ಶುಕ್ರವಾರ, ಅಕ್ಟೋಬರ್ 30, 2020
27 °C
ಆರ್.ಆರ್‌.ನಗರ ಮುನಿರತ್ನ– ತುಳಸಿ ಮಧ್ಯೆ ಪೈಪೋಟಿ

ಅಭ್ಯರ್ಥಿಗಳ ಆಯ್ಕೆಗೆ ಇಂದು ಬಿಜೆಪಿ ಪ್ರಮುಖರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿರಾ ಮತ್ತು ಆರ್‌.ಆರ್‌.ನಗರ ಕ್ಷೇತ್ರಗಳ ಉಪಚುನಾವಣೆ, ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ಪ್ರಮುಖರ ಸಮಿತಿ ಸಭೆ ನಾಳೆ (ಗುರುವಾರ) ಸಂಜೆ ನಡೆಯಲಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದನ್ನು ತಯಾರಿಸಿ ಕೇಂದ್ರದ ವರಿಷ್ಠರಿಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುನಿರತ್ನ– ತುಳಸಿ ಮಧ್ಯೆ ಪೈಪೋಟಿ: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಮಾಜಿ ಶಾಸಕ ಮುನಿರತ್ನ ಮತ್ತು ತುಳಸಿ ಮುನಿರಾಜುಗೌಡ ಅವರ ಮಧ್ಯೆ ಪ್ರಬಲ ಪೈಪೋಟಿ ನಡೆದಿದೆ.

ಮೈತ್ರಿ ಸರ್ಕಾರ ಪತನದ ಸಂದರ್ಭ ಮುನಿರತ್ನ ಅವರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರು ಬಿಜೆಪಿ ಸೇರಿದರು. ಇವರಿಗೂ ಪಕ್ಷದ ಟಿಕೆಟ್‌ ಮತ್ತು ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಟಿಕೆಟ್‌ ಭರವಸೆ ನೀಡಿದ್ದು, ಅವರ ಮಾತಿಗೆ ವರಿಷ್ಠರು ಮನ್ನಣೆ ನೀಡಿದರೆ ಟಿಕೆಟ್‌ ಖಚಿತ ಎಂದು ಮೂಲಗಳು ಹೇಳಿವೆ. 

ಆದರೆ, ತುಳಸಿ ಮುನಿರಾಜುಗೌಡ ಅವರು ಅಷ್ಟು ಸುಲಭದಲ್ಲಿ ಕ್ಷೇತ್ರವನ್ನು ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಇಲ್ಲ. ಹೀಗಾಗಿ ತುಳಸಿ ಅವರನ್ನು ಸಮಾಧಾನಪಡಿಸಲು ಕೆಎಸ್‌ಟಿಡಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಅವರು ಅದನ್ನು ತಿರಸ್ಕರಿಸಿದ್ದರು.

ಪಕ್ಷದಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ಆಪ್ತರಾಗಿರುವ ತುಳಸಿ, ಅಷ್ಟು ಸುಲಭದಲ್ಲಿ ಸೋಲೊಪ್ಪುವ ಸ್ಥಿತಿಯಲ್ಲಿ ಇಲ್ಲ.‘ಟಿಕೆಟ್‌ಗಾಗಿ ಬೇಡಿಕೆ ಇಡುತ್ತೇನೆ. ಮುನಿರತ್ನ ಅವರಿಗೆ ಸಚಿವ ಸ್ಥಾನ ಸೇರಿದಂತೆ ಏನೂ ಬೇಕಾದರೂ ಕೊಡಲಿ. ಆ ಬಗ್ಗೆ ನನ್ನ ತಕರಾರು ಇಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾನು ಸಂಘದ ಹಿನ್ನೆಲೆಯಿಂದ ಬಂದ ಕಾರ್ಯಕರ್ತ, ರಾಮಮಂದಿರ ಚಳವಳಿ, ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಸಂಬಂಧ ನಡೆದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೆ. ಅಲ್ಲದೆ, ಪಕ್ಷದ ಹಲವು ಹುದ್ದೆಗಳಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ’ ಎಂದು ಹೇಳಿದರು.

‘ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೆಂದು ನಮ್ಮದೇ ಪಕ್ಷದ ವ್ಯಕ್ತಿಯನ್ನು ಸೆಳೆದು ಜೆಡಿಎಸ್‌ ಕಣಕ್ಕೆ ಇಳಿಸಿತು. ಇದರಿಂದ ಮುನಿರತ್ನ ಗೆದ್ದರು’ ಎಂದು ತುಳಸಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು