ಸೋಮವಾರ, ಸೆಪ್ಟೆಂಬರ್ 20, 2021
21 °C

ಬೊಮ್ಮಾಯಿ ಆಯ್ಕೆ ಹಿಂದಿನ ಲೆಕ್ಕಾಚಾರ; ವೀರಶೈವ–ಲಿಂಗಾಯತ ಲಾಬಿಗೆ ಮಣಿದರೇ ವರಿಷ್ಠರು

ವೈ.ಗ. ಜಗದೀಶ್ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಗಾದಿಯಿಂದ ಯಡಿಯೂರಪ್ಪ ಇಳಿಯುವ ಸೂಚನೆ ಪಕ್ಕಾ ಆಗುತ್ತಿದ್ದಂತೆ ಈ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದವರಿಗೆಲ್ಲ ಈಗ ನಿರಾಶೆಯಾಗಿದೆ. ನಾಯಕತ್ವದ ಮೇಲಿನ ‘ಹಕ್ಕು’ ಸಾಧನೆಗೆ ದೆಹಲಿಯಾತ್ರೆ ಮಾಡದ, ವರಿಷ್ಠರನ್ನು ಪದೇ ಪದೇ ಒಲೈಸುವ ಉಸಾಬರಿಗೆ ಹೋಗದ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಅದೃಷ್ಟ ಒಲಿದು ಬಂದಿರುವುದು ಬಿಜೆಪಿಯವರನ್ನೇ ಅಚ್ಚರಿಗೆ ದೂಡಿದೆ.

ವೀರಶೈವ–ಲಿಂಗಾಯತರ ಪ್ರಶ್ನಾತೀತ ನಾಯಕ ಯಡಿಯೂರಪ್ಪ ಅವರು ‘ಸ್ವಯಮಾಸಕ್ತಿ’ಯಿಂದ ರಾಜೀನಾಮೆ ಕೊಡಲು ಮುಂದಾದ ಮೇಲೆ ಅವರ ಬೆಂಬಲಕ್ಕೆ ನಿಂತಿದ್ದ ಪ್ರಭಾವಿ ಸಮುದಾಯ ಅವರನ್ನೇ ಮುಂದುವರಿಸಬೇಕು ಎಂಬ ಹಕ್ಕೊತ್ತಾಯ ಮಾಡಿತ್ತು. ಮಠ ಬಿಟ್ಟು ಬೀದಿಗೆ ಬಂದಿದ್ದ ಸ್ವಾಮೀಜಿಗಳು ಸಮಾವೇಶ ನಡೆಸಿ ಯಡಿಯೂರಪ್ಪ ಅವರನ್ನೇ ಮುಂದುವರಿಸಬೇಕು ಎಂಬ ಬೇಡಿಕೆ ಮಂಡಿಸಿದ್ದರು. ಅವರನ್ನು ಬದಲಿಸಿದರೆ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಬೇಕು ಎಂಬ ವಾದವನ್ನೂ ಮುಂದಿಟ್ಟಿದ್ದರು. ಪ್ರಭಾವಿ ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೇರೆ ಸಮುದಾಯದವರಿಗೆ ಪಟ್ಟ ಕಟ್ಟಿದ್ದರೆ ಮುಂದೆ ಬೀಳಬಹುದಾದ ‘ಹೊಡೆತ’ಕ್ಕೆ ಬೆಚ್ಚಿದ ಬಿಜೆಪಿ ವರಿಷ್ಠರು ಕೊನೆಗೂ ಅದೇ ಸಮುದಾಯಕ್ಕೆ ಸೇರಿದ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ತೀರ್ಮಾನಿಸಿಬಿಟ್ಟಿದ್ದಾರೆ. 2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆಯ ಮುಂದಾಲೋಚನೆ ಇದರ ಹಿಂದೆ ಕೆಲಸ ಮಾಡಿದ್ದನ್ನೂ ಅಲ್ಲಗಳೆಯಲಾಗದು. ಇವೆಲ್ಲ ತರ್ಕ ಏನೇ ಇದ್ದರೂ ಬಿಜೆಪಿಯ ವರಿಷ್ಠರು ವೀರಶೈವ–ಲಿಂಗಾಯತ ಲಾಬಿಗೆ ಮಣಿದಿರುವುದಂತೂ ಸ್ಪಷ್ಟ.

ಬೊಮ್ಮಾಯಿ ಅವರನ್ನು ಆಯ್ಕೆ ಮಾಡುವ ಮೂಲಕ ಅನೇಕ ತರ್ಕಗಳನ್ನು ಬಿಜೆಪಿ ವರಿಷ್ಠರು ಬದಿಗೆ ಇಟ್ಟಿದ್ದಾರೆ. ಸಂಘ ಪರಿವಾರದ ಮೂಲದವರನ್ನಲ್ಲದೇ ಹೊರಗಿನಿಂದ ಬಂದವರನ್ನೂ ಮುಖ್ಯಮಂತ್ರಿ ಮಾಡಬಹುದು ಎಂಬುದು ಈ ತೀರ್ಮಾನದಿಂದ ಹೊರಬಿದ್ದ ಮೊದಲ ಸಂದೇಶ.

ಆಯ್ಕೆಯ ಹಿಂದಿನ ಲೆಕ್ಕಾಚಾರ: ಲಿಂಗಾಯತರಲ್ಲದವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ಯಡಿಯೂರಪ್ಪ ಅವರ ಒತ್ತಾಸೆಯಾಗಿತ್ತು ಎಂದೂ ಹೇಳಲಾಗುತ್ತಿದೆ.

ಯಡಿಯೂರಪ್ಪನವರ ಜತೆಗೆ ನಿಕಟ ಬಾಂಧವ್ಯ ಹೊಂದಿರುವ, ಕೆಜೆಪಿ ಸೇರಿದಾಗ ಬಿಟ್ಟು ಉಳಿದೆಲ್ಲ ಅವಧಿಯಲ್ಲೂ ತಮ್ಮ ರಾಜಕೀಯ ಮರುಹುಟ್ಟಿಗೆ ಯಡಿಯೂರಪ್ಪನವರನ್ನೇ ತಮ್ಮ ರಾಜಕೀಯ ಗುರು ಎಂದು ನಂಬಿರುವ ಬೊಮ್ಮಾಯಿ ಅವರನ್ನು ಮಾಡಿದರೆ ಅವರ ವಿರೋಧಿಸುವುದಕ್ಕೆ ಮುಂದಾಗಲಾರರು. ಯಡಿಯೂರಪ್ಪ ಅವರ ಸಿಟ್ಟು–ಸೆಡವು, ದೌರ್ಬಲ್ಯ–ಶಕ್ತಿಗಳನ್ನು ಕಂಡಿರುವ ಬೊಮ್ಮಾಯಿ ಕೂಡ ನಾನಾ ಮಾರ್ಗಗಳನ್ನು ಬಳಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಒಲಿಸಿಕೊಳ್ಳಬಲ್ಲರು. ಮುಖ್ಯಮಂತ್ರಿ ಆಯ್ಕೆಗೆ ಇದ್ದ ಹೆಸರುಗಳ ಪೈಕಿ ಈ ವಿಷಯದಲ್ಲಿ ಬೊಮ್ಮಾಯಿಯಷ್ಟು ಸಮರ್ಥರು ಮತ್ತೊಬ್ಬರಿಲ್ಲ ಎಂಬುದು ಆಯ್ಕೆಗೆ ಇದ್ದ ಪ್ರಧಾನ ಆದ್ಯತೆ.

ಲಿಂಗಾಯತರ ಒಳಪಂಗಡಗಳ ಪೈಕಿ ರಾಜಕೀಯವಾಗಿ ಪ್ರಭಾವಿಯಾಗಿರುವ ಪಂಚಮಸಾಲಿ, ಬಣಜಿಗ ಮತ್ತು ಗಾಣಿಗರ ಮಧ್ಯೆ ನಾಯಕತ್ವದ ತೀವ್ರ ಪೈಪೋಟಿ ಇದೆ. ಅವರಲ್ಲರನ್ನೂ ಒಗ್ಗೂಡಿಸಿಯೇ ಯಡಿಯೂರಪ್ಪ ನಾಯಕರಾಗಿ ಹೊರಹೊಮ್ಮಿದ್ದರು. ಲಿಂಗಾಯತರ ಪೈಕಿ ‘ಸಾದರು’ ಉಪ ಪಂಗಡಕ್ಕೆ ಸೇರಿದ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದರೆ ಈ ಒಳಜಗಳದ ಪ್ರಮೇಯ ಬರುವುದಿಲ್ಲ ಎಂಬ ಲೆಕ್ಕಾಚಾರವೂ ಇದ್ದೀತು. ಆದರೆ, ಉಪೇಕ್ಷಿಸಲ್ಪಟ್ಟ ಉಳಿದ ಉಪಪಂಗಡಗಳು ಮುಂದಿನ ದಿನಗಳಲ್ಲಿ ತಿರುಗಿ ಬಿದ್ದರೂ ಅಚ್ಚರಿಯೇನಿಲ್ಲ. ಈ ಅಂಶವನ್ನು ವರಿಷ್ಠರು ಸದ್ಯಕ್ಕೆ ಪರಿಗಣನೆಗೆ ತೆಗೆದುಕೊಂಡಂತೆ ಕಾಣಿಸುವುದಿಲ್ಲ.

ರಾಜ್ಯದಲ್ಲಿ ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷದಲ್ಲಿ ವಾಗ್ಮಿಗಳು ಬಲಿಷ್ಠರಾಗಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅವರಂತಹ ವಿರೋಧ ಪಕ್ಷದ ನಾಯಕರು ಇರುವಾಗ ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷವನ್ನು ಎದುರಿಸುವುದು ಸುಲಭವಲ್ಲ. ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಛಾತಿ, ಬಿಜೆಪಿಯಲ್ಲಿ ಅನೇಕರಿಗೆ ಇದೆ. ಆದರೆ, ಮುಖ್ಯಮಂತ್ರಿ ಆಯ್ಕೆ ಪಟ್ಟಿಯಲ್ಲಿ ಇದ್ದ ಹೆಸರಿನವರಿಗಿಂತ ಬೊಮ್ಮಾಯಿ ಸೂಕ್ತ ಆಯ್ಕೆ ಎನಿಸಿದ್ದೀತು.

ತಮ್ಮ ತಂದೆ ಎಸ್‌.ಆರ್. ಬೊಮ್ಮಾಯಿ, ಎಚ್‌.ಡಿ. ದೇವೇಗೌಡ, ಜೆ.ಎಚ್‌. ಪಟೇಲ್‌, ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ನಿಕಟ ಒಡನಾಟ ಹೊಂದಿದವರು ಬೊಮ್ಮಾಯಿ. ಈ ಅನುಭವ ಕೂಡ ಅವರನ್ನು ಮುನ್ನೆಲೆಗೆ ತಂದಿರಬಹುದು.

ಮುಖ್ಯಮಂತ್ರಿಯಾದವರು ತಮ್ಮವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುವುದು ಅನಿವಾರ್ಯ. ವಿರೋಧ ಪಕ್ಷದವರನ್ನು ಒಪ್ಪಿಸಿ, ಅವರನ್ನೂ ಒಲಿಸಿಕೊಂಡು ಸರ್ಕಾರ ನಡೆಸುವುದು ಸವಾಲು. ಜೆಡಿಎಸ್ ವರಿಷ್ಠ ದೇವೇಗೌಡರನ್ನು ತಂದೆಯ ಸಮಾನವಾಗಿ ಕಾಣುವ ಬೊಮ್ಮಾಯಿ, ಒಂದು ಕಾಲದಲ್ಲಿ ಗೌಡರ ನೀಲಿಕಣ್ಣಿನ ಹುಡುಗ. ಬಳಿಕ ಪಕ್ಷ ತೊರೆದು ಹೊರ ಬಂದವರು. ಆದರೆ, ಅವರಿಬ್ಬರ ಒಡನಾಟ ಅದೇ ಮಾದರಿಯಲ್ಲೇ ಇದೆ. ಅಲ್ಲದೇ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಜತೆಗೂ ಅವರು ಸಂಬಂಧ ಕೆಡಿಸಿಕೊಂಡವರಲ್ಲ. ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಎದುರಿಸಿದರೂ ಹಿಂದೆ ಜನತಾಪರಿವಾರದ ಮೂಲದ ಕಾರಣಕ್ಕೆ, ಹಳೆಯ ನಂಟನ್ನು ಇನ್ನೂ ಬೆಸೆದುಕೊಂಡವರು. ಹೀಗೆ ವಿರೋಧ ಪಕ್ಷದವರನ್ನೂ ಎದುರುಹಾಕಿಕೊಂಡು ರಾಜಕಾರಣ ಮಾಡುವುದಕ್ಕಿಂತ, ಮನವರಿಕೆ ಮಾಡಿಕೊಡುವ ಮಾರ್ಗವನ್ನು ಅನುಸರಿಸುತ್ತಾರೆ ಎಂಬ ಭರವಸೆಯೂ ವರಿಷ್ಠರದ್ದಾಗಿದ್ದೀತು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಐದು ವರ್ಷ ಹಾಗೂ ಈಗ ಎರಡು ವರ್ಷ ಸಚಿವರಾಗಿ ಕೆಲಸ ಮಾಡಿರುವ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರದ ದೂರುಗಳು ದಾಖಲಾಗಿಲ್ಲ. ಹಣಕಾಸು, ನೀರಾವರಿ ವಿಷಯದ ಬಗೆಗಿನ ಅವರ ತಿಳಿವಳಿಕೆಗಳು ಹಾಗೂ ಅನುಭವ ಅವರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ತಂದು ಕೂರಿಸಿರುವ ಸಾಧ್ಯತೆಯೂ ಇದೆ. ಇದೆಲ್ಲದರ ಜತೆಗೆ ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿ ಪಟ್ಟ ಕೊಡಬೇಕೆಂಬ ಲೆಕ್ಕಾಚಾರವೂ ಸೇರಿದ್ದೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು