ಬುಧವಾರ, ಮೇ 25, 2022
26 °C

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸುನಿಲ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣರಾಜ್ಯೋತ್ಸವ ಪರೇಡ್‌ಗೆ ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರ ಕಳುಹಿಸುವಂತೆ ಶಿಫಾರಸು ಮಾಡಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಈಗ ನಾರಾಯಣ ಗುರುಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಕನ್ನಡ, ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಬಿಡುವಿನ ವೇಳೆಯನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳುವ ಬದಲು ಎಲ್ಲದರಲ್ಲೂ ರಾಜಕೀಯವನ್ನು ಹುಡುಕುವ ಸಿದ್ದರಾಮಯ್ಯನವರು ಕೇರಳದ ಕಮ್ಯೂನಿಷ್ಟ್ ಸರ್ಕಾರ ಹಚ್ಚಿದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಹೊರಟಿದ್ದಾರೆ. ನಾರಾಯಣ ಗುರು ರಾಜಕೀಯ ವಸ್ತುವಲ್ಲ. ಅವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಹೋಗಬೇಡಿ. ಟಿಪ್ಪು ಆದರ್ಶ ಪ್ರತಿಪಾದಕರು ನಾರಾಯಣ ಗುರುಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದ್ದಾರೆ.

ಈ ಹಿಂದೆ ಕೇರಳ ಸರ್ಕಾರ ನಾರಾಯಣ ಗುರು ಪ್ರತಿಮೆಯನ್ನು ಶಿಲುಬೆಗೆ ಕಟ್ಟಿ ಅವಮಾನ ಮಾಡಿದಾಗ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡುವ ಧೈರ್ಯ ಇರಲಿಲ್ಲ. ಗಣರಾಜ್ಯೋತ್ಸವದ ಪರೇಡ್‌ಗೆ ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರ ಕಳುಹಿಸುವಂತೆ ಶಿಫಾರಸು ಮಾಡಿದ್ದ ಸಿದ್ದರಾಮಯ್ಯ ಅವರು ಹಿಂದೂ ಧಾರ್ಮಿಕ ಸಂತರ ಪರ ಈಗ ವಕಾಲತು ವಹಿಸುವುದು ಚೋದ್ಯ. ‘ಒಂದೇ ಕಣ್ಣಿನಲ್ಲಿ ನೀರು ಸುರಿಸಿ ಅಮಾಯಕರನ್ನು ಬಲಿ ಪಡೆಯುವ ಸಿದ್ದರಾಮಯ್ಯ ಅವರ ಮಕರ ನೀತಿ’ಯನ್ನು ರಾಜ್ಯದ ಜನತೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸುನಿಲ್ ಕುಮಾರ್ ಟೀಕಿಸಿದ್ದಾರೆ.

‘ಕೇರಳದ ಸ್ತಬ್ಧಚಿತ್ರವನ್ನು ಪರೇಡ್‌ಗೆ ಪರಿಗಣಿಸಿಲ್ಲ ಎಂದು ವಿವಾದ ಸೃಷ್ಟಿಸುತ್ತಿರುವ ನಿಮಗೆ ರಾಜ್ಯದ ಸ್ತತ್ರಬ್ಧಚಿತ್ರ ಆಯ್ಕೆಯಾಗಿರುವ ಬಗ್ಗೆ ಪರಿವೆ ಇಲ್ಲವೇ? ಈ ಸಂಬಂಧ ಕೇಂದ್ರ ಸರ್ಕಾರವನ್ನು ಅಭಿನಂದಿಸುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದೀರಿ. ನಾರಾಯಣ ಗುರುಗಳ ಸಮಾಜ ಸುಧಾರಣಾ ಕಾರ್ಯದ ಬಗ್ಗೆ ಮೋದಿ ಅಪಾರ ಕಾಳಜಿ ಹೊಂದಿದ್ದು, ತಮ್ಮ ಭಾಷಣದಲ್ಲಿ ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ. ನಾರಾಯಣಗುರುಗಳ ಆಶ್ರಮಕ್ಕೆ ಎರಡು ಬಾರಿ ಭೇಟಿ ನೀಡಿದ್ದಷ್ಟೇ ಅಲ್ಲ, ಈ ಆಶ್ರಮದ ಗುರುಗಳಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಿಮ್ಮ ಹಾಗೆ ತೋರಿಕೆಯ ಭಕ್ತಿ ಪ್ರದರ್ಶನ ಮಾಡಿಲ್ಲ’ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ‌ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಹಿಂದುಳಿದ ವರ್ಗಗಳ‌ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿರುವುದು ಬಿಜೆಪಿ ಸರಕಾರದ ಅವಧಿಯಲ್ಲಿ. ಇದನ್ನೆಲ್ಲ ನೋಡುವುದಕ್ಕೆ ಶುದ್ಧ ಮನಸು ಹಾಗೂ ಹೃದಯ ಬೇಕು. ಆದರೆ ನೀವು ಕಣ್ಣಿಗೆ ಹಳದಿ ಪಟ್ಟಿಕಟ್ಟಿಕೊಂಡು ಪ್ರಪಂಚವನ್ನು ವೀಕ್ಷಿಸುತ್ತಿದ್ದೀರಿ. ದ್ರಷ್ಟಿಯಂತೆ ಸೃಷ್ಟಿ ಎಂಬ ಮಾತು ನಿಮ್ಮಂಥವರ ನಡಾವಳಿಯನ್ನು ನೋಡಿಯೇ ಸೃಷ್ಟಿಸಿದ್ದಿರಬೇಕು ಎಂದು ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಮಹಾಪುರುಷರ ತತ್ವ, ಆದರ್ಶಗಳ ಪಾಲನೆ ಬೇಕಿಲ್ಲ. ಮಹಾಪುರುಷರನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳುವ ಹೊಟ್ಟೆಬಾಕತನ ಮಾತ್ರ ಬೇಕು. ಗಾಂಧಿ ಆದರ್ಶದ ಪಾಲನೆಯಿಲ್ಲದಿದ್ದರೂ ಗಾಂಧಿ ಹೆಸರು ಬಳಸಿಕೊಂಡಿರಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸಿಗರು, ಅವರ ಹೆಸರನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಾರೆ. ಈಗ ನಾರಾಯಣಗುರುಗಳ ಹೆಸರನ್ನು ರಾಜಕೀಯಕ್ಕೆ ಎಳೆದು ತರುತ್ತಾ ಇದ್ದೀರಿ. ನಾರಾಯಣಗುರು ರಾಜಕೀಯದ ವಸ್ತು ಅಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ಅವರು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಸ್ತಬ್ಧಚಿತ್ರಗಳ ಆಯ್ಕೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಆದರೆ ಮೂಲ ಸೌಕರ್ಯವನ್ನು ಮಾತ್ರ ಕಲ್ಪಿಸಲಾಗುತ್ತದೆ. ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ‘ಸ್ವಾತಂತ್ರ್ಯ 75’ರ ಸಾಧನೆ ಇತ್ಯಾದಿ ಪರಿಕಲ್ಪನೆ ನೀಡಲಾಗಿತ್ತು. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಇತ್ಯಾದಿ ರಾಜ್ಯಗಳ ಸ್ತಬ್ಧಚಿತ್ರಗಳ ಗುಣಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. 2018 ಹಾಗೂ 2021ರಲ್ಲಿ ಯಾವ ಮಾನದಂಡ ಆಧರಿಸಿ ಕೇರಳದ ಸ್ತಬ್ಧಚಿತ್ರವನ್ನು ಸ್ವೀಕರಿಸಲಾಗಿತ್ತೋ, ಈಗ ಅದೇ ಮಾನದಂಡದ ಅನ್ವಯ ಅವಕಾಶ ನಿರಾಕರಿಸಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ವಿವಾದವೇ ಅಲ್ಲದ ವಿಚಾರಕ್ಕೆ ವಿವಾದದ ಸ್ವರೂಪ‌ ನೀಡಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೊರಟಿರುವುದು ಹಾಸ್ಯಾಸ್ಪದ ಎಂದು ಸುನಿಲ್ ಕುಮಾರ್ ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು