ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ರಾಜೀನಾಮೆ ಕೊಟ್ಟು ಹೊರಡಿ: ಸಿಟಿಜನ್ ಫಾರ್‌ ಡೆಮಾಕ್ರಸಿ ಪತ್ರ

ಎಸ್‌.ಆರ್‌.ಹಿರೇಮಠ, ಸಾಹಿತಿ ದೇವನೂರು ಮಹಾದೇವ ಸೇರಿ 24 ಜನ ಪತ್ರಕ್ಕೆ ಸಹಿ
Last Updated 25 ಜೂನ್ 2021, 1:51 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಮಂತ್ರಿ ಹುದ್ದೆಗೆ ನೀವು ತಕ್ಷಣವೇ ರಾಜೀನಾಮೆ ನೀಡಿ ‘ರಾಷ್ಟ್ರೀಯ ಸರ್ಕಾರ’ ರಚನೆಗೆ ದಾರಿ ಮಾಡಿಕೊಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಸಿಟಿಜನ್‌ ಫಾರ್‌ ಡೆಮಾಕ್ರಸಿ’ ಪತ್ರ ಬರೆದಿದೆ.

ಸಿಟಿಜನ್‌ ಫಾರ್‌ ಡೆಮಾಕ್ರಸಿಯ ಅಧ್ಯಕ್ಷರೂ ಆಗಿರುವ ಎಸ್‌.ಆರ್‌.ಹಿರೇಮಠ, ಸಾಹಿತಿ ದೇವನೂರು ಮಹಾದೇವ ಸೇರಿ 24 ಜನ ಈ ಪತ್ರಕ್ಕೆ ಸಹಿ ಮಾಡಿದ್ದಾರೆ.

‘ನಿಮ್ಮ ಸರ್ಕಾರ ಸ್ವತಂತ್ರ ಭಾರತ ಕಂಡ ಅತ್ಯಂತ ಕೆಟ್ಟ ಸರ್ಕಾರವಾಗಿದೆ. ಆದ್ದರಿಂದ ಈಗಿನ ಕೋವಿಡ್‌–19 ಸಮಸ್ಯೆ, ಸಾಮಾಜಿಕ ಆರ್ಥಿಕ ಮತ್ತು ಆಡಳಿತ ಬಿಕ್ಕಟ್ಟನ್ನು ಸರಿಪಡಿಸಲು ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡ ರಾಜಕೀಯ ದೃಷ್ಟಿಕೋನವುಳ್ಳ ಜನರ ಸರ್ಕಾರ ರಚನೆ ಆಗಬೇಕು. ಅದರಿಂದ ಮಾತ್ರ ದೇಶದ ಎಲ್ಲ ಸಮಸ್ಯೆಗಳಿಗೂ ಪರಿಹಾರ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಮೊದಲಿಗೆ ನೀವು ರಾಜೀನಾಮೆ ನೀಡಬೇಕು. ಆ ಬಳಿಕ ರಾಷ್ಟ್ರಪತಿಯವರು ವರ್ಚುವಲ್‌ ಆಗಿ ಸಂಸತ್‌ ಅಧಿವೇಶನ ಕರೆಯಬೇಕು. ಆ ಮೂಲಕ ರಾಷ್ಟ್ರೀಯ ಸರ್ಕಾರ ರಚನೆಗೆ ದಾರಿ ಮಾಡಿಕೊಡಬೇಕು. ಇದರಿಂದ ಮಾತ್ರ ರಾಷ್ಟ್ರಕ್ಕೆ ಮುಂದೆ ಬರಬಹುದಾದ ಬಿಕ್ಕಟ್ಟನ್ನು ಎದುರಿಸಲು ಸಾಧ್ಯ. ಅಷ್ಟೇ ಅಲ್ಲ ಮೂರನೇ ಕೋವಿಡ್‌ ಅಲೆಯನ್ನು ತಡೆಯುವುದರ ಜತೆಗೆ, ರಾಜಕೀಯ ಸುಧಾರಣೆಗಳನ್ನು ತರಲು ರಾಷ್ಟ್ರೀಯ ಸರ್ಕಾರ ದಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದ್ದಾರೆ.

ನಿಮ್ಮ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸುವುದರ ಬದಲಿಗೆ, ಸಮಸ್ಯೆಯ ಭಾಗವಾಗಿದೆ. 2020 ರ ನವೆಂಬರ್‌ನಿಂದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರೈತರ ಬೇಡಿಕೆಯಂತೆ ಕಾಯ್ದೆ ಹಿಂದಕ್ಕೆ ಪಡೆಯಬೇಕಿತ್ತು. ರಾಷ್ಟ್ರೀಯ ಸರ್ಕಾರ ಬಂದರೆ ಅದನ್ನು ಮಾಡುತ್ತದೆ. ಅದೇ ರೀತಿ ಕಾರ್ಮಿಕ ಕಾಯ್ದೆಯನ್ನು ಹಿಂದಕ್ಕೆ ಪಡೆಯದೇ ಕಾರ್ಮಿಕರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂದು ಕಿಡಿಕಾರಿದ್ದಾರೆ.

ಕೋವಿಡ್‌ಗೆ ಸಾರ್ವತ್ರಿಕವಾಗಿ ಉಚಿತವಾಗಿ ಲಸಿಕೆ ನೀಡುವುದರ ಬದಲು, ಕಂಪನಿಗಳು ಹಣ ಮಾಡಿಕೊಳ್ಳಲು ಅನುಕೂಲವಾಗುವ ಲಸಿಕೆ ನೀತಿಯನ್ನು ಜಾರಿಗೆ ತರಲಾಗಿದೆ. ಕೋವಿಡ್‌ನಿಂದ ಮೃತಪಟ್ಟವರಿಗೆ ₹4 ಲಕ್ಷ ಪರಿಹಾರ ನೀಡುವ ವಿಚಾರದಲ್ಲೂ ಮೋದಿ ಸರ್ಕಾರ ವಿಕ್ಷಿಪ್ತ ಧೋರಣೆ ತಳೆದಿದೆ ಎಂದು ಟೀಕಿಸಿದ್ದಾರೆ.

ಬ್ರ್ಯಾಂಡ್‌ ಮೋದಿ ಆಮ್ಲಜನಕವಿಲ್ಲದೆ ಐಸಿಯುನಲ್ಲಿದೆ. ಆದ್ದರಿಂದ ರಾಜೀನಾಮೆ ಕೊಟ್ಟು ಹೊರಹೋಗಬೇಕು. ದೇಶಕ್ಕೆ ರಾಷ್ಟ್ರೀಯ ಸರ್ಕಾರವೊಂದೇ ಪರಿಹಾರ. ಈ ವಿಷಯವಾಗಿ ಇದೇ 26 ರಂದು ರಾಷ್ಟ್ರೀಯ ಮಟ್ಟದ ವೆಬಿನಾರ್‌ವೊಂದನ್ನು ಏರ್ಪಡಿಸಲಾಗಿದೆ ಎಂದೂ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT