ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಗೆ ಯತ್ನಿಸಿದರೆ ಆನೆಗೆ ಗುಂಡು ಹೊಡೆಯುವೆ: ಬಿಜೆಪಿ ಮುಖಂಡ ಎಚ್‌.ಎಂ.ವಿಶ್ವನಾಥ್

Last Updated 7 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಸಕಲೇಶಪುರ (ಹಾಸನ): ‘ಕಾಡಾನೆಗಳು ತೋಟಕ್ಕೆ ಬಂದು, ನನ್ನ ಮೇಲೆ ದಾಳಿಗೆ ಯತ್ನಿಸಿದರೆ, ಡಬಲ್‌ ಬ್ಯಾರೆಲ್‌ ಬಂದೂಕಿನಿಂದ ನೇರವಾಗಿ ಗುಂಡು ಹೊಡೆಯುತ್ತೇನೆ...’

–‌ಕಾಡಾನೆ ಸಮಸ್ಯೆ ಪರಿಹಾರ ಕುರಿತು ಪರಿಶೀಲನೆಗೆ ಬಂದಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜ್‌ಕಿಶೋರ್‌ ಸಿಂಗ್‌ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಎದುರು ಬಿಜೆಪಿ ಮುಖಂಡ ಎಚ್‌.ಎಂ.ವಿಶ್ವನಾಥ್ ಹೀಗೆ ಆಕ್ರೋಶ ವ್ಯಕ್ತಪಡಿಸಿದರು.

ಎಂಟು ಸದಸ್ಯರುಳ್ಳ ಸಮಿತಿಯು ತಾಲ್ಲೂಕಿನ ಬೆಳಗೋಡು ಗ್ರಾಮದ ಸಾರ್ವಜನಿಕರ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ‘ಆನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸುವುದು, ದಾಳಿಯಿಂದ ಮೃತಪಟ್ಟವರಿಗೆ, ಬೆಳೆ ಹಾನಿಯಾದವರಿಗೆ ಹೆಚ್ಚಿನ ಪರಿಹಾರ ಕೊಡುವ ಕಥೆಯನ್ನೆಲ್ಲ ಮತ್ತೆ ಹೇಳಬೇಡಿ. ಎಲ್ಲ ಆನೆಗಳನ್ನು ಕೂಡಲೇ ಸ್ಥಳಾಂತರಿಸಬೇಕು ಎಂಬ ಒಂದೇ ಶಿಫಾರಸಿನ ವರದಿಯನ್ನು ಸರ್ಕಾರಕ್ಕೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಪ್ರತಿ ತಿಂಗಳೂ ಕಾಡಾನೆಗಳ ದಾಳಿಯಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದರೂ ಅವರ ಸಂಖ್ಯೆಯನ್ನು ಎಣಿಸುತ್ತ, ಜೀವ ಭಯದಲ್ಲೇ ಜೀವನ ನಡೆಸಬೇಕಾ? ಮಲೆನಾಡಿನ ಜನರ ತಾಳ್ಮೆ ಪರೀಕ್ಷಿಸಬೇಡಿ’ ಎಂದರು.

ಶಾಸಕ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ‘ಮಲೆನಾಡಿನಲ್ಲಿ ಕಾಡಾನೆಗಳ ಸಮಸ್ಯೆ ಈ ಮಟ್ಟಕ್ಕೆ ಉಲ್ಬಣಿಸಲು ಅಧಿಕಾರಿಗಳೇ ನೇರ ಹೊಣೆ. ಗಂಭೀರತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.

‘ಮನೆಯ ಸುತ್ತ ಎಂಟು ಕಾಡಾನೆಗಳು ಅಡ್ಡಾಡುತ್ತಿವೆ. ಹೊರಗೆ ಬರುವುದಕ್ಕೆ ಆಗುತ್ತಿಲ್ಲ. ಕಾಫಿ ಕೊಯ್ಲಿಗೆ ಕಾರ್ಮಿಕರು ಬರುತ್ತಿಲ್ಲ. ನಮಗೆ ರಕ್ಷಣೆ ನೀಡಿ. ಇಲ್ಲವೇ ದಯಾಮರಣ ನೀಡಿ’ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ.ರಂಗರಾವ್‌, ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ನಿಶಾಂತ್ ಸೇರಿ ಎಂಟು ಮಂದಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಅಹವಾಲು ಆಲಿಸುವ ಸಂದರ್ಭದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ) ಶಾಶ್ವತಿ ಮಿಶ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಎಸ್ಪಿ ಹರಿರಾಂ ಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT