ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಣಕ್ಯ ವಿಶ್ವವಿದ್ಯಾಲಯ ಮಸೂದೆ ತಕ್ಷಣ ವಾಪಸು ಪಡೆಯಬೇಕು: ಸಿದ್ದರಾಮಯ್ಯ

‘ಚಾಣಕ್ಯ ವಿವಿಗೆ ಭೂ ಹಂಚಿಕೆ– ದೊಡ್ಡ ಹಗರಣ’
Last Updated 22 ಸೆಪ್ಟೆಂಬರ್ 2021, 6:46 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ದೇಶಿತ ‘ಚಾಣಕ್ಯ’ ಖಾಸಗಿ ವಿಶ್ವವಿದ್ಯಾಲಯಕ್ಕೆ ಭೂ ಹಂಚಿಕೆ ದೊಡ್ಡ ಹಗರಣ. ಧ್ವನಿಮತದ ಮೂಲಕ ಅಂಗೀಕಾರ ಆಗಿರುವ ಚಾಣಕ್ಯ ವಿಶ್ವವಿದ್ಯಾಲಯ ಮಸೂದೆಯನ್ನು ತಕ್ಷಣ ರದ್ದುಪಡಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್‌ ವಿರೋಧ ಪಕ್ಷ ನಾಯಕ ಎಸ್.ಆರ್. ಪಾಟೀಲ, ಶಾಸಕರಾದ ರಮೇಶ್ ಕುಮಾರ್, ಕೆ.ಜೆ. ಜಾರ್ಜ್, ಎಚ್.ಕೆ. ಪಾಟೀಲ ಜೊತೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುವ ಸರ್ಕಾರ, ಆಸ್ತಿಯನ್ನು ಖಾಸಗಿಗೆ ಮಾರಾಟ ಮಾಡಲು ಹೊರಟಿರುವುದು ಖಂಡನೀಯ. ಖಾಸಗಿ ವಿಶ್ವವಿದ್ಯಾಲಯ ಮಾಡಲು ಅವಕಾಶ ಕೊಡಬಾರದು. ಜಮೀನು ಪರಭಾರೆ ರದ್ದುಪಡಿಸಲೇಬೇಕು’ ಎಂದರು.

‘ಈ ಮಸೂದೆಯ ಬಗ್ಗೆ ನಾನು ಚರ್ಚೆಗೆ ಅವಕಾಶ ನೀಡುವಂತೆ ಸದನದಲ್ಲಿ ಪರಿಪರಿಯಾಗಿ ಕೇಳಿಕೊಂಡೆ. ಆದರೂ ಅದಕ್ಕೆ ಅವಕಾಶ ಕೊಡಲೇ ಇಲ್ಲ. ಇದರ ವಿರುದ್ಧ ಕಾನೂನಾತ್ಮಕವಾಗಿಯೂ ಹೋರಾಟ ನಡೆಸುತ್ತೇವೆ’ ಎಂದರು.

‘ರಾಜ್ಯ ಸರ್ಕಾರ ಸರ್ಕಾರ ವಿಧಾನಸಭೆಯಲ್ಲಿ ತರಾತುರಿಯಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಿದೆ. ಚಾಣಕ್ಯ ವಿವಿ ಸೆಂಟರ್ ಫಾರ್ ಎಜ್ಯುಕೇಷನ್ ಆ್ಯಂಡ್ ಸೋಷಿಯಲ್ ಸ್ಟಡೀಸ್ ಎಂಬ ಹೆಸರಿನ ಸಂಸ್ಥೆಯಲ್ಲಿ ಇರುವವರೆಲ್ಲರೂ ಆರೆಸ್ಸೆಸ್ನವರು. ದಿವಾಕರ್, ಮಾರುತಿ, ರಾಜಾರಾಂ, ರಾಜೇಂದ್ರ ಜೋಷಿ, ಸಾಯಿನಾಥ್, ಶ್ರೀಧರ್ ಇವರೆಲ್ಲಾ ಯಾವುದೇ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿಲ್ಲ. ಈ ಹಿಂದೆ ಇವರದ್ದು ಯಾವುದೇ ವಿದ್ಯಾ ಸಂಸ್ಥೆಗಳು ಇಲ್ಲ’ ಎಂದರು.

‘ಆರೆಸ್ಸೆಸ್ಸಂಸ್ಥೆಗೆ ಸಚಿವ ಸಂಪುಟ ನಿರ್ಣಯದ ಮೂಲಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೇರಿರುವ ಜಮೀನು ಪರಭಾರೆ ಮಾಡಿದ್ದಾರೆ. ಕೆಐಎಡಿಬಿ ಅಭಿವೃದ್ಧಿಪಡಿಸಿದ ₹ 300 ಕೋಟಿಯಿಂದ ₹ 400 ಕೋಟಿ ಮೌಲ್ಯದ 116.16 ಎಕರೆ ಭೂಮಿಯನ್ನು ಕೇವಲ ₹ 50 ಕೋಟಿಗೆ ನೀಡಲಾಗಿದೆ. ರೈತರಿಗೆ ಪರಿಹಾರವಾಗಿ ಕೊಟ್ಟಿರುವುದು ₹ 175 ಕೋಟಿ. ಸರ್ಕಾರ ಚಾಣಕ್ಯ ಹೆಸರಿನ ಆರ್‌ಎಸ್‌ಎಸ್ ಸಂಸ್ಥೆಗೆ ಬಳುವಳಿಯಾಗಿ ಜಮೀನು ಕೊಟ್ಟಿದೆ. ಇದೊಂದು ಬಹು ದೊಡ್ಡ ಹಗರಣ‘ ಎಂದು ವಾಗ್ದಾಳಿ ನಡೆಸಿದರು.

‘ಎಲ್ಲ ನಿಬಂಧನೆಗಳನ್ನು ಗಾಳಿಗೆ ತೂರಿ ಭೂ ಪರಭಾರೆ ಮಾಡಲಾಗಿದೆ. ಜಮೀನು ಕೊಡುವಾಗ ಮಾರ್ಕೆಟ್ ಮೌಲ್ಯ ಪರಿಗಣಿಸಬೇಕು. ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ತರಾತುರಿಯಲ್ಲಿ ಭೂ ಪರಭಾರೆ ಮಾಡಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಂಪುಟದಲ್ಲಿ ತೀರ್ಮಾನ ಮಾಡಿ ಭೂ ಹಂಚಿಕೆ ಆಗಿದೆ. ಇದು ಮನುವಾದಿಗಳ ವಿಶ್ವವಿದ್ಯಾಲಯ ಆಗಲಿದೆ‘ ಎಂದು ಆರೋಪಿಸಿದರು.

‘ಚಾಣಕ್ಯನ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಆದರೆ, ಆರೆಸ್ಸೆಸ್‌ನವರು ಮನವಾದಿಗಳು. ಚತುವರ್ಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಹೊರಟಿದ್ದಾರೆ. ಸಭಾಧ್ಯಕ್ಷರು ಕೂಡ ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ಬಹಳ ಪ್ರಾಮುಖ್ಯತೆ ಕೊಟ್ಟು ಮಂಡನೆಗೆ ಅವಕಾಶ ಕೊಟ್ಟಿದ್ದಾರೆ. ಏಳೆಂಟು ಮಸೂದೆಗಳು ಇದ್ದರೂ ಅವುಗಳನ್ನು ಬದಿಗಿಟ್ಟು ಎಂಟನೇ ಮಸೂದೆಯನ್ನು ಎತ್ತಿಕೊಂಡಿದ್ದಾರೆ. ಸಭಾಧ್ಯಕ್ಷ ಆದವರು ಪಕ್ಷಪಾತ ಧೋರಣೆ ತೋರಬಾರದು. ಅವರು ನಡೆದುಕೊಂಡ ರೀತಿ ಪಕ್ಷಾತೀತವಾಗಿರಲಿಲ್ಲ. ಇದು ಸ್ವಜನ ಪಕ್ಷಪಾತ‘ ಎಂದೂ ದೂರಿದರು.

ನಿಮ್ಮ ಸರ್ಕಾರ ಅವಧಿಯಲ್ಲಿ ಅವಧಿಯಲ್ಲಿ 30 ಪ್ರಕರಣಗಳಲ್ಲಿ ಅಕ್ರಮ ಭೂ ಪರಭಾರೆ ಮಾಡಲಾಗಿದೆ ಎಂಬ ಆರೋಪ ಇದೆಯಲ್ಲವೇ ಎಂಬ ಪ್ರಶ್ನೆಗೆ, ‘ನಾವು ಸರ್ಕಾರಕ್ಕೆ ನಷ್ಟವಾಗುವ ರೀತಿಯಲ್ಲಿ ಯಾವ ಸಂಸ್ಥೆಗೂ ಭೂಮಿ ಕೊಟ್ಟಿಲ್ಲ. ಕೆಲವೊಂದು ಸಂಸ್ಥೆಗಳ ಹಿನ್ನೆಲೆ ನೋಡಿಕೊಂಡು ಕೊಟ್ಟಿದ್ದೇವೆ. ಅದೂ ಕೂಡ ಬಿಜೆಪಿಯವರ ರೀತಿ ಕಡಿಮೆ ದರಕ್ಕೆ ಕೊಟ್ಟಿಲ್ಲ. ಏನು ಮಾರುಕಟ್ಟೆ ದರ ಇತ್ತೊ ಅದರಂತೆ ಕೊಟ್ಟಿದ್ದೇವೆ. ಯಾವುದೇ ಅಕ್ರಮ ನಡೆಸಿ ಯಾವುದೇ ಸಂಸ್ಥೆಗೆ ಭೂಮಿ ಕೊಟ್ಟಿಲ್ಲ‘ ಎಂದು ಸಮರ್ಥಿಸಿದರು.

ಡಿ.ಕೆ. ಶಿವಕುಮಾರ್ ಮಾತನಾಡಿ, ‘ನಾನೂ ಕೂಡ ವಿದ್ಯಾಸಂಸ್ಥೆ ನಡೆಸುತ್ತಿದ್ದೇನೆ. ಖಾಸಗಿ ವಿಶ್ವವಿದ್ಯಾಲಯ ಹೇಗೆ ಇರಬೇಕು, ಯಾರು ನಡೆಸಬೇಕು ಎಂಬುದು ಮುಖ್ಯವಾಗಿರುತ್ತದೆ. ಆರ್‌ಎಸ್‌ಎಸ್ ಸಂಸ್ಥೆಗೆ ಯಾಕೆ ಹಿಂಬಾಗಿಲಿನಿಂದ ಭೂಮಿ ಕೊಡುತ್ತೀರಿ‘ ಎಂದು ಪ್ರಶ್ನಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT