ಬುಧವಾರ, ಸೆಪ್ಟೆಂಬರ್ 29, 2021
21 °C

ಕಸ್ತೂರಿರಂಗನ್‌ ವರದಿಗೆ ವಿರೋಧ; ಯಥಾವತ್ತು ಜಾರಿಗೆ ಆಕ್ಷೇಪಿಸಿ ಕೇಂದ್ರಕ್ಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದಂತೆ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯದಲ್ಲಿ ಈಗಿರುವ ಸ್ಥಿತಿಯಲ್ಲೇ ಜಾರಿ ಮಾಡದಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಅರಣ್ಯ ಸಚಿವ ಆನಂದ್ ಸಿಂಗ್‌ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಿದೆ.

ಉಪ ಸಮಿತಿಯ ಸಭೆಯ ಬಳಿಕ  ಸಚಿವ ಆನಂದ್‌ ಸಿಂಗ್‌ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸದಸ್ಯರೂ ಆಗಿರುವ ಕಂದಾಯ ಸಚಿವ ಆರ್‌. ಅಶೋಕ, ‘ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರೋಧಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ವರದಿಯನ್ನು ಯಥಾವತ್ತಾಗಿ ಜಾರಿ ಮಾಡದಂತೆ ಆಗ್ರಹಿಸಿ ಕೇಂದ್ರ ಪತ್ರ ಬರೆಯುವ ತೀರ್ಮಾನವನ್ನು ಸಮಿತಿ ಕೈಗೊಂಡಿದೆ’ ಎಂದರು.

ವರದಿ ಜಾರಿಗೆ ಸಂಬಂಧಿಸಿದ ಪ್ರಕರಣ ಡಿಸೆಂಬರ್‌ 31ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಬರಲಿದೆ. ಜನರ ವಿರೋಧದ ಕುರಿತು ಮಂಡಳಿಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು. ಜನರ ಭಾವನೆಗಳಿಗೆ ವಿರುದ್ಧವಾಗಿ ವರದಿ ಜಾರಿ ಮಾಡದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಅಗತ್ಯವಿದ್ದರೆ ರಾಜ್ಯ ಸರ್ಕಾರದಿಂದ ಕೂಡ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸುವುದಕ್ಕೂ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ. ಕೇರಳದ ಮಾದರಿಯಲ್ಲಿ ರಾಜ್ಯದಲ್ಲೂ ವಿನಾಯ್ತಿಗಳನ್ನು ನೀಡುವುದಕ್ಕೆ ಪೂರಕವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಡಲಾಗುವುದು ಎಂದರು.

ಕಂದಾಯ ಜಮೀನು ವಾಪಸ್‌: ರಾಜ್ಯದಲ್ಲಿ 9 ಲಕ್ಷ ಹೆಕ್ಟೇರ್‌ ಜಮೀನಿನ ಒಡೆತನದ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ವಿವಾದವಿತ್ತು. ಅದನ್ನು ಪರಿಹರಿಸುವ ಪ್ರಯತ್ನ ನಡೆಯುತ್ತಿದೆ. ಡೀಮ್ಡ್‌ ಅರಣ್ಯದ ವ್ಯಾಪ್ತಿಯಲ್ಲಿದ್ದ ಕಂದಾಯ ಜಮೀನುಗಳನ್ನು ವಾಪಸ್‌ ಸುಪರ್ದಿಗೆ ಪಡೆಯಲಾಗುತ್ತಿದೆ. ಈಗಾಗಲೇ 6 ಲಕ್ಷ ಎಕರೆ ಜಮೀನನ್ನು ವಾಪಸ್‌ ಪಡೆಯಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದರು.

ಇನ್ನೂ ಮೂರು ಲಕ್ಷ ಎಕರೆ ಜಮೀನಿನ ಕುರಿತು ಎರಡೂ ಇಲಾಖೆಗಳ ನಡುವೆ ವಿವಾದವಿದೆ. ಶೀಘ್ರದಲ್ಲಿ ಅದನ್ನು ಬಗೆಹರಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು