ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಸ್ಕ್‌, ಜೆಸ್ಕಾಂ: ಕಾಯ್ದೆ ಉಲ್ಲಂಘಿಸಿ ಟೆಂಡರ್

ಸೆಸ್ಕ್‌, ಜೆಸ್ಕಾಂ: ಕೃಷಿ ಪಂಪ್‌ಸೆಟ್‌ಗಳ ಸಕ್ರಮ ಕಾಮಗಾರಿಗೆ ‘ಅಕ್ರಮ’ ದಾರಿ?
Last Updated 1 ಅಕ್ಟೋಬರ್ 2021, 18:53 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕ್‌) ಮತ್ತು ಕಲಬುರ್ಗಿಯ ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ) ವ್ಯಾಪ್ತಿಯಲ್ಲಿ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಕರೆದಿರುವ ಟೆಂಡರ್‌ಗಳಲ್ಲಿ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ.

ಮೈಸೂರಿನ ಸೆಸ್ಕ್‌ ₹266.81 ಕೋಟಿ ಮೊತ್ತದ 24 ಟೆಂಡರ್‌ಗಳು ಮತ್ತು ಜೆಸ್ಕಾಂ ₹53.79 ಕೋಟಿ ಮೊತ್ತದ 9 ಟೆಂಡರ್‌ಗಳನ್ನು ಕರೆದಿದ್ದು ಎರಡರಲ್ಲೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆಯ (ಕೆಟಿಪಿಪಿ) ಉಲ್ಲಂಘನೆ ಆಗಿದೆ.

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2020 ರ ಫೆಬ್ರುವರಿಯಲ್ಲಿ ಹೊರಡಿಸಿರುವ ಆದೇಶದಲ್ಲಿ, ವಿದ್ಯುತ್‌ ಮೂಲ ಸೌಕರ್ಯವನ್ನು ಸೃಷ್ಟಿಸುವ ಉದ್ದೇಶದಿಂದ ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳು, ರಸ್ತೆ, ಸೇತುವೆ, ಕಟ್ಟಡಗಳು, ಇತರ ರಚನೆಗಳನ್ನು ಕೆಡಹುವುದು, ಉಕ್ಕಿನ ರಚನೆಗಳ ನಿರ್ಮಾಣವೂ ಸೇರಿ ಎಲ್ಲ ರೀತಿಯ ಸಿವಿಲ್‌ ಕಾಮಗಾರಿಗಳಿಗೂ ಕೆಟಿಪಿಪಿ ಕಾಯ್ದೆ ಅನ್ವಯವಾಗುತ್ತದೆ. ಎಲ್ಲ ಎಸ್ಕಾಂಗಳೂ ಕೆಟಿಪಿಪಿ ಕಾಯ್ದೆ ಕಲಂ 2 (ಡಿ) ಅಡಿ ಸಂಗ್ರಹಣಾ ಸಂಸ್ಥೆಯಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಆದರೆ, ಮೈಸೂರಿನ ಸೆಸ್ಕ್‌ 2020 ರ ಜೂನ್‌ನಲ್ಲಿ ಕರೆದ ಟೆಂಡರ್‌ ಮತ್ತು ಜೆಸ್ಕಾಂ 2021 ರ ಜುಲೈನಲ್ಲಿ ಕರೆದ ಟೆಂಡರ್‌ನಲ್ಲಿ ಕೆಟಿಪಿಪಿ ಕಾಯ್ದೆಯ ಕೆಲವು ಅಂಶಗಳನ್ನು ಉಲ್ಲೇಖಿಸಿಲ್ಲ. ಇದು ಕೆಲವು ಗುತ್ತಿಗೆದಾರರಿಗೆ ಮಾತ್ರ ಅನುಕೂಲ ಮಾಡಿಕೊಡಲು ಅಡ್ಡ ದಾರಿ ಹಿಡಿದಿರುವ ಸಾಧ್ಯತೆ ಇದೆ ಎಂಬುದಾಗಿ ಅಸಮಾಧಾನಗೊಂಡಿರುವ ಗುತ್ತಿಗೆದಾರರು ಆರೋಪಿಸಿದ್ದಾರೆ.

ಕೈ ಬಿಟ್ಟ ಕೆಲ ಅಂಶಗಳು: ಟೆಂಡರ್‌ನಲ್ಲಿ ಗುತ್ತಿಗೆ ಕಂಪನಿಗಳು ಜಂಟಿಯಾಗಿ ಭಾಗವಹಿಸುವಂತಿಲ್ಲ ಎಂಬ ಅಂಶ
ವನ್ನು ಕೈಬಿಡಲಾಗಿದೆ. ಅಲ್ಲದೆ, ಗುತ್ತಿಗೆ ಕಂಪನಿಗಳು ಆ ಕೆಲಸಗಳಲ್ಲಿ ಅನುಭವವನ್ನು ಹೊಂದಿರಬೇಕು ಮತ್ತು ಸಂಪನ್ಮೂಲ (ಆರ್ಥಿಕ ಸ್ಥಿತಿ) ಸಂಬಂಧಿಸಿ ದಂತೆ ನಿಗದಿ ಮಾಡಿದ ಮಾನದಂಡಕ್ಕೆ ಅನುಗುಣವಾಗಿ ಇರಬೇಕು ಎಂಬ ಅಂಶಗಳೂ ಸೇರಿಲ್ಲ.

ಟೆಂಡರ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರ ಕಳೆದ ಐದು ವರ್ಷಗಳ ಪೈಕಿ ಯಾವುದೇ ಒಂದು ವರ್ಷದಲ್ಲಿ ಕೈಗೊಂಡ ಸಿವಿಲ್‌ ಎಂಜಿನಿಯರಿಂಗ್‌ನ ಗರಿಷ್ಠ ವಹಿವಾಟಿನ ಮೊತ್ತ, ಪೂರ್ಣ ಗೊಂಡ ಕಾಮಗಾರಿ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿ ಮಾಹಿತಿ ನೀಡಬೇಕು ಎಂಬ ಅಂಶವನ್ನೂ ಕೈಬಿಡಲಾಗಿದೆ ಎಂದು ಮೂಲಗಳು ಹೇಳಿವೆ.

‘ಈ ಟೆಂಡರ್‌ನಲ್ಲಿ ರಾಜ್ಯ ಸರ್ಕಾರ ದಿಂದ ಲೈಸೆನ್ಸ್‌ ಪಡೆದಿರುವ ಕ್ಲಾಸ್‌–1ಎಲೆಕ್ಟ್ರಿಕ್‌ ಗುತ್ತಿಗೆದಾರರೇ ಭಾಗವಹಿಸ
ಬೇಕು. ಇವರಿಗೆ ಕನಿಷ್ಠ ಮೂರು ವರ್ಷ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು ಎಂಬ ನಿಯಮವೇನೋ ಇದೆ. ಆದರೆ, ಈ ಎರಡೂ ಕಂಪನಿಗಳಲ್ಲಿ ಅವುಗಳನ್ನು ಗಾಳಿಗೆ ತೂರಲಾಗಿದೆ. ಬೆಸ್ಕಾಂನಲ್ಲಿ ಕೆಟಿಪಿಪಿ ಕಾಯ್ದೆಯನ್ನು ಚಾಚೂ ತಪ್ಪದೆ ಪಾಲಿಸಲಾಗಿದೆ. ಈಗ ಬಿಡ್‌ದಾರರ ಮೌಲ್ಯಮಾಪನ ಪ್ರಕ್ರಿಯೆ ನಡೆಯುತ್ತಿದ್ದು, ನಮಗೂ ನ್ಯಾಯ ಒದಗಿಸಬೇಕು’ ಎಂದು ಕೆಲವು ಗುತ್ತಿಗೆದಾರರು ದೂರಿದ್ದಾರೆ.

ತಾಂತ್ರಿಕ ಸಮಿತಿ ನಿರ್ಧಾರವೇ ಅಂತಿಮ

‘ಟೆಂಡರ್‌ಗಳನ್ನು ವಿದ್ಯುತ್‌ ಕಂಪನಿಗಳ ನಿಯಮಗಳಿಗೆ ಅನುಸಾರವಾಗಿಯೇ ತಾಂತ್ರಿಕ ಸಮಿತಿಯೇ ಅಂತಿಮಗೊಳಿಸುತ್ತದೆ. ಒಂದು ವೇಳೆ ಯಾವುದೇ ವ್ಯತ್ಯಾಸಗಳಾಗಿದ್ದರೆ, ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

‘ಪ್ಯಾಕೇಜ್ ಟೆಂಡರ್‌ ಆಗಬಾರದು, ಹತ್ತಾರು ಜನರಿಗೆ ಗುತ್ತಿಗೆ ಹಂಚಿಕೆ ಮಾಡಿ ಕಾಮಗಾರಿ ನಡೆಸಬೇಕು ಎಂಬ ಕಾರಣಕ್ಕೆ ಆ ರೀತಿ ಮಾಡಿರಲೂಬಹುದು. ಈ ಪ್ರಕರಣವನ್ನು ಪರಿಶೀಲಿಸುತ್ತೇನೆ’ ಎಂದು ಹೇಳಿದರು.

‘ದೂರು ಸಲ್ಲಿಸಿದರೆ ತನಿಖೆ ನಡೆಸಿ ಕ್ರಮ’

‘ಕಾಯ್ದೆಯ ಪ್ರಕಾರವೇ ಟೆಂಡರ್‌ ಕರೆಯಲಾಗಿದೆ. ಯಾವುದೇ ನಿಯಮಗಳನ್ನು ಮೀರಿ ಕರೆಯಲು ಸಾಧ್ಯವಿಲ್ಲ’ ಎಂದು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದರು.‘ಒಂದು ವೇಳೆ ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪ ಆಗಿದೆ ಅಥವಾ ಕಾನೂನು ಮೀರಲಾಗಿದೆ ಎಂಬ ಭಾವನೆ ಇದ್ದರೆ ದೂರು ದಾಖಲಿಸಲು ಅವಕಾಶವಿದೆ. ಆ ಬಗ್ಗೆ ತನಿಖೆ ನಡೆಸುತ್ತೇವೆ. ಲೋಪ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ₹5 ಲಕ್ಷದಿಂದ ₹6 ಲಕ್ಷದ ಮೊತ್ತದ ಟೆಂಡರ್‌ಗಳನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ಗಳೇ ಕರೆಯುತ್ತಾರೆ. ಈ ಬಾರಿ ಟೆಂಡರ್‌ನಲ್ಲಿ ಅವಕಾಶ ಸಿಗದೇ ಇದ್ದರೆ, ಮುಂದೆ ಕರೆಯುವ ಟೆಂಡರ್‌ನಲ್ಲೂ ಬಿಡ್‌ ಸಲ್ಲಿಸಲು ಅವಕಾಶವಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT