ಭಾನುವಾರ, ಜೂನ್ 26, 2022
22 °C
ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ

ಜ್ಞಾನವಾಪಿ ಮಸೀದಿ: ಸುಪ್ರಿಂಕೋರ್ಟ್‌ ನಿಲುವಿನಿಂದ ನಿರಾಸೆ –ಬೃಂದಾ ಕಾರಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ವಾರಾಣಸಿಯ ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಸುಪ್ರಿಂಕೋರ್ಟ್‌ ತಳೆದ ನಿಲುವು ನಿರಾಸೆ ಮೂಡಿಸಿದೆ’ ಎಂದು ಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯೆ ಬೃಂದಾ ಕಾರಟ್‌ ತಿಳಿಸಿದರು.

‘ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದದಿಂದ ಬಾಳಬೇಕು. ಇತಿಹಾಸದಲ್ಲಿನ ಪ್ರಮಾದಗಳನ್ನು ಈಗ ತಿದ್ದಲು ಆಗದು ಎಂದು ಈ ಹಿಂದೆ ಸುಪ್ರಿಂಕೋರ್ಟ್‌ ಹೇಳಿದೆ. ಆದರೆ, ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಇದು ಪಾಲನೆಯಾಗಿಲ್ಲ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಎಲ್ಲ ಪೂಜಾ ಸ್ಥಳ, ಪ್ರಾರ್ಥನಾ ಸ್ಥಳ, ಧಾರ್ಮಿಕ ಸ್ಥಳಗಳನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಬೇಕು ಎಂದು ‘ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991’ ಹೇಳುತ್ತದೆ. ಇದಕ್ಕಾಗಿ 1947ರ ಆಗಸ್ಟ್‌ 15ರ ದಿನಾಂಕ ಗುರುತು ಮಾಡಿದೆ. ಇದಕ್ಕೂ ಮುಂಚೆ ಇದ್ದ ಯಾವುದೇ ಧಾರ್ಮಿಕ ಸ್ಥಳ ಭವಿಷ್ಯದಲ್ಲಿ ಬದಲಾಯಿಸಬಾರದು ಎಂದರ್ಥ. ಜ್ಞಾನವಾಪಿ ಮಸೀದಿ ವಿಚಾರದಲ್ಲೂ ಸುಪ್ರಿಂ ಕೋರ್ಟ್‌ ಇದೇ ಕಾನೂನು ಎತ್ತಿಹಿಡಿಯುತ್ತದೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ’ ಎಂದರು.

‘ಅಯೋಧ್ಯೆ ಹೊರತುಪಡಿಸಿ ಉಳಿದೆಲ್ಲ ಧಾರ್ಮಿಕ ಸ್ಥಳಗಳಿಗೂ ‘ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯ್ದೆ 1991’ ಅನ್ವಯವಾಗುತ್ತದೆ ಎಂದು ಸುಪ್ರಿಂಕೋರ್ಟ್‌ ತೀರ್ಪು ನೀಡಿದೆ. ಆದರೆ, ಈಗ ಜ್ಞಾನವಾಪಿ ವಿಚಾರದಲ್ಲಿ ತನ್ನ ತೀರ್ಪಿನಂತೆ ದೃಢವಾಗಿ ನಿಂತಿಲ್ಲ. ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಬಗ್ಗೆ, ಪೂಜೆಗೆ ಅವಕಾಶ ನೀಡುವ ಬೆಗೆಗಿನ ಟಿಪ್ಪಣಿಗಳು ಬೇಸರ ಮೂಡಿಸಿವೆ’ ಎಂದೂ ಹೇಳಿದರು.

‘ದೇಶದಲ್ಲಿ ಧರ್ಮಗಳ ಮಧ್ಯೆ, ಸಮುದಾಯಗಳ ಮಧ್ಯೆ ದ್ವೇಷ ಮೂಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದೇ ಬಿಜೆಪಿ, ಆರ್‌ಎಸ್‌ಎಸ್‌ನ ಉದ್ದೇಶ. ದೇಶದ ಜನ ಇದನ್ನು ವಿರೋಧಿಸಬೇಕು. ಒಂದಾಗಿ ಬಾಳಿ, ಒಗ್ಗಟ್ಟಿನಿಂದ ಕೂಡಿರಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು