ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಂತ್ರಿ ಆಗ್ತಾರ ಸಿ.ಪಿ.ಯೋಗೇಶ್ವರ್‌?

ಜಿಲ್ಲೆಯ ಬಿಜೆಪಿ ವಲಯದಲ್ಲಿ ಗರಿಗೆದರಿದ ನಿರೀಕ್ಷೆ; ಪ್ರಯತ್ನ ಮುಂದುವರಿಸಿದ ಯೋಗೇಶ್ವರ್‌
Last Updated 20 ನವೆಂಬರ್ 2020, 6:06 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಪ್ರಭಾವಿ ರಾಜಕೀಯ ಮುಖಂಡರಲ್ಲಿ ಒಬ್ಬರಾದ ಸಿ.ಪಿ. ಯೋಗೇಶ್ವರ್‌ಗೆ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಆದರೂ ಅವಕಾಶ ಸಿಗುತ್ತ?

ಇದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಹಾಗೂ ಸಿಪಿವೈ ಅಭಿಮಾನಿಗಳಲ್ಲಿ ಸದ್ಯ ಮನೆಮಾಡಿರುವ ಕುತೂಹಲ. ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆದಿದ್ದು, ಮುಖ್ಯಮಂತ್ರಿಗಳು ಸಹ ದೆಹಲಿ ಪ್ರವಾಸ ಮುಗಿಸಿ ಬಂದಿದ್ದಾರೆ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಕುತೂಹಲ ಮನೆ ಮಾಡಿದೆ. ಕೆಲ ತಿಂಗಳ ಹಿಂದಷ್ಟೇ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆ ಆಗಿರುವ ಯೋಗೇಶ್ವರ್‌ ಅದಕ್ಕೆ ಬಡ್ತಿ ಎಂಬಂತೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದಾರೆ. ಈ ಬಾರಿ ಅವರಿಗೆ ಅವಕಾಶ ಪಕ್ಕಾ ಎನ್ನುವುದು ಅವರ ಅಭಿಮಾನಿಗಳ ಮಾತು.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಜೆಡಿಎಸ್‌-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಯೋಗೇಶ್ವರ್‌ ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರಣಕ್ಕೆ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ಮೂರು ಬಾರಿ ಕಡೆಯ ಗಳಿಗೆಯಲ್ಲಿ ಅವರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಈ ಬಾರಿ ವಿಸ್ತರಣೆ ಸರ್ಕಸ್‌ನಲ್ಲೂ ಯೋಗೇಶ್ವರ್‌ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸದ್ಯ ಜಿಲ್ಲೆಯವರೇ ಆದ ಡಿ.ಕೆ. ಶಿವಕುಮಾರ್‍ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಚನ್ನಪಟ್ಟಣವನ್ನು ಪ್ರತಿನಿಧಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಮನಗರವೂ ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ನೆಲೆ ಒದಗಿಸಬಲ್ಲ ಸಮರ್ಥ ನಾಯಕತ್ವದ ಅಗತ್ಯ ಇದೆ. ಸಿಪಿವೈ ಸಹ ಈ ಅವಕಾಶ ಬಳಸಿಕೊಳ್ಳಲು ಯೋಜಿಸಿದ್ದಾರೆ. ಸಚಿವ ಸ್ಥಾನದ ಮೂಲಕ ಆ ಅವಕಾಶ ದಕ್ಕಿಸಿಕೊಳ್ಳುವ ಇರಾದೆ ಅವರದ್ದು.

ನಿರಾಸೆ: ಚನ್ನಪಟ್ಟಣದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯೋಗೇಶ್ವರ್‌ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಎದುರು ಪರಾಭವಗೊಂಡಿದ್ದರು. ನಂತರ ಕೆಲವು ತಿಂಗಳು ರಾಜಕೀಯ ಅಜ್ಞಾತವಾಸ ಅನುಭವಿಸಿದ್ದ ಅವರು ಹುಣಸೂರು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದರು. ನಂತರದಲ್ಲಿ ಸಂಪುಟ ವಿಸ್ತರಣೆ ವೇಳೆ ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕೇಬಿಟ್ಟಿತು ಎಂದು ಅವರ ಬೆಂಬಲಿಗರು ಚನ್ನಪಟ್ಟಣದಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಅಂತಿಮವಾಗಿ ಮಂತ್ರಿ ಸ್ಥಾನ ಕೈ ತಪ್ಪಿತ್ತು. ಇದರಿಂದ ಬೇಸರಗೊಂಡಿದ್ದ ಯೋಗೇಶ್ವರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು
ಹಾಜರಾಗಿದ್ದರು.

ಸಿಪಿವೈ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕಾಂಗ್ರೆಸ್‌ ಬಿಟ್ಟು ಕಮಲ ಪಾಳಯ ಸೇರಿ ಅರಣ್ಯ ಸಚಿವರಾಗಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದ ಕಾರಣ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆದ್ದು ನಂತರ ಕಾಂಗ್ರೆಸ್‌ ಸರ್ಕಾರ ಬೆಂಬಲಿಸಿದ್ದರು. 2018ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಬಿಜೆಪಿಗೆ ಜಿಗಿದಿದ್ದರು. ಈ ಪಕ್ಷಾಂತರದ ಕಾರಣಕ್ಕೆ ಹಲವು ಬಾರಿ ಕಡೆ ಕ್ಷಣದಲ್ಲಿ ಅವಕಾಶ ವಂಚಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT