ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ: ಬೌದ್ಧಧರ್ಮ ಪರಿಚಯದ ಪಾಠಕ್ಕೆ ಕೊಕ್?

ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಆರೋಪ: ಇಲಾಖೆಯ ಕ್ರಮ
Last Updated 19 ಫೆಬ್ರುವರಿ 2021, 21:36 IST
ಅಕ್ಷರ ಗಾತ್ರ

ಬೆಂಗಳೂರು: ಆರನೇ ತರಗತಿಯ ಸಮಾಜ ವಿಜ್ಞಾನ ಭಾಗದಲ್ಲಿನ ‘ಹೊಸ ಧರ್ಮಗಳ ಉದಯ’ ಅಧ್ಯಾಯದಲ್ಲಿನ ಕೆಲವು ಅಂಶಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಅಧ್ಯಾಯದಲ್ಲಿ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಅದಕ್ಕೆ ಪೂರಕವೆಂಬಂತೆ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.

ಈ ಸಂಬಂಧ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮುಖ್ಯಶಿಕ್ಷಕರಿಗೆ ಸೂಚನೆಯನ್ನೂ ನೀಡಲಾಗಿದ್ದು, ಈ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಇದೇ 28ರೊಳಗೆ ವರದಿ ನೀಡುವಂತೆಯೂ ಹೇಳಲಾಗಿದೆ.

ಯಾವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಿಲ್ಲ. ಅಧ್ಯಾಯದ ಪುಟ ಸಂಖ್ಯೆ 82 ಮತ್ತು 83ರಲ್ಲಿನ ವಿಷಯಾಂಶಗಳನ್ನು ಪರಿಗಣಿಸದಿರುವಂತೆ ಹೇಳಲಾಗಿದೆ.

ಈ ಎರಡು ಪುಟಗಳಲ್ಲಿ ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ಬುದ್ಧನ ಜೀವನ ಕುರಿತ ಮಾಹಿತಿ ಹಾಗೂ ಬೌದ್ಧಧರ್ಮ ಪರಿಚಯ ಇದೆ.

ಖಂಡನೀಯ: ‘ಬ್ರಾಹ್ಮಣರ ವಿರುದ್ಧದ ಅವಹೇಳನಕಾರಿ ಅಂಶಗಳನ್ನು ತೆಗೆಯುವ ನೆಪದಲ್ಲಿ ಬೌದ್ಧಧರ್ಮ ಮತ್ತು ಬುದ್ಧ ಗುರುವಿನ ವಿಷಯವನ್ನು ತೆಗೆದಿರುವುದು ಸರಿಯಲ್ಲ. ಈ ವಿಷಯವನ್ನು ಬೋಧಿಸಬಾರದು ಎಂಬ ತೀರ್ಮಾನವು ಬೌದ್ಧಧರ್ಮೀಯರಿಗೆ ನೋವುಂಟು ಮಾಡುವುದಿಲ್ಲವೇ ? ಬುದ್ಧ ಗುರುವಿಗೆ ಅವಮಾನ ಮಾಡಿದಂತಾಗಲಿಲ್ಲವೇ’ ಎಂದು ಚಿಂತಕ ಹಾಗೂ ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮಾಜಿ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದ್ದಾರೆ.

‘ಪಠ್ಯಪುಸ್ತಕಗಳಲ್ಲಿ ಯಾವುದಾದರೂ ಅಸತ್ಯ ಇದ್ದರೆ ಅದನ್ನು ತೆಗೆದುಹಾಕಲು ಅವಕಾಶವಿದೆ. ಅವಹೇಳನಕಾರಿ ಅಂಶಗಳು ಎಂದು ಹೇಳಿರುವ ವಿಷಯಗಳಲ್ಲಿ ಯಾವುದೇ ಅಸತ್ಯ ಅಥವಾ ತಪ್ಪು ಇಲ್ಲ. ಅದೇ ರೀತಿ, ಪಠ್ಯಕ್ರಮದಲ್ಲಿನ ಯಾವುದೇ ಅಂಶದ ಬಗ್ಗೆ ಆಕ್ಷೇಪವಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರವೇ ಏಕಪಕ್ಷೀಯವಾಗಿ ಮಾಡಬಾರದು. ಇದನ್ನು ವಿಷಯ ತಜ್ಞರ ಪರಿಶೀಲನೆಗೆ ಒಪ್ಪಿಸಬೇಕಾಗಿತ್ತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೌದ್ಧಧರ್ಮದ ಅಂಶ ತೆಗೆಯುವ ಮೂಲಕ ಬುದ್ಧ ಗುರುವಿಗೆ ಅವಮಾನ ಮಾಡಿರುವುದು ಖಂಡನೀಯ’ ಎಂದರು.

ಆಕ್ಷೇಪಕ್ಕೆ ಕಾರಣವೇನು?
ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತಲ್ಲದೆ, ಹಾಲು, ತುಪ್ಪಗಳನ್ನು ‘ಹವಿಸ್ಸು’ ಎಂದು ದಹಿಸಲಾಗುತ್ತಿದ್ದುದರಿಂದ ಆಹಾರದ ಅಭಾವ ಸೃಷ್ಟಿಯಾಗಿತ್ತು. ಸಂಸ್ಕೃತ ಮಂತ್ರಗಳು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಸಮಾಜದಲ್ಲಿ ಬ್ರಾಹ್ಮಣರು ಹಲವು ಸವಲತ್ತು ಹೊಂದಿದ್ದರು. ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕ್ಷತ್ರಿಯರು ಕಾರಣರಾದರು ಎಂಬ ಅಂಶ ಈ ಅಧ್ಯಾಯದಲ್ಲಿದೆ.

ಈ ಅಂಶವನ್ನು ಪಠ್ಯದಿಂದ ತೆಗೆದುಹಾಕಬೇಕು ಎಂದು ಮಂತ್ರಾಲಯದ ಸುಬುಧೇಂದ್ರತೀರ್ಥರು ಸೇರಿದಂತೆ ಹಲವು ಸ್ವಾಮೀಜಿಯವರು ಆಗ್ರಹಿಸಿದ್ದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಭರವಸೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT