ಭಾನುವಾರ, ಸೆಪ್ಟೆಂಬರ್ 25, 2022
29 °C

ಬುಲ್‌ಬುಲ್‌ ಹಕ್ಕಿ ಮೇಲೆ ಸಾವರ್ಕರ್‌ ಪ್ರಯಾಣ: ಒಂದು ರೂಪಕವಷ್ಟೇ ಎಂದ ಲೇಖಕರ ಪತ್ನಿ

ಪಿಟಿಐ Updated:

ಅಕ್ಷರ ಗಾತ್ರ : | |

ಬೆಂಗಳೂರು: ವ್ಯಾಪಕ ಟೀಕೆಗೆ ಕಾರಣವಾಗಿದ್ದ ವಿ.ಡಿ. ಸಾವರ್ಕರ್‌ ಅವರ ಕುರಿತಾದ 8ನೇ ತರಗತಿ ಕನ್ನಡ (ಎರಡನೇ ಭಾಷೆ) ಪಠ್ಯದಲ್ಲಿ ಅಳವಡಿಸಿರುವ ಬುಲ್‌ಬುಲ್‌ ಹಕ್ಕಿಯ ಕುರಿತಾದ ಸಾಲುಗಳ ಬಗ್ಗೆ ಲೇಖಕ ಕೆ.ಟಿ.ಗಟ್ಟಿ ಅವರ ಪತ್ನಿ ಯಶೋಧಾ ಅಮ್ಮೆಂಬಳ ಪ್ರತಿಕ್ರಿಯಿಸಿದ್ದಾರೆ. 'ಅದೊಂದು ರೂಪಕವಷ್ಟೇ, ಬೇರೇನಿಲ್ಲ' ಎಂದು ತಿಳಿಸಿದ್ದಾರೆ.

ಅನಾರೋಗ್ಯದ ಕಾರಣ ಸ್ಪಷ್ಟನೆ ನೀಡುವ ಸ್ಥಿತಿಯಲ್ಲಿ ಪತಿ ಇಲ್ಲ. ಆದ್ದರಿಂದ ಅವರ ಪರವಾಗಿ ನಾನು ಸ್ಪಷ್ಟನೆ ನೀಡುತ್ತಿಲ್ಲ. ಆದರೆ ಆ ವಿಚಾರಕ್ಕೆ ಸಂಬಂಧಿಸಿದ್ದನ್ನು ಹೇಳುತಿದ್ದೇನೆ ಎಂದು ಯಶೋಧಾ ಅಮ್ಮೆಂಬಳ ಹೇಳಿದ್ದಾರೆ.

ಇದು ಕೇವಲ ರೂಪಕವಾಗಿದೆ. ಆದರೆ ಪಠ್ಯವಾಗಿ ಅಂಗೀಕರಿಸುವ ಸಂದರ್ಭದಲ್ಲಿ ಹೋಲಿಕೆ ಅಥವಾ ಸನ್ನಿವೇಶವನ್ನು ಉಲ್ಲೇಖಿಸಲು ಬಿಟ್ಟು ಹೋಗಿರುವುದರಿಂದ ಹೆಚ್ಚು ಗೊಂದಲಕ್ಕೆ ಕಾರಣವಾಗಿರಬಹುದು. ಲೇಖಕರ ಕಣ್ತಪ್ಪಿನಿಂದ ಅಥವಾ ಸಂಪಾದಕೀಯ ದೋಷದಿಂದ ತಪ್ಪು ನುಸುಳಿರಬಹುದು ಎಂದು ಯಶೋಧಾ ವಿವರಿಸಿದ್ದಾರೆ.

ಬುಲ್‌ಬುಲ್‌ ಹಕ್ಕಿಯ ಮೇಲೆ ತಾಯ್ನಾಡಿಗೆ ಸಾವರ್ಕರ್‌ ಭೇಟಿ ನೀಡುತ್ತಿದ್ದರು ಎಂಬ ರೂಪಕವು ಲೇಖಕರೇ ಬರೆದಿದ್ದೋ, ಬೇರೆ ಪುಸ್ತಕದಿಂದ ತೆಗೆದುಕೊಂಡಿದ್ದೋ ಅಥವಾ ಸಾವರ್ಕರ್‌ ಬಂಧಿಯಾಗಿದ್ದ ಪ್ರದೇಶದಲ್ಲಿ ಬುಲ್‌ಬುಲ್‌ ಹಕ್ಕಿಗಳ ಸಂಖ್ಯೆ ಹೆಚ್ಚಿದ್ದುದರಿಂದ ಹಾಗೆ ಹೋಲಿಕೆ ಮಾಡಲಾಗಿದೆಯೋ ಹೇಳಲು ನಮಗೆ ಸಾಧ್ಯವಿಲ್ಲ. ಆದರೆ ಇದು ಲೇಖಕರ ಕಲ್ಪನೆಯಿಂದ ಮೂಡಿದ್ದಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಪಠ್ಯಕ್ರಮವು ಭಾಷೆಯ ಕುರಿತದ್ದಾಗಿದೆ. ಇತಿಹಾಸದ ಪಠ್ಯವಲ್ಲ. ಇದು ಪ್ರವಾಸ ಕಥನವಾಗಿರುವುದರಿಂದ ಇತಿಹಾಸದ ಕುರುಹುಗಳನ್ನು ಹುಡುಕಬೇಕೆಂದಿಲ್ಲ ಎಂದು ತಿಳಿಸಿದ್ದಾರೆ.

ವಿಜಯಮಾಲಾ ರಂಗನಾಥ್‌ ಅವರ ‘ಬ್ಲಡ್‌ ಗ್ರೂಪ್‌’ ಗದ್ಯದ ಬದಲಿಗೆ ಲೇಖಕ ಕೆ.ಟಿ.ಗಟ್ಟಿ ಅವರ ‘ಕಾಲವನ್ನು ಗೆದ್ದವರು’ ಪ್ರವಾಸ ಕಥನವನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯಕ್ಕೆ ಅಳವಡಿಸಿದೆ. ಈ ಪ್ರವಾಸ ಕಥನದ ಒಂದು ಪ್ಯಾರಾದಲ್ಲಿ ಸಾವರ್ಕರ್‌ ಮತ್ತು ಬುಲ್‌ ಬುಲ್‌ ಹಕ್ಕಿಗಳ ಕುರಿತಾದ ವರ್ಣನೆ ಟೀಕೆಗೆ ಗುರಿಯಾಗಿದೆ.

‘ಕೋಣೆಯೊಳಗಿನ ಹಿಂಬದಿ ಗೋಡೆಯಲ್ಲಿ ಎತ್ತರದಲ್ಲಿ ಆಕಾಶ ಕೂಡ ಕಾಣಿಸದ, ಕಿಂಡಿ ಕೂಡ ಇಲ್ಲದ ಆ ಕತ್ತಲ ಕೋಣೆಯಲ್ಲಿ ಸಾವರ್ಕರ್‌ ಅವರನ್ನು ಇಡಲಾಗಿತ್ತು. ಆದರೂ, ಎಲ್ಲಿಂದಲೊ ಬುಲ್‌ಬುಲ್‌ ಹಕ್ಕಿಗಳು ಹಾರಿ ಸೆಲ್‌ನೊಳಗೆ ಬರುತ್ತಿದ್ದವು. ಅವುಗಳ ರೆಕ್ಕೆಯ ಮೇಲೆ ಕುಳಿತು ಸಾವರ್ಕರ್‌ ಪ್ರತಿದಿನ ತಾಯ್ನಾಡಿನ ನೆಲವನ್ನು ಸಂದರ್ಶಿಸಿ ಬರುತ್ತಿದ್ದರು’ ಎಂದು ವರ್ಣಿಸಲಾಗಿದೆ.

ಇದನ್ನು ಲೇಖಕರು ಸಾವರ್ಕರ್ ಇದ್ದ ಅಂಡಮಾನ್ ಸೆಲ್ಯುಲಾರ್ ಕಾರಾಗೃಹಕ್ಕೆ ಭೇಟಿ ನೀಡಿದ ಸಮಯದ ತಮ್ಮ ಅನುಭವಗಳನ್ನು ಕಥನ ರೂಪದಲ್ಲಿ ಬರೆದಿದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು