ಶನಿವಾರ, ಫೆಬ್ರವರಿ 4, 2023
17 °C
15 ಆರ್‌ಒಗಳಿಗೆ ಪೊಲೀಸರ ನೋಟಿಸ್‌

‘ಚಿಲುಮೆ’ ಆಡಳಿತಾಧಿಕಾರಿ ಬಂಧನ: ರಾಜ್ಯಕ್ಕೆ ಬಂದ ಕೇಂದ್ರ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಆರೋಪದಡಿ ‘ಚಿಲುಮೆ’ ಸಂಸ್ಥೆಯ ಆಡಳಿತಾಧಿಕಾರಿ ಕೆ.ಎಂ. ಲೋಕೇಶ್ ಅವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

‘ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಲೋಕೇಶ್, ನಗರದ ಪ್ರದೇಶವೊಂದರಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಂಸ್ಥೆಯ ಸಂಸ್ಥಾಪಕ ರವಿಕುಮಾರ್, ಈತನ ಸಹೋದರ ಕೆಂಪೇಗೌಡ ಸೇರಿದಂತೆ ಏಳು ಜನರನ್ನು 
ಈಗಾಗಲೇ ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ. ಲೋಕೇಶ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದೂ ತಿಳಿಸಿದರು.

‘ಚಿಲುಮೆ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಡಳಿತಾಧಿಕಾರಿ ಲೋಕೇಶ್, ಬಿಬಿಎಂಪಿ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದ. ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಕೆಲಸ ಕೈಗೊಳ್ಳಲು ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಇದರ ಉಸ್ತುವಾರಿಯನ್ನು ಲೋಕೇಶ್ ವಹಿಸಿಕೊಂಡಿದ್ದ’ ಎಂದು ಹೇಳಿದರು.

‘ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಹಾಗೂ ಮತದಾರರ ನೋಂದಣಾಧಿಕಾರಿ ಸಹಯೋಗದಲ್ಲಿ ಕೆಲಸ ಮಾಡುವ ಷರತ್ತು ವಿಧಿಸಲಾಗಿತ್ತು. ಆದರೆ, ಆರೋಪಿ ಲೋಕೇಶ್ ಷರತ್ತು ಉಲ್ಲಂಘಿಸಿ ಸಿಬ್ಬಂದಿಗಳ ಮೂಲಕ ಕೆಲಸ ಮಾಡಿಸಿದ್ದ. ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಿದ ಕೃತ್ಯದಲ್ಲೂ ಈತ ಪ್ರಮುಖ ಪಾತ್ರ ವಹಿಸಿದ್ದ’ ಎಂದರು.

‘ಕೃತ್ಯದ ಬಗ್ಗೆ ದೂರು ನೀಡಿದ್ದ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ ಹಾಗೂ ಚುನಾವಣೆ) ರಂಗಪ್ಪ, ಚಿಲುಮೆ ಸಂಸ್ಥೆ ಹಾಗೂ ಲೋಕೇಶ್ ಹೆಸರು ಪ್ರಸ್ತಾಪಿಸಿದ್ದರು. ಇದೀಗ ಲೋಕೇಶ್ ಬಂಧನವಾಗಿದ್ದು, ಈತನ ವಿಚಾರಣೆಯಿಂದ ಮತ್ತಷ್ಟು ಮಾಹಿತಿ ತಿಳಿಯಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

15 ಆರ್‌ಒಗಳಿಗೆ ನೋಟಿಸ್: ‘ಚಿಲುಮೆ ಸಂಸ್ಥೆ ಸಂಸ್ಥಾಪಕರು ಹಾಗೂ ಸಿಬ್ಬಂದಿಯ ಕೆಲಸದ ಬಗ್ಗೆ ಮಾಹಿತಿ ಪಡೆಯುವುದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯ15 ಆರ್‌ಒಗಳಿಗೆ (ಮತದಾರರ ನೋಂದಣಾಧಿಕಾರಿ) ಹಲಸೂರು ಗೇಟ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ.

‘ಚಿಲುಮೆ ಸಂಸ್ಥೆಯ ಸಿಬ್ಬಂದಿ, ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿದ್ದ ವಿಷಯ ಆರ್‌ಒಗಳಿಗೆ ಗೊತ್ತಿತ್ತು. ಇಷ್ಟಾದರೂ ಅವರು ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಕೃತ್ಯದಲ್ಲಿ ಆರ್‌ಒಗಳ ಪಾತ್ರವಿರುವ ಅನುಮಾನವಿದೆ. ವಿಚಾರಣೆಯಿಂದ ಸತ್ಯ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಾಹಿತಿ ಪಡೆದ ಅಧಿಕಾರಿಗಳು’

ಮತದಾರರ ಮಾಹಿತಿ ಕಳವು ಮತ್ತು ಮಾರಾಟದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಮಂಗಳವಾರ ಕರ್ನಾಟಕಕ್ಕೆ ಬಂದಿದ್ದು, ಮಾಹಿತಿ ಕಲೆ ಹಾಕಿದ್ದಾರೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ಕೊಟ್ಟ ಅಧಿಕಾರಿಗಳು, ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್ ಮೀನಾ ಅವರಿಂದ ಮಾಹಿತಿ ಪಡೆದರು. ಬಳಿಕ, ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರನ್ನು ಕರೆಯಿಸಿಕೊಂಡು ಅವರಿಂದಲೂ ತನಿಖಾ ಪ್ರಗತಿಯ ವಿವರ ಪಡೆದರು. 

‘ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣ ಗಂಭೀರವಾಗಿದೆ. ಹೀಗಾಗಿ, ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯಕ್ಕೆ ಬಂದು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಾಹಿತಿ ಸಂಗ್ರಹಕ್ಕೆ ಕೆಲವರ ಒತ್ತಡ’

ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ಅವರನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರಿಸಿದ್ದಾರೆ. ಜೊತೆಗೆ, ಅವರಿಂದ ಪ್ರಾಥಮಿಕ ಹೇಳಿಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

‘ಮತದಾರರ ವೈಯಕ್ತಿಕ ಮಾಹಿತಿ ಮಾರಾಟ ಮಾಡಿ, ತಪ್ಪು ಮಾಡಿದ್ದೇನೆ. ನನ್ನ ಮೇಲೆ ಕೆಲವರ ಒತ್ತಡವಿತ್ತು. ಹೀಗಾಗಿ, ಮಾಹಿತಿ ಸಂಗ್ರಹಿಸುವ ಕೆಲಸ ಮಾಡಬೇಕಾಯಿತು’ ಎಂದು ರವಿಕುಮಾರ್ ಹೇಳಿಕೆ ನೀಡಿರುವುದಾಗಿ ಗೊತ್ತಾಗಿದೆ.

27 ಲಕ್ಷ ಹೆಸರು ತೆಗೆದಿದ್ದು ಹೇಗೆ: ಡಿಕೆಶಿ

ಬೆಂಗಳೂರು: ‘ಮತದಾರರ ಪಟ್ಟಿಯಲ್ಲಿ ಹೆಸರು ತೆಗೆಯಲು ಅಥವಾ ಸೇರಿಸಲು ಅರ್ಜಿ ನಮೂನೆ 7 ಸಲ್ಲಿಸಬೇಕು. ಈ ಅರ್ಜಿಗಳು ಇಲ್ಲದೆ, ರಾಜ್ಯದಲ್ಲಿ 27 ಲಕ್ಷ ಮತದಾರರ ಹೆಸರು ತೆಗೆದಿದ್ದು ಹೇಗೆ. ಅವುಗಳಿಗೆ ಸಹಿ ಹಾಕಿದವರು ಯಾರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು. ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಚಿಲುಮೆ ಸಂಸ್ಥೆಗೆ ಬೇರೆ ಬೇರೆ ಕೆಲಸವನ್ನು ಸರ್ಕಾರ ನೀಡಿರಬಹುದು. ಆದರೆ, ಆ ಕೆಲಸಗಳಿಗೂ, ಈ ಚುನಾವಣೆ ಸಂಬಂಧಿಸಿದ ಕೆಲಸಗಳಿಗೂ ಬಹಳ ವ್ಯತ್ಯಾಸವಿದೆ’ ಎಂದರು. ‘ಚುನಾವಣಾ ಆಯೋಗದ ಅಧಿಕಾರಿಗಳನ್ನು ಬುಧವಾರ ಭೇಟಿ ಮಾಡಿ ದೂರು ನೀಡುತ್ತೇವೆ. ದೂರು ಕೊಟ್ಟ ನಂತರ ಏನು ದೂರು ಕೊಟ್ಟಿದ್ದೇವೆಂದು ತಿಳಿಸುತ್ತೇವೆ. ಎಲ್ಲವನ್ನೂ ಈಗಲೇ ಬಹಿರಂಗ ಮಾಡುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು