ಮಂಗಳವಾರ, ಅಕ್ಟೋಬರ್ 20, 2020
23 °C
17ರಂದು ಜೀವನದಿ ಕಾವೇರಿಯ ದರ್ಶನ: ಸಾರ್ವಜನಿಕರಲ್ಲಿ ಕೊಡಗು ಜಿಲ್ಲಾಡಳಿತದ ಮನವಿ

ತೀರ್ಥೋದ್ಭವ: ವೃದ್ಧರು ಮನೆಯಲ್ಲಿ ಇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕೋವಿಡ್-19 ಕಾರಣದಿಂದ ಈ ಬಾರಿಯ ತೀರ್ಥೋದ್ಭವವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ತಲಕಾವೇರಿ ತೀರ್ಥೋದ್ಭವ ಜಾತ್ರಾ ಮಹೋತ್ಸವ ಸಂಬಂಧ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ವರ್ಷಗಳಿಗಿಂತ ಈ ಬಾರಿ ಪರಿಸ್ಥಿತಿ ಭಿನ್ನ. ಹೆಚ್ಚು ಜನ ಸೇರಿದರೆ ಸೋಂಕು ಹರಡುವ ಸಾಧ್ಯತೆಯಿದೆ. ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದರು.

ಜಿಲ್ಲೆಯ ಜನರು ಪ್ರಸ್ತುತ ಪರಿಸ್ಥಿತಿ ಅರ್ಥ ಮಾಡಿಕೊಂಡು ಪ್ರವಾಸಿಗರು, ಹಿರಿಯರು, ಮಕ್ಕಳು, ಗರ್ಭಿಣಿ ಮಹಿಳೆಯರು ಹಾಗೂ ಇನ್ನಿತರ ಆರೋಗ್ಯ ಸಮಸ್ಯೆ ಇರುವವರು ಮನೆಯಲ್ಲೇ ಇರಬೇಕು ಎಂದು ಮನವಿ ಮಾಡಿದರು.

ತಲಕಾವೇರಿ– ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಕೋವಿಡ್-19 ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಸ್ವಯಂ ಸೇವಕರು, ಪೂಜೆ ಸಲ್ಲಿಸುವ ಅರ್ಚಕರು ಭಾಗಮಂಡಲ ವ್ಯಾಪ್ತಿಯ ವರ್ತಕರು ಸೇರಿದಂತೆ ಮತ್ತಿತರರಿಗೆ ಜಾತ್ರಾ ಮಹೋತ್ಸವಕ್ಕೂ ಮುಂಚಿತವಾಗಿ ಕೋವಿಡ್ ಪರೀಕ್ಷೆಯನ್ನು ಆರ್‌ಟಿಪಿಸಿಆರ್‌ ಮೂಲಕ ನಡೆಸಬೇಕು. 2 ಮೊಬೈಲ್ ತಪಾಸಣಾ ಘಟಕ ಭಾಗಮಂಡಲಕ್ಕೆ ಕಳುಹಿಸಬೇಕು ಎಂದು ಡಿಎಚ್ಒಗೆ ಸೂಚನೆ ನೀಡಿದರು.

ಭಾಗಮಂಡಲ ಹಾಗೂ ತಲಕಾವೇರಿಯಲ್ಲಿನ ಬೀದಿ ದೀಪ ಸರಿಪಡಿಸಬೇಕು. ಲೋಕೋಪಯೋಗಿ ಇಲಾಖೆ ವತಿಯಿಂದ ಬಾಕಿಯಿರುವ ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಇದರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ರಸ್ತೆ ಬದಿಯಲ್ಲಿರುವ ಮರಗಳನ್ನು 2 ದಿನಗಳ ಒಳಗಾಗಿ ತೆರವುಗೊಳಿಸುವಂತೆ ಸೂಚನೆ ನೀಡಿದರು.

ಎಂದಿನಂತೆ ಸಾಮಾನ್ಯ ಮಾರ್ಗದ ಬಸ್‍ಗಳು ಸಂಚರಿಸಲಿವೆ. ಬಸ್‍ನಲ್ಲಿ ಮಿತಿಗಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಳ್ಳದಂತೆ ಚಾಲಕರು ಮತ್ತು ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ಅವರು ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡೂ, ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖೆಯ ಇಇ ಮದನ್ ಮೋಹನ್, ಎಇಇ ಶಿವರಾಂ, ಚೆಸ್ಕಾಂ ಇಇ ಸೋಮಶೇಖರ್, ಭಗಂಡೇಶ್ವರ ತಲಕಾವೇರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಭಾಗಮಂಡಲ ಪಿಡಿಒ ಅನಿತಾ, ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಸ್.ಎಂ.ಕಾವೇರಪ್ಪ, ಉದಿಯಂಡ ಸುಭಾಷ್ ಹಾಜರಿದ್ದರು.

‘ಸರಳ ದಸರಾ ಆಚರಣೆಗೆ ಆದ್ಯತೆ’

ಪ್ರತೀ ವರ್ಷವು ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ದಸರಾವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಿಸುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ಅವರು ಹೇಳಿದರು.

ನಗರದ ನಗರಸಭೆ ಕೌನ್ಸಲಿಂಗ್ ಸಭಾಂಗಣದಲ್ಲಿ ಮಡಿಕೇರಿ ದಸರಾ ಸಂಬಂಧ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಿಸುವ ಕಾರ್ಯವಾಗಬೇಕು. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಸಾಂಪ್ರದಾಯಕವಾಗಿ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾ ಆರಂಭಗೊಳ್ಳುತ್ತದೆ. ಈ ನಿಟಿನಲ್ಲಿ ಸಂಪ್ರದಾಯ ಬದ್ಧವಾಗಿ ಕರಗದ ಆಚರಣೆ ನಡೆಯುವಂತಾಗಲಿ. ಜೊತೆಗೆ ಕರಗ ಹೊರುವವರು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಸುನೀಲ್ ಸುಬ್ರಮಣಿ ಅವರು ಸಲಹೆ ನೀಡಿದರು.

ಪಂಪಿನ ಕೆರೆಯಲ್ಲಿ ಅ.17ರ ಸಂಜೆ 5 ಗಂಟೆಗೆ ಕರಗ ಪೂಜೆ ಆರಂಭಗೊಳ್ಳುತ್ತದೆ. ಈ ಸಂದರ್ಭ 4 ಕರಗಗಳು ಪಂಪಿನ ಕೆರೆಯಿಂದ ಸುಮಾರು ಅರ್ಧ ಗಂಟೆಗಳ ಅಂತರದಲ್ಲಿ ಹೊರ ಬಂದರೆ ಅಂತರವನ್ನು ಕಾಯ್ದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಕರಗದ ಜೊತೆಗೆ ಸಾಗುವವರು ಕಡ್ಡಾಯವಾಗಿ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಸರ್ಕಾರದ ನಿಯಮಾವಳಿಯನ್ನು ಪಾಲಿಸುವಂತಾಗಬೇಕು ಎಂದು ಅವರು ಹೇಳಿದರು.

ದಸರಾ ಸಮಿತಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕರಗ ಮತ್ತು ದಸರಾ ಆಚರಣೆ ಸಂಬಂಧ ಸರ್ಕಾರದ ನಿಯಮಗಳನ್ನು ಪಾಲಿಸಲಾಗುವುದು. ಜಿಲ್ಲಾಡಳಿತದೊಂದಿಗೆ ಸಮನ್ವಯತೆಯಿಂದ ದಸರಾ ಆಚರಣೆಯನ್ನು ಸರಳವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ, ಈ ಬಾರಿ ಸರಳ ದಸರಾಗೆ ಒತ್ತು ನೀಡಬೇಕಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದೆ. ಈ ನಿಟ್ಟಿನಲ್ಲಿ ಜನರ ಆರೋಗ್ಯ ರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂದರು.

ದಶಮಂಟಪ ಸಮಿತಿ ಅಧ್ಯಕ್ಷ ಗುರುರಾಜ್, ಕರಗ ಸಮಿತಿಯ ಪಿ.ಪಿ ಚಾಮಿ, ಎಂ.ಹರೀಶ್, ರವಿಕುಮಾರ್, ದಿನೇಶ್ ಪೂಜಾರಿ ಅವರು ಕರಗ ಆಚರಣೆಯ ಸಂಬಂಧ ಸಭೆಗೆ ಹಲವು ಮಾಹಿತಿ ನೀಡಿದರು.

ಜಿ.ಪಂ ಸಿಇಒ ಭನ್ವರ್‌ ಸಿಂಗ್‌ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು