ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಜೇಶ್‌ ಕಾಳಪ್ಪ ಬರಹ: ಮೇಕೆದಾಟುವಿಗೆ ಅಡ್ಡಗಾಲು, ನದಿ ಜೋಡಣೆಗೆ ಅಡಿಗಲ್ಲು

ಅಕ್ಷರ ಗಾತ್ರ

ಕಾವೇರಿ ಜಲ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಕಾವೇರಿ ನ್ಯಾಯಮಂಡಳಿ ರಚನೆ ಆದಂದಿನಿಂದ ನೀರಿನ ಹಂಚಿಕೆಯಲ್ಲಿ ಕೊರತೆ ಬಗ್ಗೆ ಅಪಸ್ವರ ಎತ್ತುತ್ತಲೇ ಬಂದಿರುವ ತಮಿಳುನಾಡು ರಾಜ್ಯ, ಇದೀಗ ಕೊಳ್ಳದ ‘ಹೆಚ್ಚುವರಿ’ ನೀರು ಬಳಸಿಕೊಳ್ಳಲು ಯೋಜನೆ ಕೈಗೆತ್ತಿಕೊಂಡಿದೆ. ಆ ಮೂಲಕ, ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ಮತ್ತೊಂದು ಆಯಾಮ ನೀಡಲು ಮುಂದಾಗಿದೆ.

ಬ್ರಿಟಿಷ್‌ ಆಡಳಿತದಲ್ಲಿ ಮಾಡಿಕೊಂಡ ಒಪ್ಪಂದಗಳಿಂದಾಗಿ (1892 ಮತ್ತು 1924) ಕಾವೇರಿಯಿಂದ ಸಂಗ್ರಹವಾಗುವ 740 ಟಿಎಂಸಿ ಅಡಿ ನೀರಿನ ಪೈಕಿ ಸಿಂಹಪಾಲು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಸ್ವಾತಂತ್ರ್ಯಪೂರ್ವದ ಈ ಒಪ್ಪಂದಗಳಿಂದಾಗಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಒಪ್ಪಂದಗಳನ್ನು ನಾವು ವಿರೋಧಿಸುತ್ತ ಬಂದಿದ್ದೇವೆ. ರದ್ದುಪಡಿಸುವಂತೆಯೂ ಕೋರಿದ್ದೇವೆ. ಅದೇ ಸಂದರ್ಭದಲ್ಲಿ ಕಾಲಕಾಲಕ್ಕೆ ನ್ಯಾಯಾಲಯ ನೀಡಿದ ಆದೇಶಗಳನ್ನು ಪಾಲಿಸುತ್ತ ಬಂದಿದ್ದೇವೆ. 50 ವರ್ಷಗಳ ಬಳಿಕ ಒಪ್ಪಂದಗಳು ರದ್ದಾಗುತ್ತವೆ. ಅವಧಿ ಮುಗಿದ ಬಳಿಕವೂ ಆ ಒಪ್ಪಂದವನ್ನು ರದ್ದುಪಡಿಸಲು ಸಾಧ್ಯವಾಗದೇ ಇರುವುದು ನಮ್ಮಿಂದ ಆಗಿರುವ ಪ್ರಮಾದ. ಈ ಅತಾರ್ಕಿಕ ಒಪ್ಪಂದಗಳಿಂದಾಗಿ ತಮಿಳುನಾಡಿನ ವಾದಕ್ಕೇ ನ್ಯಾಯಮಂಡಳಿಯಲ್ಲಿ ಹೆಚ್ಚು ಪುಷ್ಟಿ ದೊರೆತಿದೆ.

ನಾಗರಿಕತೆಯ ಹಿನ್ನೆಲೆ ಗಮನಿಸಿದರೆ, ನದಿಪಾತ್ರದ ಕೊನೆಯ ಭಾಗದಲ್ಲಿ ಜನ ಮೊದಲು ನೆಲೆ ಕಂಡುಕೊಳ್ಳುತ್ತಾರೆ. ಹೀಗಾಗಿ, ಕಾವೇರಿ ಅಚ್ಚುಕಟ್ಟು ಪ್ರದೇಶದ ಕೊನೆಯಲ್ಲಿರುವವರು ನೀರಿನ ಹಳೆಯ ಬಳಕೆದಾರರು. ಈ ಅರ್ಥದಲ್ಲಿ ತಮಿಳುನಾಡು ಮೊದಲ ಬಳಕೆದಾರರ. ಬಳಿಕ ಕರ್ನಾಟಕ ಬಳಕೆ ಮಾಡಬೇಕು. ಈಗ ಕರ್ನಾಟಕದಲ್ಲಿರುವ ಕಾವೇರಿನದಿಪಾತ್ರದಲ್ಲಿ ಜನಸಂಖ್ಯೆ ವಿಪರೀತವಾಗಿ ಹೆಚ್ಚಿದೆ. ಹೀಗಾಗಿ, ನೀರಿನ ಬಳಕೆ ಪ್ರಮಾಣ ಕೂಡಾ ಹೆಚ್ಚು. 1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನ್ಯಾಯಮಂಡಳಿ ಮಧ್ಯಂತರ ತೀರ್ಪು ನೀಡಿತ್ತು. ಆಗ ನೀರಿನ ಮಾಪಕ ಮೆಟ್ಟೂರಿನಲ್ಲಿತ್ತು. ಅಲ್ಲಿಂದ ಹರಿಯುವ ನೀರಿನ ಪ್ರಮಾಣ ನಮಗೆ (ಕರ್ನಾಟಕಕ್ಕೆ) ಸರಿಯಾಗಿ ಸಿಗುತ್ತಿರಲಿಲ್ಲ. ತಮಿಳುನಾಡಿನಲ್ಲಿ ಮಾಪನ ಇದ್ದುದರಿಂದ ಅಂದಾಜು 25 ಟಿಎಂಸಿ ಅಡಿಯಷ್ಟು ನೀರು ಆ ರಾಜ್ಯಕ್ಕೆ ಹೆಚ್ಚು ಹರಿದು ಹೋಗುತ್ತಿತ್ತು. ಅದರಿಂದ ಮೋಸ ಆಗುತ್ತಿತ್ತು.

ನೀರು ಹಂಚಿಕೆ ವಿಷಯ ಬಂದಾಗ, ನದಿ ನೀರನ್ನು ಬಟ್ಟಲಲ್ಲಿ ಇದ್ದಂತೆ ಯೋಚನೆ ಮಾಡುತ್ತೇವೆ. ಕಾವೇರಿ ನ್ಯಾಯಮಂಡಳಿ 2007ರಲ್ಲಿ ನೀಡಿದ ಅಂತಿಮ ತೀರ್ಪಿನಂತೆ ಬಿಳಿಗುಂಡ್ಲು ಮಾಪನ ಕೇಂದ್ರದಿಂದ ಜಲ ವರ್ಷವೊಂದರಲ್ಲಿ (ಜೂನ್‌ನಿಂದ ಮೇ) 192 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಬಿಡಬೇಕಿತ್ತು. ಬಿಳಿಗುಂಡ್ಲುವಿನಲ್ಲಿ ಕೇಂದ್ರ ಮಾಪನ ಆರಂಭಿಸಿದ ಬಳಿಕ ತಮಿಳುನಾಡಿಗೆ ಹರಿದು ಹೋಗುವ ನೀರಿನ ಪ್ರಮಾಣವನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಿದೆ. ಈ ತೀರ್ಪಿನಿಂದಾಗಿ ತಮಿಳುನಾಡಿಗೆ ಹಂಚಿಕೆ ಮಾಡಬೇಕಾದ ನೀರಿನ ಪ್ರಮಾಣ ಕಡಿಮೆ ಆಯಿತು. ರಾಜ್ಯ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ವಿಚಾರಣೆ ನಡೆಸಿ 2018ರ ಫೆಬ್ರುವರಿಯಲ್ಲಿ ನ್ಯಾಯಮಂಡಳಿ ನೀಡಿದ ತೀರ್ಪಿನಿಂದ ತಮಿಳುನಾಡಿಗೆ ಹರಿಸುವ ನೀರಿನಲ್ಲಿ 14.5 ಟಿಎಂಸಿ ಅಡಿ ಮತ್ತೆ ಕಡಿತಗೊಂಡಿತ್ತು. ಪರಿಣಾಮ, ಕರ್ನಾಟಕಕ್ಕೆ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಬಳಕೆಗೆ ಅವಕಾಶ ಕಲ್ಪಿಸಿತ್ತು. ಹೀಗಾಗಿ, ತಮಿಳುನಾಡಿಗೆ 192 ಟಿಎಂಸಿ ಅಡಿಯ ಬದಲು 177 ಟಿಎಂಸಿ ಅಡಿ ನೀರು ಕರ್ನಾಟಕ ಹರಿಸಬೇಕು.

ಹೀಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ನೀರಿನ ಸಮಾನಾಂತರ ಹಂಚಿಕೆ ತತ್ವವನ್ನು ನ್ಯಾಯಮಂಡಳಿ ರೂಪಿಸಿದೆ. ಆ ಮೂಲಕ, ನಮಗೆ ನೀರಿನ ಕೊರತೆ ಕಡಿಮೆ ಆಗುತ್ತಲೇ ಬಂತು. ಕಾವೇರಿ ಕೊಳ್ಳದ ನೀರಿನ ಬಳಕೆ ಪ್ರಮಾಣವನ್ನು ರಾಜ್ಯ ಹೆಚ್ಚಿಸಿಕೊಳ್ಳಲು ನಮ್ಮ ರಾಜಕೀಯ ಇಚ್ಛಾಶಕ್ತಿ ಒಂದು ಕಾರಣವಾದರೆ, ಫಾಲಿ ನರಿಮನ್ ನೇತೃತ್ವದ ನಮ್ಮ ಪರಿಣತ ತಂಡದ ಕಾನೂನು ಹೋರಾಟ ಮತ್ತೊಂದು ಕಾರಣ. ‌

ನ್ಯಾಯಮಂಡಳಿಯ ತೀರ್ಪಿನಂತೆ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳು­ನಾಡಿಗೆ ಹರಿಸಿರುವುದಕ್ಕೆ ಅಂಕಿಅಂಶ, ಸಾಕ್ಷ್ಯಾಧಾರಗಳು ಲಭ್ಯವಿವೆ. ಆದರೂ ಈ ವಿಚಾರದಲ್ಲಿ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ. ಉತ್ತಮವಾಗಿ ಮಳೆಯಾದ ವರ್ಷಗಳಲ್ಲೂ ಹಂಚಿಕೆಯಾದ ನೀರಿನ ಪ್ರಮಾಣದ ಬಗ್ಗೆ ತಮಿಳುನಾಡು ಅಪಸ್ವರ ಎತ್ತುತ್ತಲೇ ಬಂದಿದೆ. ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿ ವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತಿದೆ. ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳುನಾಡಿಗೆ ದೊರೆಯುತ್ತದೆ. ಆ ಉದ್ದೇಶದಿಂದ ಮೇಕೆದಾಟುವಿನಲ್ಲಿ ಸಂಗ್ರಹ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ. ಆದರೆ, ತಮಿಳುನಾಡು ಈ ಅಣೆಕಟ್ಟಿನ ವಿರುದ್ಧ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಕ್ಕೆ ದೂರು ತೆಗೆದುಕೊಂಡು ಹೋಗಿದೆ.

-ಬೃಜೇಶ್‌ ಕಾಳಪ್ಪ
-ಬೃಜೇಶ್‌ ಕಾಳಪ್ಪ

ನೀರಿನ ಕೊರತೆ ಬಗ್ಗೆಯೇ ಮಾತನಾಡುತ್ತಿದ್ದ ತಮಿಳುನಾಡು ಈಗ ಕಾವೇರಿ ಕಣಿವೆಯ ಹೆಚ್ಚುವರಿ ನೀರಿನ ಬಳಕೆಗೆ ‘ಕಾವೇರಿ– ವೆಲ್ಲಾರ್’ ಯೋಜನೆ ಕೈಗೊಂಡಿದೆ. ತಮಿಳುನಾಡು ರಾಜ್ಯದ ನಿಲುವು ಈಗ ಸಂಪೂರ್ಣ ಬದಲಾಗಿದೆ. ಅಷ್ಟೇ ಅಲ್ಲ, ಕರ್ನಾಟಕದ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಿ, ತನ್ನ ಹೊಸ ಯೋಜನೆಗೆ ಅಡಿಗಲ್ಲು ಕೂಡಾ ಹಾಕಿದೆ. ‘ಸಮುದ್ರ ಸೇರುವ ಕಾವೇರಿಯ ಹೆಚ್ಚುವರಿ ನೀರು ಬಳಸಿಕೊಳ್ಳುತ್ತಿದ್ದೇವೆ’ ಎನ್ನುವುದು ತಮಿಳುನಾಡಿನ ವಾದ. ಆ ಮೂಲಕ, ಅದರದ್ದು ಚಾಣಕ್ಯ ನಡೆ. ಆದರೆ, ಈ ಹೊಸ ಯೋಜನೆ ಕಾವೇರಿ ನ್ಯಾಯಮಂಡಳಿ ತೀರ್ಪಿನ ಸ್ಪಷ್ಟ ಉಲ್ಲಂಘನೆ. ಈ ಯೋಜನೆ ಕೈಗೆತ್ತಿಕೊಳ್ಳುವುದನ್ನು ತಡೆಯಬೇಕಿದೆ. ಈ ವಿಚಾರದಲ್ಲಿ ನಮಗೆ (ಕರ್ನಾಟಕಕ್ಕೆ) ನಮ್ಮ ಹಿತಾಸಕ್ತಿ ಮುಖ್ಯವೇ ಹೊರತು ರಾಜಕೀಯ ಅಲ್ಲ.

**

‘ವಕೀಲರ ತಂಡ ಬದಲು ಅಪಾಯಕಾರಿ ನಡೆ’
ನೆಲ, ಜಲ ವಿಷಯದಲ್ಲಿ ಎಂದೂ ರಾಜಕೀಯ, ಪಕ್ಷ ಭೇದ ಅಡ್ಡ ಬಂದಿಲ್ಲ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಂತರರಾಜ್ಯ ಜಲ ವಿವಾದಗಳಲ್ಲಿ ರಾಜ್ಯದ ಪರ ವಾದ ಮಂಡಿಸುವ ವಕೀಲರ ತಂಡವನ್ನು ಬದಲಿಸಿ, ಹೊಸಬರ ತಂಡ ರಚಿಸಿದೆ. ಹೊಸಬರ ತಂಡ ರಚನೆಗೆ ವಿರೋಧವಲ್ಲ. ಆದರೆ, ಇಂಥ ವಿಚಾರಗಳಲ್ಲಿ (ನದಿ ನೀರು ವಿವಾದ) ವಾದ ಮಂಡನೆ ವೇಳೆ ವಿಷಯದ ಆಳ– ಅಗಲ ಗೊತ್ತಿರಬೇಕಿದೆ. ಹಳೆ ಕಾನೂನು ತಂಡದಲ್ಲಿದ್ದ ಫಾಲಿ ನರಿಮನ್‌ ಅವರನ್ನು ಹೊರಗಿಡಲಾಗಿದೆ. ಮಹದಾಯಿ, ಕೃಷ್ಣಾದಿಂದ ಎಸ್‌.ಎಸ್‌. ಜವಳಿ ಅವರನ್ನು ಸರ್ಕಾರ ಬಿಟ್ಟಿದೆ. ಮಹದಾಯಿ, ಕಾವೇರಿ, ಕೃಷ್ಣಾ ಈ ಮೂರರಿಂದಲೂ ನನ್ನನ್ನು ಕೈ ಬಿಡಲಾಗಿದೆ. ಮೋಹನ್ ಕಾತರಕಿ ಜೊತೆ ಎರಡು ವರ್ಷ ಸಭೆಯನ್ನೇ ನಡೆಸದೆ, ಇದೀಗ ಸಭೆ ನಡೆಸುತ್ತಿದೆ. ಸರ್ಕಾರದ ಈ ನಡೆ ಅಪಾಯಕಾರಿ. ಇದರಿಂದ ರಾಜ್ಯಕ್ಕೆ ಹಾನಿ ಆಗಲಿದೆ. ಬೇರೆ ರಾಜ್ಯಗಳು ಆಗಾಗ ವಕೀಲರ ತಂಡವನ್ನು ಬದಲಿಸಿದೆ. ಆದರೆ ನಾವು ಎಂದೂ ಬದಲಿಸಿಲ್ಲ. ಅದು ಕೂಡಾ ನಮ್ಮ ಯಶಸ್ಸಿಗೆ ಕಾರಣ. ನಾನು ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರನಾಗಿದ್ದರೂ, ಕಾನೂನು ವಿಷಯ ಬಂದಾಗ ರಾಜ್ಯದಲ್ಲಿ ಯಾವ ಪಕ್ಷ ಆಡಳಿತಲ್ಲಿದೆ ಎನ್ನುವುದನ್ನು ನೋಡುವುದಿಲ್ಲ. ಕರ್ನಾಟಕದ ಪರವಾಗಿ ಮಾತನಾಡಿದ್ದೇನೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾನೂನು ಸಲಹೆಗಾರ ಹುದ್ದೆಯಲ್ಲಿ ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದ ಸಂದರ್ಭದಲ್ಲಿಯೂ ಕಾವೇರಿ ಜಲ ವಿವಾದದಲ್ಲಿ ವಾದ ಮಂಡಿಸುವ ಉದ್ದೇಶದಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಕಾನೂನು ತಂಡ ಪುನರ್ ರಚಿಸುವ ವಿಷಯದಲ್ಲಿ ಬಿಜೆಪಿ ಸರ್ಕಾರ ದೊಡ್ಡ ತಪ್ಪು ಮಾಡಿದೆ. ಅದನ್ನು ಸರಿಪಡಿಸಿಕೊಳ್ಳಬೇಕು.

ಲೇಖಕ: ಸುಪ್ರೀಂ ಕೋರ್ಟ್‌ನ ವಕೀಲ

ನಿರೂಪಣೆ: ರಾಜೇಶ್‌ ರೈ ಚಟ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT