ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲದ ಕನ್ನಡ ಪ್ರೇಮ ತೋರಲು ಎಚ್ಡಿಕೆಯಿಂದ ನಂದಿನಿ ಬಗ್ಗೆ ಸುಳ್ಳು ಸುದ್ದಿ: ಬಿಜೆಪಿ

Last Updated 2 ಜನವರಿ 2023, 5:01 IST
ಅಕ್ಷರ ಗಾತ್ರ

ಬೆಂಗಳೂರು: ‘ನಂದಿನಿ’ ವಿಲೀನದ ಬಗ್ಗೆ ಯಾರೂ ಏನು ಹೇಳದಿದ್ದರೂ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ತೋರಿಸಲು ಕುಮಾರಸ್ವಾಮಿ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

‘1975ರಿಂದಲೂ ಕೆಎಂಎಫ್‌ ಅಭಿವೃದ್ಧಿ ಹೊಂದುತ್ತಿದೆ. ಅಂತೆಯೇ ಗುಜರಾತ್‌ ಸಹಕಾರ ಒಕ್ಕೂಟವೂ ಪ್ರಗತಿಯ ಹಾದಿಯಲ್ಲಿದೆ. ‘ಅಮುಲ್’ ಹಾಗೂ ‘ನಂದಿನಿ’ ಒಂದಾದರೆ ಹಾಲು ಉತ್ಪಾದಕರಿಗೆ ಇನ್ನಷ್ಟು ಅನುಕೂಲವಾಗುತ್ತದೆ’ ಎಂಬ ಅಮಿತ್‌ ಶಾ ಅವರ ಹೇಳಿಕೆಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ವಿರೋಧಿಸಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಅವರು, ನಂದಿನಿ ವಿಚಾರಕ್ಕೆ ಬಂದರೆ ಬಿಜೆಪಿ ಭಸ್ಮವಾಗಲಿದೆ ಎಂದು ಗುಡುಗಿದ್ದರು.

ಈ ಹಿನ್ನೆಲೆಯಲ್ಲಿ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ಮಾಡಿದೆ.

‘ಸದಾ ಕಾಲ ಸದಾರಮೆ ನಾಟಕವಾಡುವ ಎಚ್‌.ಡಿ ಕುಮಾರಸ್ವಾಮಿಯವರು ಕನ್ನಡಿಗರ ಬಗ್ಗೆ ಎಷ್ಟು ಕಾಳಜಿ ತೋರಿದ್ದಾರೆ ಅನ್ನೋದು ಎಲ್ಲರಿಗೂ ಅರಿವಿದೆ; ಮಂಡ್ಯದ ಜನತೆಯಂತೂ ಇದಕ್ಕೆ ಖುದ್ದು ಸಾಕ್ಷಿ. ಮಂಡ್ಯದ ಮೈಶುಗರ್ ಮುಚ್ಚಿದ ಕಥೆ, ₹8000 ಕೋಟಿ ಮೊತ್ತದ ಯೋಜನೆಗಳ ಗಾಳಿಪಟ ಹಾರಿಸಿದ ಕಥೆ. ಇವುಗಳ ನೈಜ ಚಿತ್ರಣದ ಅರಿವಿರದ ಕನ್ನಡಿಗರೇ ಇಲ್ಲ' ಎಂದು ಗೇಲಿ ಮಾಡಿದೆ.

‘ಹಾಸನದಲ್ಲಿ ಅಣ್ಣ, ಮಂಡ್ಯದಲ್ಲಿ ಮಗ, ರಾಮನಗರದಲ್ಲಿ ಖುದ್ದು ದಂಪತಿಗಳು ಕೋಟೆ ಕಟ್ಟಿ ಮೆರೆಯುವ ಹುನ್ನಾರದಲ್ಲಿ, ಕಾರ್ಯಕರ್ತರಿಗೆ ಕ್ಯಾರೇ ಎನ್ನದಿರುವುದು, ಹೆಗಲು ಕೊಟ್ಟ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಎಲ್ಲವನ್ನು ಜನ ಕಂಡಿದ್ದಾರೆ. ಮಂಡ್ಯ, ರಾಮನಗರದ ಅವರದೆ ಪಕ್ಷದ ಕಾರ್ಯಕರ್ತರು ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಕನ್ನಡಿಗರಂತೆ ತೋರುವುದಿಲ್ಲವೇ? ಈ ಮೂರೂ ಜಿಲ್ಲೆಗಳಲ್ಲೂ ಮೆಗಾ ಡೈರಿ ಇದ್ದದ್ದು ಹಾಸನದಲ್ಲಿ ಮಾತ್ರ. ಅದೂ ಬಿಜೆಪಿ ಸರ್ಕಾರದ ಕೊಡುಗೆ. ಮಂಡ್ಯದಲ್ಲಿ ನಮ್ಮ ಸರ್ಕಾರ ಮೊನ್ನೆಯಷ್ಟೇ ಮೆಗಾ ಡೈರಿಯನ್ನು ಉದ್ಘಾಟಿಸಿದೆ. ನಂದಿನಿ ವಿಲೀನದ ಬಗ್ಗೆ ಯಾರೂ ಏನು ಹೇಳದಿದ್ದರೂ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ತೋರಿಸಲು ಕುಮಾರಸ್ವಾಮಿ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

‘ಮನ್‌ಮುಲ್‌ನಲ್ಲಿ ಜೆಡಿಎಸ್‌ ನಾಯಕರದ್ದೇ ಕಾರುಬಾರಂತೆ. ಅಲ್ಲಿನ ಅವ್ಯವಹಾರಗಳ ಬಗ್ಗೆ ಕುಮಾರಸ್ವಾಮಿ ದಿವ್ಯ ಮೌನ ವಹಿಸಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಮಂಡ್ಯದ ಲಕ್ಷಾಂತರ ಜನರ ಹೊಟ್ಟೆಯ ಮೇಲೆ ಹೊಡೆದವರು ಕುಮಾರಸ್ವಾಮಿ ಅವರಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.

‘2019ರ ಚುನಾವಣೆಯಲ್ಲಿ ನಿಖಿಲ್‌ ಮಂಡ್ಯದಲ್ಲಿ ಸೋಲುವ ಮುನ್ನ ಚುನಾವಣಾ ಗಿಮಿಕ್ ಆಗಿ ಘೋಷಿಸಿದ್ದ ₹8,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು ಮಂಡ್ಯದ ಜನರ ದಿಕ್ಕುತಪಿಸಲು ಕುಮಾರಸ್ವಾಮಿಯವರು ನೀರಿನ ಮೇಲೆ ಗೀಚಿದ ಅಕ್ಷರಗಳು. ಇದು ಸ್ವಾಭಿಮಾನಿ ಮಂಡ್ಯದ ಕನ್ನಡಿಗರಿಗೆ ಕುಮಾರಸ್ವಾಮಿ ಯವರು ಮಾಡಿದ ಅವಮಾನ. ನಮ್ಮ ಸರ್ಕಾರ ರಾಮನಗರಕ್ಕೆ ವಿಶ್ವದರ್ಜೆಯ ರೇಷ್ಮೆ ಮಾರುಕಟ್ಟೆ, ಮಾಗಡಿಯಲ್ಲಿ ಕರ್ನಾಟಕ ಸಂಸ್ಕೃತ ವಿವಿಯ ಹೊಸ ಆವರಣ ಕೊಟ್ಟಿದೆ. ರಾಮನಗರವನ್ನು ಸ್ವಂತ ರಾಜಕೀಯ ಲಾಭಕ್ಕಾಗಿ ಜಿಲ್ಲೆಯೆಂದು ಘೋಷಿಸಿ ಬಿಡದಿಯಲ್ಲಿ ಐಷಾರಾಮಿ ಜೀವನ ಸಾಗಿಸುತ್ತ, ಸ್ವತಃ ದಂಪತಿಗಳೇ ಶಾಸಕರಾಗಿದ್ದೀರೇ ಹೊರತಾಗಿ ಜಿಲ್ಲೆಗೆ ಬೇರೇನು ಮಾಡಿದ್ದೀರಿ?’ ಎಂದು ಮತ್ತೊಮ್ಮೆ ಪ್ರಶ್ನೆ ಕೇಳಿದೆ.

‘ನಮ್ಮ ಸರ್ಕಾರ ರಾಮನಗರದ ರಾಮದೇವರಬೆಟ್ಟದಲ್ಲಿ ಅಯೋಧ್ಯೆ ಮಾದರಿಯಂತೆ ಶ್ರೀ ರಾಮಚಂದ್ರನ ದೇವಸ್ಥಾನವನ್ನು ನಿರ್ಮಿಸಲಿದೆ. ಮಾಗಡಿ ಕೆಂಪಾಪುರದಲ್ಲಿ ಕೆಂಪೇಗೌಡರ ಸ್ಮಾರಕ, ಮಾಗಡಿ ವೀರಾಪುರದಲ್ಲಿ ಶಿವಕುಮಾರ ಸ್ವಾಮೀಜಿಯವರ ಸ್ಮಾರಕ ಮತ್ತು ಮಾಗಡಿ ಬಾನಂದೂರಿನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮಾರಕ ನಿರ್ಮಿಸಲಿದೆ. ಈ ಮಹನೀಯರನ್ನು ಎಂದಿಗೂ ನೆನೆಯದೆ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ವಿಶ್ವವಿದ್ಯಾಲಯ ತೆರಿಯಲಿದ್ದೇವೆ ಎಂದು ಘೋಷಿಸುವ ಮೂಲಕ ಕನ್ನಡ ಕುಲ ಕೋಟಿಯ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ಇಷ್ಟೆಲ್ಲಾ ಹಳವಂಡ ಮಾಡಿಕೊಂಡಿರುವ ಕುಮಾರಸ್ವಾಮಿಯವರು ಕಟ್ಟಾಳು ಎಂಬ ಹುಂಬತನದ ಭ್ರಮಾಲೋಕದಿಂದ ವಾಸ್ತವಕ್ಕೆ ಬರಬೇಕು‘ ಎಂದು ಬಿಜೆಪಿ ಸಲಹೆ ನೀಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT