ಭಾನುವಾರ, ನವೆಂಬರ್ 29, 2020
22 °C

ಸಂಪುಟ: ಬರಿಗೈಲಿ ಮರಳಿದ ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಚಿವ ಸಂಪುಟದ ಪುನರ್‌ ರಚನೆಗೆ ಅನುಮತಿ ಕೋರಿ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬುಧವಾರ ಸಂಜೆ ಬರಿಗೈ ಯಲ್ಲಿ ಬೆಂಗಳೂರಿಗೆ ವಾಪಸ್‌ ಕಳುಹಿಸಿರುವ ಬಿಜೆಪಿ ಹೈಕಮಾಂಡ್‌, ನಾಲ್ಕೈದು ದಿನಗಳ ನಂತರ ಈ ಕುರಿತ ನಿರ್ಧಾರ ತಿಳಿಸುವುದಾಗಿ ಭರವಸೆ ನೀಡಿದೆ.

ಕಾಂಗ್ರೆಸ್‌ ತೊರೆದು ಬಂದು ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ನಾಲ್ವರು ‘ಅನರ್ಹ’ರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಐವರು ‘ನಿಷ್ಕ್ರಿಯ’ ಸಚಿವರನ್ನು ಕೈಬಿಟ್ಟು, ಪಕ್ಷ ಮೂಲದವರಿಗೆ ಅವಕಾಶ ನೀಡಬೇಕು ಎಂಬುದು ಯಡಿಯೂರಪ್ಪ ಅವರ ಪ್ರಸ್ತಾವವಾಗಿದೆ.

ಈ ಕುರಿತು ತೀರ್ಮಾನ ಕೈಗೊಳ್ಳಲು ‘ಸಮಯಾವಕಾಶ’ ಕೋರಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಡೆಯು, ‘ನಾಯಕತ್ವ’ದ ಮೇಲಿನ ನಂಬಿಕೆಯ ವಿಶ್ವಾಸಾರ್ಹತೆ ಕುರಿತ ಸಂದೇಹವನ್ನೂ ಪ್ರಚುರಪಡಿಸಿದಂತಾಗಿದೆ. ಆದರೆ, ಇತ್ತೀಚೆಗಷ್ಟೇ ನೇಮಕವಾಗಿರುವ ರಾಜ್ಯದ ನೂತನ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಬೆಂಗಳೂರಿಗೆ ಭೇಟಿ ನೀಡಿ, ಸ್ಥಳೀಯವಾಗಿರುವ ಕೆಲವು ಪ್ರಮುಖರ ಜೊತೆ ಚರ್ಚಿಸಿ ಬಂದ ನಂತರವಷ್ಟೇ ಸಂಪುಟಕ್ಕೆ ಸಂಬಂಧಿಸಿದ ಕಗ್ಗಂಟನ್ನು ಪರಿಹರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ನಾಯಕತ್ವದ ನೆತ್ತಿಯ ಮೇಲೇ ‘ಅವಿಶ್ವಾಸದ ಕತ್ತಿ’ ಸುಳಿದಾಡುತ್ತಿದೆ ಎಂಬುದನ್ನು ಅರಿತೇ ಯಡಿಯೂರಪ್ಪ ಅವರು ‘ವೀರಶೈವ– ಲಿಂಗಾಯತ’ ಅಭಿವೃದ್ಧಿ ನಿಗಮ, ‘ಮರಾಠಾ’ ಅಭಿವೃದ್ಧಿ ಪ್ರಾಧಿಕಾರ ರಚಿಸುವ ತರಾತುರಿಯ ನಿರ್ಧಾರ ಕೈಗೊಂಡಿದ್ದಾರೆ ಎಂದೂ ದೆಹಲಿಯಲ್ಲಿರುವ ಪಕ್ಷದ ರಾಜ್ಯ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಬುಧವಾರ ಮಧ್ಯಾಹ್ನ 3ರ ವೇಳೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೊಂದಿಗೆ ವಿಶೇಷ ವಿಮಾನದಲ್ಲಿ ರಾಷ್ಟ್ರ ರಾಜಧಾನಿಗೆ ಬಂದ ಯಡಿಯೂರಪ್ಪ ಅವರಿಗೆ ಕೊನೆಯ ಕ್ಷಣದಲ್ಲಿ ಕೇವಲ 15 ನಿಮಿಷದ ಸಮಯಾವಕಾಶ ನೀಡಿದ್ದ ನಡ್ಡಾ, ಆಡಳಿತ ಅಥವಾ ಸರ್ಕಾರದ ಆಗುಹೋಗುಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ ಎಂದೂ ತಿಳಿದುಬಂದಿದೆ.

ಸಂಪುಟಕ್ಕೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲು ರಾಜ್ಯ ಹಾಗೂರಾಷ್ಟ್ರ ಮಟ್ಟದ ಇತರ ಮುಖಂಡರೊಂದಿಗೆ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಲ್ಲದೆ, ನಾಲ್ಕೈದು ದಿನಗಳಲ್ಲಿ ಈ ಸಂಬಂಧದ ನಿರ್ಧಾರ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದರು. ಅಮಿತ್‌ ಶಾ ಅವರನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಸಮಯಾವಕಾಶ ಪಡೆಯಲು ನಡೆಸಿದ ಯತ್ನಗಳೂ ಫಲ ನೀಡದ್ದರಿಂದ ಯಡಿಯೂರಪ್ಪ ತರಾತುರಿಯಲ್ಲೇ ರಾಜ್ಯಕ್ಕೆ ಮರಳುವಂತಾಗಿದೆ ಎನ್ನಲಾಗಿದೆ.

‘ಸಚಿವ ಸಂಪುಟವನ್ನು ವಿಸ್ತರಿಸಬೇಕೋ, ಪುನರ್‌ ರಚಿಸಬೇಕೋ ಎಂಬ ಬಗ್ಗೆ ನಾಲ್ಕೈದು ದಿನಗಳಲ್ಲಿ ನಿರ್ಧರಿಸುವುದಾಗಿ ನಡ್ಡಾ ಭರವಸೆ ನೀಡಿದ್ದಾರೆ’ ಎಂದು ಯಡಿಯೂರಪ್ಪ ಅವರು ಭೇಟಿಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಈ ಸಂಬಂಧ ಸ್ಪಷ್ಟವಾದ ಹೇಳಿಕೆ ನೀಡಲು ನಿರಾಕರಿಸಿದರು.

ಈ ಕುರಿತು ತೀರ್ಮಾನ ಕೈಗೊಳ್ಳಲು ‘ಸಮಯಾವಕಾಶ’ ಕೋರಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಡೆಯು, ‘ನಾಯಕತ್ವ’ದ ಮೇಲಿನ ನಂಬಿಕೆಯ ವಿಶ್ವಾಸಾರ್ಹತೆ ಕುರಿತ ಸಂದೇಹವನ್ನೂ ಪ್ರಚುರ ಪಡಿಸಿದಂತಾಗಿದೆ. ಆದರೆ, ಇತ್ತೀಚೆಗಷ್ಟೇ ನೇಮಕವಾಗಿರುವ ರಾಜ್ಯದ ನೂತನ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಬೆಂಗಳೂರಿಗೆ ಭೇಟಿ ನೀಡಿ, ಸ್ಥಳೀಯ ವಾಗಿರುವ ಕೆಲವು ಪ್ರಮುಖರಜೊತೆ ಚರ್ಚಿಸಿ ಬಂದ ನಂತರವಷ್ಟೇ ಸಂಪುಟಕ್ಕೆ ಸಂಬಂಧಿಸಿದ ಕಗ್ಗಂಟನ್ನು ಪರಿಹರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ಖಚಿತ ಪಡಿಸಿವೆ.

***

‘ಬಂದ್‌ಗೆ ಅವಕಾಶ ನೀಡುವುದಿಲ್ಲ’

ನವದೆಹಲಿ: ‘ರಾಜ್ಯದಲ್ಲಿನ ಮರಾಠಾ ಸಮುದಾಯದವರೂ ಕನ್ನಡಿಗರೇ. ಮರಾಠಾ ಅಭಿವೃದ್ಧಿ ನಿಗಮ ರಚನೆಯನ್ನು ವಿರೋಧಿಸಿ ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಕರ್ನಾಟಕ ಬಂದ್‌ಗೆ ಅವಕಾಶ ನೀಡುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿದರು. ಮರಾಠಾ ಸಮುದಾಯದವರು ಬೆಳಗಾವಿಯಲ್ಲಿ ಮಾತ್ರವಲ್ಲದೆ ರಾಜ್ಯದಾದ್ಯಂತ ಇದ್ದಾರೆ. ಮರಾಠಾ ಸಮುದಾಯದಲ್ಲಿನ ಹಿಂದುಳಿದವರ ನೆರವಿಗೆ ನಿಗಮ ರಚಿಸಲು ನಿರ್ಧರಿಸಲಾಗಿದೆ. ಬೆಳಗಾವಿಯಲ್ಲಿನ ಮರಾಠಿಗರು ಈ ಹಿಂದೆ ನಡೆದಿದ್ದ ‘ವಿಶ್ವ ಕನ್ನಡ ಸಮ್ಮೇಳನ’ಕ್ಕೆ ಬೆಂಬಲ ನೀಡಿದ್ದರು ಎಂದು ಅವರು ತಿಳಿಸಿದರು.

****

ಭೇಟಿಯಾಗದ ಜಾರಕಿಹೊಳಿ:
ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸಚಿವರಿಗೆ ತಲುಪಿಸಲು ದೆಹಲಿಗೆ ಬೆಳಿಗ್ಗೆಯೇ ಬಂದಿದ್ದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಯವರು ಕರ್ನಾಟಕ ಭವನಕ್ಕೆ ಬಂದಿದ್ದರೂ ಅತ್ತ ಸುಳಿಯದಿರುವುದು ಅಚ್ಚರಿ ಮೂಡಿಸಿತು.

ತಮ್ಮ ಸಹೋದ್ಯೋಗಿ ಗಜೇಂದ್ರಸಿಂಗ್‌ ಶೆಖಾವತ್ ಅವರ ಭೇಟಿಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೂ ಜಾರಕಿಹೊಳಿ ಅವರೊಂದಿಗೆ ತೆರಳಿದ್ದು ಕೆಲವು ಊಹಾಪೋಹಗಳಿಗೆ ಪುಷ್ಟಿ ನೀಡಿದೆ.

****

ಗಡಿ ಸಮಸ್ಯೆ ಕುರಿತು ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ, ಅಣ್ಣ- ತಮ್ಮಂದಿರಂತೆ ಇರುವ ಮರಾಠಿಗರು ಮತ್ತು ಕನ್ನಡಿಗರ ನಡುವೆ ದ್ವೇಷ ಭಾವ ಹುಟ್ಟು ಹಾಕುತ್ತಿದ್ದಾರೆ. ಅದನ್ನು ಸಹಿಸಲಾಗದು. ರಾಜ್ಯಗಳ ಗಡಿಯ ಕುರಿತು ಮಹಾಜನ್ ಆಯೋಗ ಸಲ್ಲಿಸಿರುವ ವರದಿಯೇ ಅಂತಿಮ.

ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು