ಗುರುವಾರ , ಮೇ 26, 2022
31 °C
cabinet meeting approvals 2 lAkh new houses

ಸಚಿವ ಸಂಪುಟ ಸಭೆ: ಹೊಸ ಯೋಜನೆಯಡಿ 2 ಲಕ್ಷ ಮನೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆಗಳಿಗಾಗಿ ಅರ್ಜಿ ಸಲ್ಲಿಸಿ ಮನೆಗಳನ್ನು ಪಡೆಯಲು ಸಾಧ್ಯವಾಗದ ಸುಮಾರು 2 ಲಕ್ಷ ಫಲಾನುಭವಿಗಳಿಗೆ ಹೊಸ ಯೋಜನೆಯಡಿ ಮನೆ ಕಟ್ಟಿಸಿಕೊಡಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘₹5 ಸಾವಿರ ಮೊತ್ತದಲ್ಲಿ ಒಂದು ಮನೆ ಕಟ್ಟಿಕೊಡುವ ವಸತಿ ಯೋಜನೆ ಇದ್ದಾಗಿನ ಕಾಲದಿಂದಲೂ ವಿವಿಧ ಕಾರಣಗಳಿಂದಾಗಿ ಫಲಾನುಭವಿಗಳು ಮನೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಅತ್ಯಂತ ಕಡಿಮೆ ಮೊತ್ತದ ವಸತಿ ಯೋಜನೆಗಳಡಿ ಮನೆ ಕಟ್ಟಿಸುವುದಕ್ಕೂ ಸಾಧ್ಯವಿರಲಿಲ್ಲ. ಹೀಗಾಗಿ ಫಲಾನುಭವಿಗಳು ಮನೆಗಳನ್ನು ಕಟ್ಟಿಸಿಕೊಂಡಿರಲಿಲ್ಲ. ಕೆಲವು ಯೋಜನೆಗಳಡಿ ಮನೆಗಳು ಅಪೂರ್ಣವಾಗಿವೆ, ಇನ್ನು ಕೆಲವು ಯೋಜನೆಗಳಲ್ಲಿ ಮನೆಗಳ ನಿರ್ಮಾಣವೇ ಆರಂಭವಾಗಿಲ್ಲ. ಆದ್ದರಿಂದ ಇವೆಲ್ಲವನ್ನೂ ರದ್ದು ಮಾಡಿ ಹೊಸದಾಗಿ ಅರ್ಜಿ ಕರೆಯಲಾಗುವುದು. ಈ ರೀತಿ ಸುಮಾರು 2 ಲಕ್ಷ ಫಲಾನು
ಭವಿಗಳಿಗೆ ಮನೆ ಕಟ್ಟಿಸಿ ಕೊಡಲಾಗು ವುದು’ ಎಂದರು.

ಠೇವಣಿದಾರರ ಹಿತಾಸಕ್ತಿ ಕಾಯ್ದೆ: ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಠೇವಣಿದಾರರ ಎಲ್ಲ ಪ್ರಕರಣಗಳನ್ನು ಒಂದುಗೂಡಿಸಿ ವಿಚಾರಣೆ ನಡೆಸಲು ಅನುಕೂಲವಾಗುವಂತೆ ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಯಿತು ಎಂದು ಅವರು ತಿಳಿಸಿದರು.

ಕೆಲವು ಪ್ರಕರಣಗಳಲ್ಲಿ 5 ರಿಂದ 10 ದೂರುಗಳು ದಾಖಲಾಗಿರುತ್ತವೆ. ಇವೆಲ್ಲದರ ವಿಚಾರಣೆ ಪ್ರತ್ಯೇಕವಾಗಿ ನಡೆಸುವುದಕ್ಕಿಂತ ಒಂದೇ ಪ್ರಕರಣವಾಗಿ ವಿಚಾರಣೆ ನಡೆಸಲು ಕಾಯ್ದೆಗೆ ತಿದ್ದುಪಡಿಯ ಅಗತ್ಯವಿತ್ತು ಎಂದು ಅವರು ಹೇಳಿದರು.

---

ಇಂದಿರಾ ಕ್ಯಾಂಟೀನ್‌ ಸ್ಥಳಾಂತರಕ್ಕೆ ಸಮೀಕ್ಷೆ

ಇಂದಿರಾ ಕ್ಯಾಂಟೀನ್‌ಗಳನ್ನು ಜನನಿಬಿಡ ಪ್ರದೇಶಕ್ಕೆ ಸ್ಥಳಾಂತರ ಮಾಡುವ ಸಂಬಂಧ ನಗರಾಭಿವೃದ್ಧಿ ಇಲಾಖೆಯಿಂದ ಸಮೀಕ್ಷೆ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಇಂದಿರಾ ಕ್ಯಾಂಟೀನ್ ನಡೆಸಲು ಶೇ 30 ರಷ್ಟು ಅನುದಾನ ನೀಡುವಂತೆ ಬಿಬಿಎಂಪಿ ಕೇಳುತ್ತಿದೆ. ಅಷ್ಟು ಹಣ ಅವರಿಗೆ ಕೊಟ್ಟು ನಡೆಸುವುದಕ್ಕಿಂತ ರಾಜ್ಯ ಸರ್ಕಾರವೇ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಜನರೇ ಇಲ್ಲದ ಕಡೆಗಳಲ್ಲಿ ನಷ್ಟದಲ್ಲಿ ನಡೆಸುವುದಕ್ಕಿಂತ ಜನನಿಬಿಡ ಪ್ರದೇಶ ಗಳಿಗೆ ಸ್ಥಳಾಂತರಿಸುವುದಕ್ಕೆ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು