ಸೋಮವಾರ, ಅಕ್ಟೋಬರ್ 18, 2021
22 °C
‘ಓದಿನ ನಡುವೆ ಗಿಟಾರ್‌ ಅಭ್ಯಾಸ’

ಸಿಇಟಿ ರ‍್ಯಾಂಕಿಂಗ್‌ನಲ್ಲಿ ದಾಖಲೆ; ಮೇಘನ್ ಸಾಧನೆಯ ಬಗ್ಗೆ ತಂದೆ-ತಾಯಿ ಏನಂದರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮಗನ ಮೇಲೆ ಯಾವ ಒತ್ತಡವನ್ನೂ ಹಾಕುತ್ತಿರಲಿಲ್ಲ. ಆತ ಓದುವುದರ ಜೊತೆಗೆ ಆಗಾಗ ಗಿಟಾರ್ ಅಭ್ಯಾಸವನ್ನೂ ಮಾಡುತ್ತಿದ್ದ’ ಎಂದು ಎಚ್.ಕೆ.ಮೇಘನ್‌ ಅವರ ತಂದೆ ಕೃಷ್ಣಯ್ಯ ತಿಳಿಸಿದರು.

ಇಲ್ಲಿನ ರಾಮಕೃಷ್ಣನಗರದ ನಿವಾಸಿಯಾಗಿರುವ ಕೃಷ್ಣಯ್ಯ ಕೆ.ಆರ್.ನಗರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಅವರ ಪತ್ನಿ ಲೀಲಾವತಿ, ನೃಪತುಂಗ ಕನ್ನಡ ಮಾಧ್ಯಮ ವಿಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲೆ.

ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಪಿಯು ವ್ಯಾಸಂಗ ಮಾಡಿದ ಮೇಘನ್‌ 500 ಅಂಕಗಳಿಗೆ 494 ಅಂಕ ಗಳಿಸಿದ್ದರು. ಎನ್‌ಟಿಎಸ್‌ಇ ಸ್ಕಾಲರ್‌ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ, ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನೆ (ಕೆವೈಪಿವೈ) ಪರೀಕ್ಷೆಯಲ್ಲಿ 29ನೇ ರ‍್ಯಾಂಕ್, ಜೆಇಇಯಲ್ಲಿ ಶೇ 99.73ರಷ್ಟು ಅಂಕ, ಅಂತರರಾಷ್ಟ್ರೀಯ ಜೀವವಿಜ್ಞಾನ ಒಲಂಪಿಯಾಡ್‌ನ ಎರಡು ಹಂತಗಳಲ್ಲಿ ಅರ್ಹತೆ ಪಡೆದಿದ್ದಾರೆ.

‘ರ‍್ಯಾಂಕ್ ಪಡೆಯುವುದಕ್ಕಿಂತಲೂ ಉತ್ತಮವಾಗಿ ಓದಬೇಕು ಎನ್ನವುದಷ್ಟೇ ಆತನ ಗುರಿಯಾಗಿತ್ತು. ಅದಕ್ಕಾಗಿ ಆತ ಪ್ರತ್ಯೇಕ ವೇಳಾಪಟ್ಟಿ ಹಾಕಿಕೊಂಡು ಸತತ ಅಭ್ಯಾಸ ಮಾಡುತ್ತಿದ್ದ. ಎರಡು ವರ್ಷದ ಮುಂಚೆಯೇ ರಸಾಯನ ವಿಜ್ಞಾನವನ್ನು ಸಂಪೂರ್ಣ ಮನವರಿಕೆ ಮಾಡಿಕೊಟ್ಟಿದ್ದೆವು’ ಎಂದು ಲೀಲಾವತಿ ಹೇಳಿದರು.

‘ಕಠಿಣ ಅಭ್ಯಾಸಕ್ಕೆ ದೊರೆತ ಫಲ’
ಮಂಗಳೂರು: ‘ರ್‍ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ, ಎರಡನೇ ರ್‍ಯಾಂಕ್ ಬರಬಹುದೆಂದು ಊಹಿಸಿರಲಿಲ್ಲ’ ಎಂದು ರೀತಮ್ ಬಿ. ಪ್ರತಿಕ್ರಿಯಿಸಿದರು.

ಬಿ.ಎಸ್ಸಿ (ಕೃಷಿ)ಯಲ್ಲಿ 2ನೇ ರ್‍ಯಾಂಕ್, ನಿಸರ್ಗ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಪಶು ವಿಜ್ಞಾನ ಮತ್ತು ‘ಬಿ’ ಫಾರ್ಮಾ ವಿಭಾಗದಲ್ಲಿ 3ನೇ ರ್‍ಯಾಂಕ್ ಪಡೆದಿರುವ ರೀತಮ್, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿ. ಅವರು ಕೋಲಾರದಲ್ಲಿ ರೇಡಿಯಾಲಜಿಸ್ಟ್ ಆಗಿರುವ ಡಾ. ಬಯ್ಯಪ್ಪರೆಡ್ಡಿ ಮತ್ತು ಭಾರತಿ ದಂಪತಿ ಪುತ್ರ.

‘ಕೋವಿಡ್–19 ಕಾರಣಕ್ಕೆ ಆನ್‌ಲೈನ್ ಕೋಚಿಂಗ್ ಪಡೆಯುತ್ತಿದ್ದೆ. ಕಾಲೇಜಿನಲ್ಲಿ ನಿರಂತರವಾಗಿ ನಡೆಸುತ್ತಿದ್ದ ಅಣಕು ಪರೀಕ್ಷೆ ನೆರವಾಯಿತು. ದಿನಕ್ಕೆ 8–10 ತಾಸು ಅಭ್ಯಾಸ ಮಾಡುತ್ತಿದ್ದೆ. ನೀಟ್ ಪರೀಕ್ಷೆ ಬರೆದಿದ್ದು, ಅದರಲ್ಲೂ ಒಳ್ಳೆಯ ರ್‍ಯಾಂಕ್ ಬರುವ ನಿರೀಕ್ಷೆ ಇದೆ. ವೈದ್ಯನಾಗುವ ಆಸೆ ಇದೆ. ಸಾಧನೆ ಮಾಡಲು ಬಯಸುವವರು ಪ್ರಥಮ ಪಿಯುಸಿಯಿಂದಲೇ ಕಠಿಣ ಅಭ್ಯಾಸ ಆರಂಭಿಸಬೇಕು’ ಎಂಬು ಸಲಹೆ ನೀಡಿದರು.

‘ಪೋಷಕರು, ಶಿಕ್ಷಕರ ಸಹಕಾರದಿಂದ ಸಾಧನೆ’
ಬೆಂಗಳೂರು: ‘ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಹಾಗೂ ಪೋಷಕರ ಬೆಂಬಲದಿಂದ ಸಾಧನೆ ಸಾಧ್ಯವಾಗಿದೆ’ ಎಂದು ಮಾರತಹಳ್ಳಿಯ ಶ್ರೀ ಚೈತನ್ಯ ಟೆಕ್ನೊ ಶಾಲೆ ವಿದ್ಯಾರ್ಥಿ ವರುಣ್‌ ಆದಿತ್ಯ ಹೇಳಿದರು.

ಸಿಂಗಸಂದ್ರ ನಿವಾಸಿಯಾಗಿರುವ ವರುಣ್‌, ಸಾಫ್ಟ್‌ವೇರ್‌ ಎಂಜಿನಿಯರ್‌ ಶ್ರೀಧರ್‌ ಹಾಗೂ ಭಾವನಾ ಅವರ ಮಗ. ಅವರು ಯೋಗ ಮತ್ತು ನ್ಯಾಚುರೋಪತಿ, ಪಶುವೈದ್ಯಕೀಯ ವಿಷಯಗಳಲ್ಲಿ ದ್ವಿತೀಯ ರ‍್ಯಾಂಕ್‌ ಹಾಗೂ ಬಿ.ಫಾರ್ಮಾ ವಿಷಯದಲ್ಲಿ ಐದನೇ ರ‍್ಯಾಂಕ್‌ ಗಳಿಸಿದ್ದಾರೆ.

‘ಪ್ರತಿನಿತ್ಯ 6ರಿಂದ 8ಗಂಟೆ ಓದುತ್ತಿದ್ದೆ. ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್‌, ಬ್ಯಾಡ್ಮಿಂಟನ್‌ ಆಡುತ್ತಿದ್ದೆ. ವಾರಾಂತ್ಯದಲ್ಲಿ ಸಿನಿಮಾಗಳನ್ನೂ ವೀಕ್ಷಿಸುತ್ತಿದ್ದೆ. ಇದರಿಂದ ಒತ್ತಡ ದೂರವಾಗುತ್ತಿತ್ತು. ಕಷ್ಟ ‍ಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಅಭ್ಯಾಸ ಮಾಡಬೇಕೆಂಬ ಸೂತ್ರ ಅನುಸರಿಸಿದ್ದೆ. ಎಂಬಿಬಿಎಸ್‌ ಓದುವುದು ನನ್ನ ಧ್ಯೇಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು