಶೋಕ ಅವರು ‘ಶ್ರೀನಿವಾಸಮೂರ್ತಿ ನನ್ನ ಜತೆ ಇದ್ದಾರೆ. ಈ ಗಲಭೆಯಲ್ಲಿ ಎಸ್‌ಡಿಪಿಐ ಮತ್ತು 3 ಕಾರ್ಪೊರೇಟರ್‌ಗಳ ಕೈವಾಡ ಇದೆಯೆಂಬ ಮಾಹಿತಿ ನೀಡಿದ್ದಾರೆ’ ಎಂದು ಸಿ.ಎಂಗೆ ತಿಳಿಸಿದರು.

ಗಲಭೆ ಆಗಿದ್ದು ಹೇಗೆ
ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗ ನವೀನ್,‌ ಫೇಸ್‌ಬುಕ್‌ನಲ್ಲಿ ತಮ್ಮ ಧರ್ಮದ ಪ್ರವಾದಿ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ್ದಾರೆ ಎಂದು ಆರೋಪಿಸಿದ ಮುಸ್ಲಿಂ ಸಮುದಾಯದವರು, ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸುವ ಭರವಸೆ ನೀಡಿದರು. ದೊಡ್ಡ ಸಂಖ್ಯೆಯಲ್ಲಿದ್ದ ಒಂದು ಗುಂಪು ಪೊಲೀಸ್‌ ಸಿಬ್ಬಂದಿಯನ್ನು ಠಾಣೆಯಲ್ಲಿ ಕೂಡಿ ಹಾಕಿತು. ಇನ್ನು ಕೆಲವು ಗುಂಪುಗಳು ಶಾಸಕರ ಎರಡು ಮನೆಗಳ ಮನೆ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದರು. ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದ ಗಲಭೆಕೋರರನ್ನು ಚದು‌ರಿಸಲು ಪೊಲೀಸರು ಗುಂಡು ಹಾರಿಸಿದಾಗ ಮೂವರು ಮೃತಪಟ್ಟರು.

ದೇಗುಲಕ್ಕೆ ಮುಸ್ಲಿಂ ಯುವಕರ ಕಾವಲು
ಕಾವಲ್‌ಭೈರಸಂದ್ರದಲ್ಲಿ ಗಲಭೆ ನಡೆಯುತ್ತಿರುವಾಗಲೇ ಹಲವು ಮುಸ್ಲಿಂ ಯುವಕರು ಆಂಜನೇಯ ದೇವಸ್ಥಾನಕ್ಕೆ ಕಾವಲಾಗಿ ನಿಂತು ಆ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಯುವಕರ ಸೌಹಾರ್ದ ನಡೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ಆಗಿದ್ದೇನು?: ಡಿ.ಜೆ.ಹಳ್ಳಿ ಠಾಣೆ ಎದುರು ಗಲಾಟೆ ನಡೆಸಿ ವಾಹನಗಳಿಗೆ ಬೆಂಕಿ ಹಚ್ಚಿದ್ದ ಜನರು, ಅಲ್ಲಿಂದ ಕಾವಲ್‌ಭೈರಸಂದ್ರದತ್ತ ಬಂದಿದ್ದರು. ಪೊಲೀಸರು ಬೆನ್ನಟ್ಟಿದ್ದರಿಂದ ಕೆಲವರು ಅಂಗಡಿಗಳಲ್ಲಿ ಬಚ್ಚಿಟ್ಟುಕೊಳ್ಳಲು ಮುಂದಾಗಿದ್ದರು.

ಕಾವಲ್‌ಭೈರಸಂದ್ರದಲ್ಲೂ ಗುಂಪೊಂದು ದೇವಸ್ಥಾನದೊಳಗೆ ಹೋಗಲು ಬಂದಿತ್ತು. ಸ್ಥಳೀಯ ಮುಸ್ಲಿಂ ಯುವಕರು ದೇವಸ್ಥಾನದ ಸುತ್ತ ಮಾನವ ಸರಪಳಿ ನಿರ್ಮಿಸಿದರು. ‘ದೇವಸ್ಥಾನದ ಒಳಗೆ ಹೋಗಲು ಬಿಡುವುದಿಲ್ಲ. ಇದನ್ನು ನಾವು ರಕ್ಷಿಸುತ್ತೇವೆ’ ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದರು. ಬುಧವಾರ ನಸುಕಿನವರೆಗೂ ಯುವಕರು, ದೇವಸ್ಥಾನಕ್ಕೆ ರಕ್ಷಣೆ ನೀಡಿದರು.

**
ಈ ಘಟನೆ ಅಕ್ಷಮ್ಯ. ಇಂಥ ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ.
–ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

**
ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸೆಮೂಲಕ ಪ್ರತಿಕ್ರಿಯಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು.
–ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

**
ಫೇಸ್‌ಬುಕ್‌ನಲ್ಲಿ ಗಲಭೆಗೆ ಕರೆಕೊಟ್ಟು ದಾಳಿ ನಡೆಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡಿಸುವ ಷಡ್ಯಂತ್ರವಿದು.
–ಬಸವರಾಜ ಬೊಮ್ಮಾಯಿ, ಗೃಹ ಸಚಿವ

**
ಘಟನೆಯ ಹೊಣೆಯನ್ನು ಪೊಲೀಸರು ಹೊರಬೇಕು. ವಸ್ತುಸ್ಥಿತಿ ತಿಳಿಯಲು ಪಕ್ಷದಿಂದ ಶಾಸಕ ಜಿ. ಪರಮೇಶ್ವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದ್ದೇನೆ.
–ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

**
ಯಾವುದೇ ಧರ್ಮದವರು ಕಾನೂನಿಗೆ ಅತೀತರಲ್ಲ. ಧರ್ಮದ ಹೆಸರಿನಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂಥವರನ್ನು ಮುಲಾಜಿಲ್ಲದೆ ಮಟ್ಟ ಹಾಕಬೇಕು.
–ಎಚ್‌.ಡಿ. ಕುಮಾರಸ್ವಾಮಿ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

**
ಘಟನೆಗೆ ಕಾರಣನಾದ ವ್ಯಕ್ತಿ ಮೇಲೆ ಈಗಾಗಲೇ ಎಫ್‌ಐಆರ್‌ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತನಿಗೆ ಶಿಕ್ಷೆ ಆಗಬೇಕು. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು.
–ಜಮೀರ್‌ ಅಹ್ಮದ್‌ಖಾನ್‌, ಕಾಂಗ್ರೆಸ್ ಶಾಸಕ, ಚಾಮರಾಜಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT