ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದೇವತೆಯ ಕಣ್ಣಿನ ಕಪ್ಪುಪಟ್ಟಿ ಬಿಚ್ಚಿ ಬಿಟ್ಟಿದೆ: ಬಿ.ಕೆ.ಹರಿಪ್ರಸಾದ್‌

ರಾಹುಲ್‌ ಗಾಂಧಿಗೆ ಜೈಲು ಶಿಕ್ಷೆ– ಹರಿಪ್ರಸಾದ್‌ ಪ್ರತಿಕ್ರಿಯೆ
Last Updated 25 ಮಾರ್ಚ್ 2023, 11:42 IST
ಅಕ್ಷರ ಗಾತ್ರ

ಮಂಗಳೂರು: ರಾಹುಲ್‌ ಗಾಂಧಿ ಅವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ ಬಗ್ಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ‘ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ ಕಪ್ಪುಪಟ್ಟಿ ಬಿಚ್ಚಿಬಿಟ್ಟಿದೆ. ಅದರಿಂದ ತಾಪತ್ರಯ ಆಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‌‘ಗುಜರಾತ್‌ನ ನ್ಯಾಯಾಲಯಗಳು ಯಾವ ರೀತಿ ತೀರ್ಪು ನೀಡುತ್ತವೆ ಎಂಬುದು ಬಿಲ್ಕಿಸ್‌ ಬಾನು ಪ್ರಕರಣದಲ್ಲೇ ಗೊತ್ತಾಗಿದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದ ಸಂಜೀವ ಭಟ್‌ ಹಾಗೂ ಐಪಿಎಸ್‌ ಅಧಿಕಾರಿ ಶ್ರೀಕುಮಾರನ್‌ ವಿಚಾರದಲ್ಲಿ ಅಲ್ಲಿನ ನ್ಯಾಯಾಲಯಗಳು ಯಾವ ರೀತಿ ನಡೆದುಕೊಂಡಿವೆ ಎಂಬುದನ್ನು ನೋಡಿದ್ದೇವೆ’ ಎಂದರು.

‘ರಾಹುಲ್‌ ಗಾಂಧಿ ಅವರಿಗೆ ಜೈಲು ಶಿಕ್ಷೆ ವಿಧಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿತ್ತು. ನ್ಯಾಯಾಲಯದ ಆದೇಶ ಮಾಡಿದ ಮರುದಿನವೇ ಅವರ ಸಂಸತ್ ಸದಸ್ಯತ್ವ ರದ್ದುಪಡಿಸಿರುವುದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುವ ಕೃತ್ಯ. ಇದು ನಿರಂಕುಶ ಆಧಿಪತ್ಯದ ಸ್ಪಷ್ಟ ನಿದರ್ಶನ. 138 ವರ್ಷ ದೇಶದ ಸೇವೆ ಸಲ್ಲಿಸಿದ ಕಾಂಗ್ರೆಸ್‌ ನಾಯಕರಿಗೆ ಈ ರೀತಿ ಮಾಡಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಇವರಿಗೆ ಎಷ್ಟು ನಂಬಿಕೆ ಇದೆ ಎಂದು ಇದರಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದರು.‌

‘ರಾಹುಲ್‌ ಗಾಂಧಿ ಅವರ ಬಗ್ಗೆ 56 ಇಂಚಿನ ಹೃದಯ ಇರುವ ವ್ಯಕ್ತಿ ಎಷ್ಟು ಭಯಪಡುತ್ತಾರೆ ಎಂದು ಈ ಪ್ರಕರಣ ಎತ್ತಿ ತೋರಿಸಿದೆ. ರಾಹುಲ್‌ ಕೇಳಿರುವ ಪ್ರಶ್ನೆಗೆ ಉತ್ತರ ಕೊಡಲಿಕ್ಕಾಗದೇ ತಾವೊಬ್ಬ ರಣಹೇಡಿ ಎಂದು ಪ್ರಧಾನಿ ಸಾಬೀತು ಮಾಡಿದ್ದಾರೆ. ರಾಹುಲ್‌ ಮೇಲಿನ ‌ಕ್ರಮದ ವಿರುದ್ಧ ಸದನದ ಒಳಗೆ ಹಾಗೂ ಹೊರಗಡೆ, ದೇಶದಾದ್ಯಂತ ರಾಜಕೀಯವಾಗಿ ಹೋರಾಟ ನಡೆಸುತ್ತೇವೆ. ಕಾನೂನಾತ್ಮಕ ಹೋರಾಟವನ್ನೂ ನಡೆಸುತ್ತೇವೆ’ ಎಂದರು.

‘ಈ ರೀತಿ ಕ್ರಮವು ಎಷ್ಟು ಸಮಂಜಸ ಎಂದು ಪ್ರಶ್ನೆ. ನಾಳೆ ಯಾರು ಯಾರ ವಿರುದ್ಧ ದೂರು ನೀಡಿ ಏನು ಬೇಕಾದರೂ ಮಾಡಬಹುದು. ‘ಜೆರ್ಸಿಕಾ ಗಾಯ್‌’, ‘50 ಕೋಟಿ ಗರ್ಲ್‌ಫ್ರೆಂಡ್‌’, ‘ವಿಧವಾ’ ಮುಂತಾದ ಮಾತುಗಳು ಪ್ರಧಾನಿಯವರ ಬಾಯಿಯಲ್ಲೇ ಬಂದಿವೆ. ಅದಾನಿ ಲೂಟಿ ಬಗ್ಗೆ ಜಂಟಿ ಸಂಸದೀಯ ಸಮಿತಿಯ ವಿಚಾರಣೆಗೆ ಒಳಪಡಿಸುವಂತೆ ಕೇಳಿದ್ದೇ ತಪ್ಪಾ. ಈ ವಿಚಾರದಿಂದ ಗಮನವನ್ನು ಬೇರೆ ಕಡೆ ಸೆಳೆಯಲು ಈ ರೀತಿ ಮಾಡಿದ್ದಾರೆ. ರಾಹುಲ್ ಪ್ರಶ್ನೆಗೆ ಉತ್ತರ ಕೊಡಲು ಆಗುತ್ತಿಲ್ಲ. ಹಾಗಾಗಿ ಈ ಕೆಲಸ ಮಾಡಿದ್ದಾರೆ’ ಎಂದು ಆರೋಪಿಸಿದರು.

‘1975ರಲ್ಲಿ ಇಂದಿರಾ ಗಾಂಧಿ ವಿರುದ್ಧವೂ ಕಾನೂನು ದೃಷ್ಟಿಯಲ್ಲಿ ಎಷ್ಟು ಸಶಕ್ತ ಎಂದು ನೋಡಿದ್ದೇವೆ. ಸದಸ್ಯತ್ವ ರದ್ದುಪಡಿಸಲು ಅನುಸರಿಸಿದ ಪ್ರಕ್ರಿಯೆಯೂ ಪ್ರಶ್ನಾರ್ಹ’ ಎಂದರು.

‘ನರಮೇಧಕ್ಕೆ ಕರೆ ಕೊಟ್ಟವರ, ಸೌಹಾರ್ದ ಕೆಡಿಸುವಂತಹ ದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮ ಜರುಗಿಸುವುದಿಲ್ಲ. ಕೈ ಕತ್ತರಿಸುತ್ತೇವೆ, ಕಾಲು ಕತ್ತರಿಸುತ್ತೇವೆ, ಪಾಕಿಸ್ತಾನಕ್ಕೆ ಓಡಿಸುತ್ತೇವೆ ಎಂದವರೆಲ್ಲ ಆರಾಮವಾಗಿ ತಿರುಗಾಡುತ್ತಿದ್ದಾರೆ. ನಿರ್ದಿಷ್ಟ ಸಮಾಜಕ್ಕೆ ಬೆದರಿಕೆ ಒಡ್ಡಿ, ಅವರನ್ನು ‌ಎರಡನೇ ದರ್ಜೆ ಪ್ರಯಾಣಿಕರಿಂತೆ ಬಿಂಬಿಸಿದವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶ ಇದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಾತ್ಮ ಗಾಂಧಿ ಅವರನ್ನು ಅವಹೇಳನ ಮಾಡಿದವರು, ಗಾಂಧೀಜಿ ಪ್ರತಿಮೆಗೆ ಗುಂಡು ಹೊಡೆದು ಅಣಕು ಪ್ರದರ್ಶನ ನೀಡಿದವರ ವಿರುದ್ಧ ಕ್ರಮ ಇಲ್ಲ. ಬಿಜೆಪಿಗೆ ಒಂದು ಕಾನೂನು ಉಳಿದವರಿಗೊಂದು ಕಾನೂನು ಎಂಬಂತೆ ಆಗುತ್ತಿದೆ’ ಎಂದರು.

‘ಕಳ್ಳರನ್ನು ಕಳ್ಳ ಎಂದಿದ್ದೇ ತಪ್ಪು ಎಂಬ ಭಾವನೆ ಬಿಜೆಪಿಯವರಲ್ಲಿದೆ. ರಾಹುಲ್‌ ಅವರು ಪ್ರಧಾನಿಯನ್ನು ಕಳ್ಳ ಎಂದು ಹೇಳಿಲ್ಲ. ಕಳ್ಳರೆಲ್ಲರೂ ಏಕೆ ಮೋದಿ ಎಂಬ ಹೆಸರಿಟ್ಟುಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ಅದನ್ನೇ ನೆಪವಾಗಿಟ್ಟು ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಇದು ರಾಜಕೀಯ ಸೇಡಿನ ಕ್ರಮ. ರಾಜಕೀಯ ವಿರೋಧಿಗಳ ಧ್ವನಿ ಅಡಗಿಸುತ್ತಿದಾರೆ. ಲೋಕಸಭೆ ಧ್ವನಿವರ್ಧಕ ಆಫ್‌ ಮಾಡಿ ಮಾತನಾಡಲು ಅವಕಾಶ ಕೊಡುತ್ತಿಲ್ಲ’ ಎಂದು ಆರೋಪಿಸಿದರು.

ಮೀಸಲಾತಿ ರದ್ದುಗೊಳಿಸುವ ಹುನ್ನಾರ:

‘ಪ್ರವರ್ಗ 2 ಬಿ ಅಡಿ ಅಲ್ಪಸಂಖ್ಯಾತರಿಗೆ ಇದ್ದ ಶೇ 4ರಷ್ಟು ಮೀಸಲಾತಿಯನ್ನು ಕಿತ್ತುಕೊಂಡಿದ್ದರಿಂದ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಈ ವರ್ಗದಲ್ಲಿ ಬರುವ ಕ್ರೈಸ್ತ, ಜೈನ, ಬೌದ್ಧ ಧರ್ಮಿದವರಿಗೂ ಅನ್ಯಾಯವಾಗುತ್ತದೆ. ಇದು ಮೀಸಲಾತಿ ವ್ಯವಸ್ಥೆಯನ್ನೇ ರದ್ದುಗೊಳಿಸುವ ಹುನ್ನಾರ ಎಂದು ಹರಿಪ್ರಸಾದ್‌ ಆರೋಪಿಸಿದರು.

‘ಇದರ ಹಿಂದಿನ ಸೂತ್ರಧಾರರು ಬೇರೆ ಇದ್ದಾರೆ. ರಾಜ್ಯ ಸರ್ಕಾರ ಕೇವಲ ಪಾತ್ರಧಾರಿ ಅಷ್ಟೇ. ಮೀಸಲಾತಿಯನ್ನೇ ರದ್ದಿಪಡಿಸುವ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ್‌ ಅವರು 2015ರಲ್ಲೇ ಹೇಳಿಕೆ ನೀಡಿದ್ದರು’ ಎಂದು ಅವರು ತಿಳಿಸಿದರು.

‘ಮೀಸಲಾತಿ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡುವುದಕ್ಕೆ ಹಿಂದುಳಿದ ವರ್ಗಗಳ ಆಯೋಗವು ಶಿಫಾರಸು ಮಾಡಬೇಕು. ವಿಧಾನಮಂಡಲದಲ್ಲಿ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಈ ನಿರ್ಣಯಕ್ಕೆ ಸಂಸತ್ತಿನಲ್ಲೂ ಒಪ್ಪಿಗೆ ಸಿಗಬೇಕು. ಇದ್ಯಾವುದನ್ನೂ ಮಾಡಿಲ್ಲ. ಮೂಗಿಗೆ ತುಪ್ಪ ಸವರುವ ಬಗ್ಗೆ ಕೇಳಿದ್ದೆವು. ಬಿಜೆಪಿ ನೇತೃತ್ವದ ಸರ್ಕಾರ ಮೂಗಿನ ಮೇಲೆ ಅಲ್ಲ, ತಲೆಯ ಮೇಲೆ ತುಪ್ಪ ಸವರಿದೆ’ ಎಂದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪರಿಶೀಲನಾ ಸಮಿತಿಯಲ್ಲಿ ಪರಾಮರ್ಶೆಗೆ ಒಳಪಡಿಸಲಾಗುತ್ತದೆ. ಬಳಿಕ ಕೇಂದ್ರ ಚುನಾವಣಾ ಸಮಿತಿ ಅದಕ್ಕೆ ಒಪ್ಪಿಗೆ ನೀಡಿದ ಬಳಿಕ ಬಿಡುಗಡೆ ಮಾಡಲಾಗುತ್ತದೆ. ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಗೆಲ್ಲುವ ಸಾಮರ್ಥ್ಯವೊಂದೇ ಮಾನದಂಡವಲ್ಲ. ಗೆದ್ದವರು ಬಳಿಕ ಪಕ್ಷಾಂತರ ಮಾಡಬಹುದು. ವಿಶ್ವಾಸಾರ್ಹತೆ, ವ್ಯಕ್ತಿ ಕುರಿತು ಸಾರ್ವಜನಿಕರಲ್ಲಿ ಇರುವ ಒಳ್ಳೆಯ ಅಭಿಪ್ರಾಯ, ಗೆಲ್ಲುವ ಸಾಮರ್ಥ್ಯ ಹಾಗೂ ಪಕ್ಷ ನಿಷ್ಠೆ... ಮೋದಲಾದ ಅಂಶಗಳನ್ನು ಪರಿಗಣಿಸಿ ಟಿಕೆಟ್‌ ಹಂಚಿಕೆ ಮಾಡಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯದಲ್ಲಿ ಒಟ್ಟು ಎರಡು ಸ್ಥಾನಗಳಲ್ಲಿ ಕ್ರೈಸ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪರಿಪಾಠವನ್ನು ಈ ಸಲವೂ ಕೈಬಿಡುವುದಿಲ್ಲ. ಕರಾವಳಿ ಪ್ರಜಾಧ್ವನಿ ಯಾತ್ರೆಗೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ಜೆ.ಆರ್‌.ಲೋಬೊ, ಇಬ್ರಾಹಿಂ ಕೋಡಿಜಾಲ್‌, ಶಶಿಧರ ಹೆಗ್ಡೆ, ಲಾರೆನ್ಸ್‌ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT