ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಜ್ವರ ಭೀತಿ: ರೋಗ ನಿರ್ವಹಣೆಗೆ ಸಿದ್ಧರಾಗಿರಲು ಸಚಿವ ಪ್ರಭು ಚವ್ಹಾಣ್ ಸೂಚನೆ

Last Updated 6 ಜನವರಿ 2021, 15:23 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರದ ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲಿಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ರೋಗ ನಿರ್ವಹಣೆಗೆ ಸಿದ್ಧರಾಗಬೇಕು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಇಲಾಖೆಯ ಅಧಿಕಾರಿಗಳು ಮತ್ತು ಪಶು ವೈದ್ಯರಿಗೆ ಸೂಚಿಸಿದ್ದಾರೆ.

ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣಕನ್ನಡ, ಕೊಡಗು,ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಉಪನಿರ್ದೇಶಕರು ಕೋಳಿ ಶೀತ ಜ್ವರದ ಸಂಭಾವ್ಯ ರೋಗವು ಉಲ್ಬಣಗೊಳ್ಳುವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ರೋಗ ನಿಯಂತ್ರಣ ಸಮಿತಿ ಸಭೆ ನಡೆಸಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಕೇರಳ ರಾಜ್ಯದಿಂದ ಕೋಳಿ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ಸಾಗಾಣಿಕೆಯನ್ನು ನಿರ್ಬಂಧಿಸುವುದು ಹಾಗೂ ಕೋಳಿ ಸಾಗಾಣಿಕೆ ವಾಹನಗಳನ್ನು ಸ್ಯಾನಿಟೈಸ್‌ ಮಾಡಿ ಒಳ ಬಿಡಬೇಕು. ಅಲ್ಲದೆ, ತೆಗೆದುಕೊಂಡ ಕ್ರಮಗಳ ದೈನಂದಿನ ವರದಿಯನ್ನು ಉಪನಿರ್ದೇಶಕರು, ಕೋಳಿ ರೋಗ ನಿರ್ಣಯ ಪ್ರಯೋಗಾಲಯದ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ.

ಗಡಿ ಜಿಲ್ಲೆಗಳಲ್ಲಿರುವ ಕೋಳಿ ಸಾಕಾಣಿಕೆ ಕ್ಷೇತ್ರಗಳಿಂದ ಪ್ರತಿ ವಾರ ರ್‍ಯಾಂಡಮ್‌ ಆಗಿ ತಲಾ 5 ಸೀರಂ ಮಾದರಿಗಳು, 5 ಕ್ಲೋಯಕಲ್‌/ ಟ್ರೇಕಿಯಲ್‌ ಮಾದರಿಗಳು ಮತ್ತು 5 ಪರಿಸರ ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ವಿಶ್ಲೇಷಣೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರಗಳಲ್ಲಿ ವಿಶೇಷವಾಗಿ, ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕೋಳಿಗಳು, ಹಿತ್ತಲಕೋಳಿಗಳು, ಹಕ್ಕಿಗಳು, ಕಾಡು ಹಕ್ಕಿಗಳು, ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೋಳಿ ಶೀತಜ್ವರದ ಸಂಭವನೀಯತೆಯನ್ನು ಪರಿಗಣಿಸಿ ಸಂಬಂಧಪಟ್ಟ ಪ್ರಯೋಗಾಲಯಕ್ಕೆ ವರದಿ ಮಾಡಿ, ರೋಗ ವಿಶ್ಲೇಷಣೆ ನಡೆಸುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಜೈವಿಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT