ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ವಿಸ್ತರಣೆ: ಬೇಗುದಿ ಸ್ಫೋಟಕ್ಕೆ ವೇದಿಕೆ ಸಜ್ಜು

ಇಂದು ಕೋರ್‌ ಕಮಿಟಿ, ನಾಳೆ ರಾಜ್ಯ ಕಾರ್ಯಕಾರಿಣಿ ಸಭೆ
Last Updated 3 ಡಿಸೆಂಬರ್ 2020, 22:40 IST
ಅಕ್ಷರ ಗಾತ್ರ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿನ ಗೊಂದಲ ಮತ್ತು ನಿಗಮ– ಮಂಡಳಿಗಳ ನೇಮಕದ ಕುರಿತು ಬಿಜೆಪಿಯಲ್ಲಿನ ‘ಒಳ ಕುದಿ’ ಬೆಳಗಾವಿಯಲ್ಲಿ ಶುಕ್ರವಾರದಿಂದ ಎರಡು ದಿನ ನಡೆಯುವ ಬಿಜೆಪಿ ಪ್ರಮುಖರ ಸಭೆ ಮತ್ತು ರಾಜ್ಯ ಕಾರ್ಯಕಾರಿಣಿಯಲ್ಲಿ ‘ಸ್ಫೋಟ’ಗೊಳ್ಳುವ ಸಾಧ್ಯತೆ ಇದೆ.

‘ಪ್ರಮುಖರ ಸಭೆಗೆ ಆಹ್ವಾನಿತರಲ್ಲೇ ಕೆಲವು ಸದಸ್ಯರು ಪಕ್ಷದ ಆಂತರಿಕ ವಿದ್ಯಮಾನಗಳು, ಅಸಮಾಧಾನಗಳನ್ನು ನೇರವಾಗಿ ಪ್ರಸ್ತಾಪಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಅರುಣ್‌ ಸಿಂಗ್‌ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಅವರ ಅಧ್ಯಕ್ಷತೆಯಲ್ಲೇ ಈ ಸಭೆಗಳು ನಡೆಯಲಿವೆ. ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಡೆಯಿಂದ ಬೇಸತ್ತಿರುವ ಪ್ರಮುಖರು ಅಸಮಾಧಾನ ಹೊರಹಾಕುವುದು ನಿಶ್ಚಿತ. ಸಂಪುಟ ಪುನಾರಚನೆ ಮಾಡುವುದಾದರೆ, ಕೆಲವು ಹಿರಿಯರನ್ನು ಕೈಬಿಡುವ ವಿಚಾರ, ಪಕ್ಷಕ್ಕೆ ವಲಸೆ ಬಂದು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರುತ್ತಿರುವುದು ಮತ್ತು ಕೆಲವು ನಾಯಕರು ನಿತ್ಯವೂ ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳನ್ನು ನೀಡಿ ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತಿರುವ ವಿಚಾರ ಚರ್ಚೆಯಾಗಲಿದೆ’ ಎಂದು ಮೂಲಗಳು ತಿಳಿಸಿವೆ.

‘ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಪಕ್ಷ ಮತ್ತು ಸಂಪುಟದ ಹಿರಿಯ ಸಹೋದ್ಯೋಗಿಗಳ ಜತೆ ಯಡಿಯೂರಪ್ಪ ಚರ್ಚೆ ನಡೆಸುತ್ತಿಲ್ಲ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಏಕಪಕ್ಷೀಯವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲೂ ನಿಗಮ–ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಪಕ್ಷ ಸಲ್ಲಿಸಿದ ಪಟ್ಟಿಗೂ ಅವರು ಕಿಮ್ಮತ್ತು ನೀಡಲಿಲ್ಲ. ಬಹುಪಾಲು ತಮ್ಮ ಆಪ್ತರಿಗೇ ಮಣೆ ಹಾಕಿದ್ದಾರೆ ಎಂಬ ಅಸಮಾಧಾನ ಪಕ್ಷದೊಳಗೆ ಹೊಗೆಯಾಡುತ್ತಿದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT