ಶುಕ್ರವಾರ, ಮೇ 20, 2022
21 °C

ಅಮಿತ್‌ ಶಾ ಭೇಟಿ ಬೆನ್ನಲೇ ಬಿರುಸಿನ ತಯಾರಿ: ಬೂತ್‌ ಮಟ್ಟದಲ್ಲಿ ಚುನಾವಣಾ ತಾಲೀಮು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಾಗಲೇ ಗೃಹ ಸಚಿವರ ಅಮಿತ್‌ ಶಾ ಅವರು ಇತ್ತೀಚಿನ ಭೇಟಿ ಬಿಜೆಪಿಯಲ್ಲಿ ಉತ್ಸಾಹ ಮೂಡಿಸಿದ್ದು, ಇದಕ್ಕೆ ಪೂರಕವಾಗಿ ಪಕ್ಷದ ಬೂತ್‌ ಮಟ್ಟದಿಂದ ವಿವಿಧ ಹಂತಗಳಲ್ಲಿ ಚುನಾವಣೆಯ ತಾಲೀಮು ಭರ್ಜರಿಯಾಗಿ ನಡೆದಿದೆ.

ಚುನಾವಣೆಯಲ್ಲಿ 150 ಪ್ಲಸ್‌ ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರವನ್ನು ಹಿಡಿಯಲು ಅಮಿತ್‌ ಶಾ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದು, ಅದಕ್ಕೆ ತಕ್ಕಂತೆ ಕಾರ್ಯಯೋಜನೆ ನಕಾಶೆಯನ್ನೂ ರೂಪಿಸುವಂತೆಯೂ ರಾಜ್ಯ ನಾಯಕರಿಗೂ ಸಲಹೆ ನೀಡಿದ್ದಾರೆ.

ಇದರ ಮುಂದಿನ ಹಂತದ ಯೋಜನೆಗಳ ಬಗ್ಗೆ ಇದೇ ತಿಂಗಳ 16 ಮತ್ತು 17 ರಂದು ವಿಜಯನಗರ
ದಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಏ.17 ರಂದು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಚುನಾವಣೆ ಹಂತದವರೆಗೆ ಯಾವ ರೀತಿಯ ಕಾರ್ಯತಂತ್ರಗಳನ್ನು ಅನುಸರಿಸಬೇಕು ಎಂಬ ಚರ್ಚೆ ನಡೆಯಲಿದೆ. ಸಂಘಟನಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಪಕ್ಷವನ್ನು ಬಲಿಷ್ಠಗೊಳಿಸುವ ಸಂಬಂಧ ಮಾರ್ಗದರ್ಶನ ಸಿಗಲಿದೆ.

ಇದಲ್ಲದೇ ಇದೇ 13 ರಿಂದ 10 ದಿನಗಳ ಕಾಲ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಹಿರಿಯ ನಾಯಕರಾದ ಬಿ.ಎಸ್‌.ಯಡಿಯೂರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರನ್ನು ಒಳಗೊಂಡ ಮೂರು ತಂಡಗಳು ರಾಜ್ಯದಲ್ಲಿ ಪ್ರವಾಸ ನಡೆಸಲಿವೆ. ಈ ತಂಡಗಳು ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಕಾರ್ಯಕರ್ತರ ಸಭೆ, ಪಕ್ಷದ ಜಿಲ್ಲಾ ಪ್ರಮುಖರ ಸಭೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಕಾರ್ಯಕರ್ತರನ್ನು ಬೇರು ಮಟ್ಟದಲ್ಲಿ ಚುನಾವಣೆಗೆ ಅಣಿಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿಯ ಚುನಾವಣೆ ತಯಾರಿ ಹೆಜ್ಜೆಗಳು

ಅಮಿತ್‌ ಶಾ ಅವರ ಸೂಚನೆಯ ಮೇರೆಗೆ ಕೆಳಹಂತದಲ್ಲಿ ಚುನಾವಣೆಗೆ ಈಗಿನಿಂದಲೇ ಸಜ್ಜುಗೊಳಿಸುವುದರ ಜತೆಗೆ ‘ಸೋಷಿಯಲ್ ಎಂಜಿನಿಯರಿಂಗ್‌’ಗೆ ಕೂಡಾ ಒತ್ತು ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಳಹಂತದಲ್ಲಿ ತಯಾರಿ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕಿರುವ ಕೊರತೆ ಏನು ಎಂಬುದನ್ನು ಪತ್ತೆ ಮಾಡಿ ಅದನ್ನು ಸರಿಪಡಿಸುವುದಕ್ಕೆ ಆದ್ಯತೆ ನೀಡುತ್ತೇವೆ. ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಗೆದ್ದರೂ ಭದ್ರಾವತಿ ಗೆಲ್ಲಲು ಆಗಿಲ್ಲ. ಸಂಸತ್ತಿಗೆ ಚುನಾವಣೆ ನಡೆದಾಗ ಅಲ್ಲಿ ನಮ್ಮ ಪಕ್ಷಕ್ಕೇ ಲೀಡ್‌ ಬರುತ್ತದೆ. ಈ ರೀತಿಯ ಸಾಕಷ್ಟು ಕ್ಷೇತ್ರಗಳಿದ್ದು, ಅವುಗಳನ್ನು ಪಟ್ಟಿ ಮಾಡಿ, ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಅವರು ಹೇಳಿದರು.

ಮುಂದಿನ ಒಂದು ವರ್ಷಗಳ ಕಾಲ ಅಮಿತ್‌ ಶಾ ಮತ್ತು ನಡ್ಡಾ ಚುನಾವಣೆಗೆ ಸಂಬಂಧಿಸಿದಂತೆ ಸಂಪೂರ್ಣ ನಿಗಾ ವಹಿಸಲಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು