ಮಂಗಳವಾರ, ಜೂನ್ 22, 2021
23 °C
ಅನುಕಂಪದಲ್ಲೂ ತಾರತಮ್ಯವೇ?

ಬಿಜೆಪಿ ಟಿಕೆಟ್‌ ಹಂಚಿಕೆ: ತೇಜಸ್ವಿನಿ – ಮಂಗಲಾಗೆ ವಿಭಿನ್ನ ನಿಲುವು

ಎಸ್‌. ರವಿಪ್ರಕಾಶ್ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ‌ ಅಂಗಡಿ ಆವರ ಪತ್ನಿ ಮಂಗಲಾ ಅಂಗಡಿಯವರಿಗೆ ಟಿಕೆಟ್‌ ನೀಡಿದ ವಿಚಾರ ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ.

ಕೋವಿಡ್‌ನಿಂದ ಸುರೇಶ‌ ಅಂಗಡಿ ಮೃತಪಟ್ಟ ಕಾರಣ ಉಪಚುನಾವಣೆ ಎದುರಾಗಿದೆ. ಈ  ಕ್ಷೇತ್ರವನ್ನು ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯ. ಆದರೆ, ಹಿಂದೆ ದಿವಂಗತ ಎಚ್.ಎನ್‌. ಅನಂತ್‌ ಕುಮಾರ್ ಪತ್ನಿಗೆ ಟಿಕೆಟ್‌ ತಪ್ಪಿಸಿದ್ದು ಎಷ್ಟು ಸರಿ ಎಂಬ ‘ಯಕ್ಷ ಪ್ರಶ್ನೆ’ ಚರ್ಚೆಯ ಮುನ್ನೆಲೆಗೆ ಬಂದಿದೆ.

ಲೋಕಸಭಾ ಚುನಾವಣೆಯಲ್ಲಿ  ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಒಮ್ಮತದ ನಿರ್ಣಯ ಮಾಡಿ ಹೆಸರನ್ನು ಕಳಿಸಿದ್ದರು. ಆದರೆ, ‘ಕುಟುಂಬ ರಾಜಕಾರಣ’ ಪ್ರೋತ್ಸಾಹಿಸುವುದಿಲ್ಲ ಎಂಬ ಕಾರಣ ನೀಡಿ ವರಿಷ್ಠರು ಟಿಕೆಟ್‌ ನಿರಾಕರಿಸಿದ್ದರು. ಈಗ ವರಿಷ್ಠರಿಗೆ ಕುಟುಂಬ ರಾಜಕಾರಣ ನೆನಪಾಗಲಿಲ್ಲವೇ ಎಂಬ ಪ್ರಶ್ನೆ ಮುಂದಿಡುತ್ತಾರೆ ಬಿಜೆಪಿಯ ಹಲವು ಪ್ರಮುಖರು.

ತೇಜಸ್ವಿನಿ ರಾಜಕೀಯ ಪ್ರವೇಶದ ಇಚ್ಛೆ ವ್ಯಕ್ತಪಡಿಸದೇ ಇದ್ದರೂ, ಪಕ್ಷ ಮತ್ತು ಸಂಘ ಪರಿವಾರದ ವ್ಯಕ್ತಿಗಳು ಅವರನ್ನು ಅಭ್ಯರ್ಥಿ ಎಂಬಂತೆ ಬಿಂಬಿಸಿದ್ದರು. ಪ್ರಚಾರದಲ್ಲೂ ತೊಡಗಿಸಿದ್ದರು. ಆದರೆ, ದೆಹಲಿಯಲ್ಲಿರುವ ಕರ್ನಾಟಕ ಮೂಲದ ‘ವರಿಷ್ಠ’ರು ಬೇರೆಯದೇ ದಾಳ ಉರುಳಿಸಿದ್ದರು. ಅನಂತಕುಮಾರ್ ಅವರ ‘ಕುಟುಂಬ ರಾಜಕಾರಣ’ಕ್ಕೆ ಇತಿಶ್ರೀ ಹಾಡುವುದರ ಜತೆಗೆ ಹೊಸ ಮುಖವನ್ನು ಪರಿಚಯಿಸುವ ಕಾರಣ ನೀಡಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ನೀಡಿದರು.

ತೇಜಸ್ವಿನಿ ಅವರು ತಮ್ಮ ಪತಿ ಪರವಾಗಿ ಹಲವು ಚುನಾವಣೆಗಳಲ್ಲಿ ಸ್ವತಃ ತಾವೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದರು. ಸಮಾಜಸೇವೆಯ ಕಾರಣಕ್ಕೆ ಬೆಂಗಳೂರು ದಕ್ಷಿಣ ಲೋಕ
ಸಭಾ ಕ್ಷೇತ್ರದಲ್ಲಿ  ಪರಿಚಿತರೂ ಆಗಿದ್ದರು. ಮಂಗಲಾ ಅವರದ್ದು ಬೇರೆಯದೇ ವ್ಯಕ್ತಿತ್ವ. ರಾಜಕಾರಣದ ಬಗ್ಗೆ ತಲೆಕೆಡಿಸಿಕೊಳ್ಳದ ಅಪ್ಪಟ ಗೃಹಿಣಿ. ಆದರೆ, ಸುರೇಶ ಅವರ ಮಗಳು ಶ್ರದ್ಧಾ ಅವರನ್ನು (ಜಗದೀಶ ಶೆಟ್ಟರ್‌ ಅವರ ಸೊಸೆ) ಕಣಕ್ಕೆ ಇಳಿಸುವ ಪ್ರಯತ್ನ ನಡೆದಿತ್ತು. ಇತರ ಆಕಾಂಕ್ಷಿಗಳೂ ಇದ್ದರು. 

ಕಾಂಗ್ರೆಸ್‌ ಪಕ್ಷ ಸತೀಶ ಜಾರಕಿಹೊಳಿಯವರನ್ನು ಕಣಕ್ಕೆ ಇಳಿಸಿದೆ. ಅವರನ್ನು ಮಣಿಸಬೇಕಿದ್ದರೆ ಅನುಕಂಪ ಮತ್ತು ಉತ್ತಮ ಅಭ್ಯರ್ಥಿಯ ಅವಶ್ಯಕತೆ ಇದೆ. ಸುರೇಶ‌ ಅಂಗಡಿಯವರ ಜನಪ್ರಿಯತೆಯಿಂದ ಮಂಗಲಾ ಗೆಲುವು ಸುಲಭ. ಈಕಾರಣಕ್ಕೆ ‘ಕುಟುಂಬ’ ಕ್ಕೆ ಆದ್ಯತೆ ಬೇಡ ಎಂಬ ವಾದ ಬದಿಗಿಡಲಾಯಿತು ಎಂಬವಾದವೂ ಆ ಪಕ್ಷದ ಒಂದು ಗುಂಪಿನಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು