ಶುಕ್ರವಾರ, ಜನವರಿ 28, 2022
25 °C

ಡಾ.ಕೆ.ಸುಧಾಕರ್‌ ಬರಹ: ವಂಚನೆ ಪ್ರಕರಣವೋ? ಸನ್ನಿವೇಶ ದುರ್ಬಳಕೆಯ ರಾಜಕೀಯವೋ?

ಡಾ.ಕೆ.ಸುಧಾಕರ್ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ, ಜನರನ್ನು ದಾರಿ ತಪ್ಪಿಸಲು ಉದ್ದೇಶಪೂರ್ವಕವಾಗಿ ಒಂದಲ್ಲ ಒಂದು ವಿವಾದ ಸೃಷ್ಟಿಸಲಾಗುತ್ತಿದೆ. ಮಾದಕ ವಸ್ತುಗಳಿಂದ ಆರಂಭವಾದ ಪ್ರಕರಣವನ್ನು ಈಗ ಬಿಟ್‌ಕಾಯಿನ್ ಕಳವು ಎಂಬ ಅಂತರ್ಜಾಲ ಅಪರಾಧದ ಬಳಿಗೆ ತಂದು ನಿಲ್ಲಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ತಾವು ಇರುವುದೇ, ಬೇಜಾವಾಬ್ದಾರಿಯಿಂದ ವರ್ತಿಸಲು, ಮನಬಂದಂತೆ ಆರೋಪ ಮಾಡಲು ಎಂಬಂತೆ ವರ್ತಿಸುತ್ತಿರುವ ವಿರೋಧ ಪಕ್ಷಗಳು, ಈಗ ಬಿಟ್‌ಕಾಯಿನ್ ವಿಚಾರ ಎಳೆದು ತಂದು ವಿನಾಕಾರಣ ವಿವಾದ ಸೃಷ್ಟಿಸಿವೆ. ಆದರೆ ಯಾವೊಬ್ಬ ಕಾಂಗ್ರೆಸ್ ನಾಯಕರೂ ದಾಖಲೆಗಳನ್ನು ಮುಂದಿಟ್ಟಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಯಶಸ್ವಿ 100 ದಿನ ಪೂರೈಸಿದ ಬಳಿಕ, ಇದನ್ನು ದೊಡ್ಡ ವಿವಾದವಾಗಿಸಿ ಸರ್ಕಾರ ಉರುಳಿಸಬಹುದು ಎಂಬ ಭ್ರಮೆಯಲ್ಲಿ ಪ್ರತಿಪಕ್ಷಗಳು ಇವೆ.

ಪ್ರಕರಣದ ಆರೋಪಿ ಶ್ರೀಕೃಷ್ಣನನ್ನು ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ 2020ರ ನವೆಂಬರ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಕ್ರಿಪ್ಟೊಕರೆನ್ಸಿ ವೆಬ್‌ಸೈಟ್ ಹ್ಯಾಕ್ ಮಾಡಿರುವ ಬಗ್ಗೆ ಶ್ರೀಕಿ ಬಾಯಿಬಿಟ್ಟಿದ್ದ. ಇದಕ್ಕಾಗಿಯೇ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಬಿಟ್‌ಕಾಯಿನ್ ಎಂಬುದು ಅಂತರ್ಜಾಲದಲ್ಲಿ ಮಾತ್ರ ಇರುವ ಒಂದು ಕ್ರಿಪ್ಟೊಕರೆನ್ಸಿ. ಇದು ನಮ್ಮ ರೂಪಾಯಿಯಂತೆ ಭೌತಿಕವಾಗಿ ಇರುವುದಿಲ್ಲ. ಇಂತಹ ಕಾಯಿನ್‌ ವಿಷಯದಲ್ಲಿ ಹಗರಣ ನಡೆಸಲಾಗಿದೆ ಎಂಬಂತೆ ಕಾಂಗ್ರೆಸ್ ಬಿಂಬಿಸುತ್ತಿದೆ. ಹಗರಣವೇ ನಡೆಯದಿರುವುದರಿಂದ ಕಾಂಗ್ರೆಸ್ ಬಳಿ ದಾಖಲೆಗಳೇ ಇಲ್ಲ. ರಫೇಲ್‌ ವಿಚಾರಗಳಲ್ಲಿ ಆರೋಪ ಮಾಡಿ ಮುಖಭಂಗ ಅನುಭವಿಸಿದ ಕಾಂಗ್ರೆಸ್ ಈಗಲೂ ಠುಸ್ ಪಟಾಕಿ ಎನಿಸುವ ಆರೋಪಗಳನ್ನು ಮಾಡುತ್ತಿದೆ.

ಸ್ವಂತ ಖಾತೆಯೇ ಇಲ್ಲ!: ಪ್ರಕರಣದ ತನಿಖೆಗಾಗಿ ಬಿಟ್‌ಕಾಯಿನ್ ಖಾತೆ ತೆರೆಯಲಾಯಿತು. ತನಿಖಾಧಿಕಾರಿಗಳು ಶ್ರೀಕಿಯ 31.8 ಕಾಯಿನ್‍ಗಳಿದ್ದ ಬಿಟ್‌ಕಾಯಿನ್ ವ್ಯಾಲೆಟ್‌ನ (ಒಂದು ಬಗೆಯ ಖಾತೆ) ಪಾಸ್‌ವರ್ಡ್ ಬದಲಿಸಿ, ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿದ್ದರು. ಇಲ್ಲಿ ಪೊಲೀಸರು ಅಥವಾ ಸರ್ಕಾರ ಹಗರಣ ಮಾಡಲು ಉದ್ದೇಶಿಸಿದ್ದರೆ ಹಾಗೂ ಕಾಯಿನ್‌ಗಳನ್ನು ಪಡೆದು ಹಣ ಸಂಪಾದನೆ ಮಾಡಬೇಕೆಂದಿದ್ದರೆ ಆ ಹಂತದಲ್ಲಿ ನಿಯಮ ಪ್ರಕಾರ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸುವ ಅಗತ್ಯವೇನಿತ್ತು?

ಇದಾದ ಬಳಿಕ ಮತ್ತೆ ನ್ಯಾಯಾಲಯದಿಂದ ಅನುಮತಿ ಪಡೆದು ವ್ಯಾಲೆಟ್ ತೆರೆದಾಗ ಅಲ್ಲಿ 186.81 ಕಾಯಿನ್‍ಗಳು ಪತ್ತೆಯಾಗಿದ್ದವು. ನಂತರ ಇದು ಲೈವ್ ವ್ಯಾಲೆಟ್ ಎಂದು ತಿಳಿದುಬಂತು. ಅಂದರೆ ಆರೋಪಿ ಶ್ರೀಕಿ ಯಾವುದೇ ಸ್ವಂತ ಖಾತೆ ಹೊಂದಿರದೆ ತನ್ನದೇ ಖಾತೆ ಎಂಬಂತೆ ಕಥೆ ಕಟ್ಟಿದ್ದ. ಇದು ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್ ವ್ಯವಸ್ಥೆಯ ಖಾತೆಯಾಗಿತ್ತು. ಈ ಕಾರಣಕ್ಕಾಗಿ, ಹಿಂದೆ ಕಡಿಮೆ ಕಾಯಿನ್‌ ತೋರಿಸಿದ್ದ ಖಾತೆಯಲ್ಲಿ ಈಗ ಹೆಚ್ಚು ಕಾಯಿನ್‌ಗಳು ಕಂಡುಬಂದಿದ್ದವು. ಹೀಗಾಗಿ, ತನಿಖಾಧಿಕಾರಿಗಳು ಯಾವುದೇ ಕಾಯಿನ್‌ಗಳನ್ನು ಮುಟ್ಟದೆ ಹಾಗೆಯೇ ಬಿಟ್ಟುಬಿಟ್ಟರು. ಈ ಎಲ್ಲ ಪ್ರಕ್ರಿಯೆಗಳನ್ನು ವೀಡಿಯೊ ಮಾಡಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 0.08 ಬಿಟ್ ಕಾಯಿನ್‌ಗಳನ್ನು ಪೊಲೀಸ್ ವ್ಯಾಲೆಟ್‌ಗೆ ವರ್ಗಾಯಿಸಿರುವುದಾಗಿ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಇಷ್ಟೆಲ್ಲ ಸ್ಪಷ್ಟತೆ ಇದ್ದರೂ ಕಾಯಿನ್ ವರ್ಗಾವಣೆ ನಡೆದಿದೆ ಎಂಬುದನ್ನೇ ಪ್ರತಿಪಕ್ಷಗಳ ನಾಯಕರು ಜಪಿಸುತ್ತಿದ್ದಾರೆ.

ತನಿಖೆಗೆ ಸಮಯ ಬೇಡವೇ?: ಇಂಟರ್‌ಪೋಲ್‍ಗೆ ಮಾಹಿತಿ ಏಕೆ ನೀಡಿರಲಿಲ್ಲ ಎಂಬುದು ಮತ್ತೊಂದು ಆರೋಪ. ಹ್ಯಾಕ್ ಮಾಡಿರುವುದಾಗಿ ಆರೋಪಿ ಹೇಳಿದ್ದರೂ ಅದಕ್ಕೆ ಸೂಕ್ತ ಆಧಾರ ಇರಲಿಲ್ಲ. ಸೈಬರ್ ತಜ್ಞರು ಇದನ್ನು ಪರಿಶೀಲಿಸಿ ಕೆಲ ಹೇಳಿಕೆಗಳು ಆಧಾರರಹಿತ ಎಂದು ತಿಳಿಸಿದ್ದರು. ಇದಕ್ಕೆ ಸ್ವಲ್ಪ ಸಮಯ ಹಿಡಿದಿದ್ದು ನಿಜ. ಆದರೆ ಇದು ಉದ್ದೇಶಪೂರ್ವಕ ವಿಳಂಬವಲ್ಲ. 2021ರ ಮಾರ್ಚ್‌–ಏಪ್ರಿಲ್‌ನಲ್ಲೇ ಸಿಬಿಐ ಇಂಟರ್‌ಪೋಲ್‌ ಹಾಗೂ ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಲಾಗಿದೆ. ಮಾಹಿತಿ ಬಚ್ಚಿಡುವ ದುರುದ್ದೇಶ ಇದ್ದಿದ್ದರೆ ಇಂಟರ್‌ಪೋಲ್‌ಗೆ ಪತ್ರಬರೆಯುವ ಪ್ರಮೇಯವೇ ಇರುತ್ತಿರಲಿಲ್ಲ. 

ಬಿಟ್‌ ಕಾಯಿನ್‌ನಲ್ಲಿ ಬಿಜೆಪಿಯ ನಾಯಕರ ಕೈವಾಡ ಇದೆ ಎಂಬುದು ಮತ್ತೊಂದು ಹೊಣೆಗೇಡಿತನದ ಆಪಾದನೆ. ಕಾಂಗ್ರೆಸ್ ನಾಯಕರೇ ಹೇಳಿದಂತೆ 2016ರಿಂದಲೇ ಇಂತಹ ಅಪರಾಧಗಳು ನಡೆಯುತ್ತಿವೆ ಎಂದಾದರೆ, ಆಗ ಇದ್ದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಮೌನವಾಗಿದ್ದು ಏಕೆ? ನಮ್ಮ ಸರ್ಕಾರ ಬಂದ ಮೇಲೆ, ಪ್ರಕರಣದ ತನಿಖೆ ಚುರುಕಾಗಿದ್ದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ನಡೆಯುತ್ತಿದೆ. ಯಾವುದೇ ಹಂತದಲ್ಲೂ ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಹಸ್ತಕ್ಷೇಪ ಮಾಡಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವಾಗಲೇ ಈ ತನಿಖೆ ನಡೆಯುತ್ತಿದೆ. ಶ್ರೀಕಿಯನ್ನು ಬಂಧಿಸಿ, ಇಷ್ಟೆಲ್ಲ ಮಾಹಿತಿ ಕಲೆ ಹಾಕಿರುವಾಗ ತನಿಖೆ ಎಷ್ಟು ವೇಗವಾಗಿ ನಡೆಯುತ್ತಿದೆ ಎಂಬುದು ಸೂರ್ಯಸ್ಪಷ್ಟ.

ವೇಲ್ ಅಲರ್ಟ್ ಎಂಬ ಖಾತೆಯಿಂದ ಬಂದ ಮಾಹಿತಿ ಆಧರಿಸಿ ತನಿಖೆ ನಡೆಸಬೇಕಿತ್ತು ಎಂಬ ವಾದವೂ ಇದೆ. ದೂರುಗಳೇ ಬಾರದೆ, ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿ ಆಧರಿಸಿ ಯಾವ ಇಲಾಖೆಯೂ ತನಿಖೆ ಕೈಗೊಳ್ಳುವುದಿಲ್ಲ. 14,682 ಬಿಟ್ ಕಾಯಿನ್‌ಗಳು ವರ್ಗಾವಣೆಗೊಂಡಿವೆ ಎಂಬ ಆರೋಪ ಇದೆ. ಆದರೆ, ಬೇರೆ ದೇಶ ಅಥವಾ ಯಾವುದೇ ಸಂಸ್ಥೆಗಳು ನಮ್ಮ ಪೊಲೀಸರನ್ನು ಸಂಪರ್ಕ ಮಾಡಿಲ್ಲ. 

ರಾಜಕೀಯ ಮೇಲಾಟ: ಮೂಲತಃ ಇದು ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣ. ಆದರೆ, ಇದು ಬಿಟ್‌ಕಾಯಿನ್ ವಿಚಾರ ಎಂದು ಹೇಳುತ್ತಿರುವ ಕಾಂಗ್ರೆಸ್‌, ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡಿದೆ. ತನಿಖಾ ಹಂತದ ಕೆಲ ಸೂಕ್ಷ್ಮಗಳನ್ನು ಹಿಡಿದು ಅವುಗಳನ್ನೇ ದೊಡ್ಡದಾಗಿಸಿ, ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎನ್ನುವುದು ಬೇಜವಾಬ್ದಾರಿಯ ಪರಮಾವಧಿ. 

ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಡ್ರಗ್ಸ್‌ಗೆ ಕಡಿವಾಣ ಹಾಕಲು ಬಿಜೆಪಿ ಸರ್ಕಾರ ಕಠಿಣ ಹೆಜ್ಜೆ ಇಟ್ಟಿದೆ. ಈವರೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಕ್ಕೆ ಪಡೆದು ಅನೇಕ ಆರೋಪಿಗಳನ್ನು ಬಂಧಿಸಲಾಗಿದೆ. ಹಲವಾರು ವರ್ಷಗಳಿಂದ ಈ ದಂಧೆ ನಡೆಯುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಕಿಂಚಿತ್ತೂ ಕ್ರಮ ಕೈಗೊಳ್ಳುವ ಆಸಕ್ತಿ ತೋರಿರಲಿಲ್ಲ. ನಮ್ಮ ಸರ್ಕಾರ ಡ್ರಗ್ಸ್‌ ಮಾಫಿಯಾವನ್ನು ಬೇರುಮಟ್ಟದಿಂದ ಕೀಳಲು ಶ್ರಮಿಸುತ್ತಿರುವಾಗ ಪ್ರಕರಣದ ಹಾದಿ ತಪ್ಪಿಸಲು ಮಣ್ಣಿನ ಗುಡ್ಡೆಯನ್ನೇ ಬೆಟ್ಟ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಜನವಿರೋಧಿ ನೀತಿ.

ಯಾರನ್ನೂ ರಕ್ಷಣೆ ಮಾಡದೆ,ತಪ್ಪಿತಸ್ಥರನ್ನು ಶಿಕ್ಷಿಸಲು ಸರ್ಕಾರ ಕ್ರಮ ವಹಿಸಲಿದೆ. ಹಗರಣದ ವ್ಯಾಪ್ತಿಯನ್ನೂ ಪರಿಗಣಿಸಿ, ಎಲ್ಲ ಸ್ತರಗಳಲ್ಲಿ ತನಿಖೆಯೂ ನಡೆಯುತ್ತಿದೆ. ಇದರಲ್ಲಿ ಯಾರೇ ಶಾಮೀಲಾಗಿದ್ದರೂ, ಎಷ್ಟೇ ಪ್ರಭಾವಿಗಳಿರಲಿ ಕ್ರಮ ನಿಶ್ಚಿತ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ.

ಲೇಖಕ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ, ಕರ್ನಾಟಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು