ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಸೀಬು ಚೆನ್ನಾಗಿದ್ದರೆ ಅಖಂಡ ಕರ್ನಾಟಕದ ಸಿಎಂ ಆಗುವೆ: ಉಮೇಶ್‌ ಕತ್ತಿ ವಿಶ್ವಾಸ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಉಮೇಶ್‌ ಕತ್ತಿ
Last Updated 27 ಆಗಸ್ಟ್ 2022, 3:48 IST
ಅಕ್ಷರ ಗಾತ್ರ

ಗದಗ: ‘ನಾನು ಉತ್ತರ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದು,ಅಖಂಡ ಕರ್ನಾಟಕದ ನಾಯಕ. ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದವರೇ ಸಿಎಂ ಇರುವಾಗ ನಾನು ಮುಖ್ಯಮಂತ್ರಿ ಪದವಿಗೆ ಆಸೆ ಪಡುವುದಿಲ್ಲ. ನನಗೆ ಇನ್ನೂ 15 ವರ್ಷಗಳ ಕಾಲಾವಕಾಶ ಇದ್ದು, ನಸೀಬು ಚೆನ್ನಾಗಿದ್ರೆ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಸಚಿವ ಉಮೇಶ್‌ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಅಭಿವೃದ್ಧಿಗೆ ಯಾರಾದರೂ ತೊಡಕಾದರೆ ಗಟ್ಟಿ ಧ್ವನಿಯಲ್ಲಿ ವಿರೋಧಿಸುವೆ. ಮಹದಾಯಿ, ಕಳಸಾ ಬಂಡೂರಿ, ಕೃಷ್ಣ, ಆಲಮಟ್ಟಿ ಭಾಗದ ಅಭಿವೃದ್ಧಿಗೆ ಯಾರೇ ಅಡ್ಡಗಾಲು ಹಾಕಿದರೂ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಭ್ರಷ್ಟಾಚಾರದ ಆರೋಪ‍ ಮಾಡುವ ಕೆಂಪಣ್ಣ, ಸಿದ್ರಾಮಣ್ಣ ಅಥವಾ ಯಾರೇ ಆದರೂ ದಾಖಲೆ ಸಮೇತ ಲೋಕಾಯುಕ್ತ, ಇಡಿ, ಸಿಬಿಐಗೆ ದೂರು ಕೊಡಲಿ. ತನಿಖೆಯಿಂದ ಸತ್ಯ ಹೊರಬರಲಿದೆ’ ಎಂದು ಸಚಿವ ಉಮೇಶ್‌ ಕತ್ತಿ ಹೇಳಿದರು.

‘ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿ ಆಗಿ ತಮ್ಮ ಇತಿಮಿತಿಯೊಳಗೆ ಸರ್ಕಾರದ ತಪ್ಪುಗಳ ಕುರಿತು ಚರ್ಚಿಸಬೇಕು. ಅದು ಬಿಟ್ಟು ಶೇ 40, ಶೇ 50 ಪರ್ಸೆಂಟ್‌ ಕಮಿಷನ್‌ ನಡೆಯುತ್ತಿದೆ ಅಂತ ಗೊಂದಲದ ಹೇಳಿಕೆಗಳನ್ನು ನೀಡಬಾರದು. ಈ ಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಮುಖ್ಯಮಂತ್ರಿಯನ್ನಾಗಲಿ, ವಿರೋಧ ಪಕ್ಷದ ನಾಯಕನನ್ನಾಗಲಿ ಜನರು ರಸ್ತೆಯಲ್ಲಿ ಓಡಾಡಲು ಬಿಡುತ್ತಿರಲಿಲ್ಲ’ ಎಂದು ಚಾಟಿ ಬೀಸಿದರು.

‘ರಾಜ್ಯದಲ್ಲಿ ಬಹಳಷ್ಟು ಗುತ್ತಿಗೆದಾರರ ಸಂಘಗಳಿವೆ. ಕೆಂಪಯ್ಯ ಯಾವುದಾದರೊಂದು ಸಂಘದ ಅಧ್ಯಕ್ಷ ಇರಬಹುದು. ಅವರು ಯಾರು ಎಂದು ಗೊತ್ತಿಲ್ಲ. ಭ್ರಷ್ಟಾಚಾರ ನಡೆದಿದ್ದರೆ ದೂರು ದಾಖಲಿಸಲಿ. ಬಾಯಿಗೆ ಬಂದಂತೆ ಹೇಳಿಕೆ ನೀಡದರೆ ಸುಳ್ಳು ನಿಜವಾಗುತ್ತದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT