ಸೋಮವಾರ, ಡಿಸೆಂಬರ್ 5, 2022
18 °C

ಸತ್ಯಸಾಯಿ ಬಾಬಾ ಪ್ರಾರ್ಥಿಸಿ ಕ್ಯಾನ್ಸರ್‌ನಿಂದ ಚೇತರಿಕೆ ಕಂಡಿದ್ದ ತಾಯಿ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ತಾಯಿಯವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಬಾಬಾ ಅವರನ್ನು ಪ್ರಾರ್ಥಿಸಿದಾಗ ಚೇತರಿಸಿಕೊಂಡರು ಎಂದು ಮುಖಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ಪುಟ್ಟಪರ್ತಿಯ ಪ್ರಶಾಂತಿ ನಿಲಯಂ ವತಿಯಿಂದ ಆಯೋಜಿಸಿದ್ದ ಶ್ರೀ ಸತ್ಯಸಾಯಿ ಡಿಜಿಟಲ್ ಮ್ಯೂಸಿಯಂ ಅನ್ನು ಉದ್ಘಾಟಿಸಿ ಮಾತನಾಡಿದರು.

ಸಂಸಾರದ ಕಟ್ಟುಪಾಡುಗಳಿಂದ ದೂರಾಗಿ ಸತ್ಯಸಾಯಿಬಾಬಾ ಮಾನವ ಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಗಂಧದ ಕೊರಡಿನಂತೆ ತೇಯ್ದಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

ದೈವಿ ಪುರುಷ: ‘ಇಲ್ಲಿಗೆ ಭೇಟಿ ನೀಡಿ ನನ್ನಲ್ಲಿ ಪುನೀತ ಭಾವ ಮೂಡಿದೆ. ಸಾಯಿಬಾಬಾ ಅವರ ಸಂಪೂರ್ಣ ದರ್ಶನವಾಗುವ ಮ್ಯೂಸಿಯಂ ಉದ್ಘಾಟನೆ ಮಾಡಿದ್ದೇನೆ. ಸತ್ಯಸಾಯಿಬಾಬಾ ಸಾಮಾನ್ಯ ಜನರಲ್ಲಿ ಅವತಾರ ಪುರುಷರು ಎಂದು ಕರೆಯುತ್ತಾರೆ. ನಿಜವಾದ ಬಾಬಾ ಅವರನ್ನು ಅರಿಯಲು ನಮ್ಮ ಮನದಾಳದಲ್ಲಿ ದೈವತ್ವ ಬೇಕು. ಅವರು ದೈವತ್ವದ ಪ್ರತಿರೂಪ. ಇತರರಿಗೆ ದೈವತ್ವದ ಪರಿಮಳವನ್ನು ಬಿಟ್ಟುಹೋಗಿರುವ ದೈವಿ ಪುರುಷ. ಯುಗಪುರುಷರು ಮನುಷ್ಯರಾಗಿ ಹುಟ್ಟಿ ದೇವಮಾನವರಾಗುತ್ತಾರೆ. ಸಾಯಿಬಾಬಾ ಅವರು ಭೂಮಿಯಲ್ಲಿ ಪ್ರೀತಿ, ವಿಶ್ವಾಸ, ವಾತ್ಸಲ್ಯವನ್ನು ಬಿಟ್ಟುಹೋಗಿದ್ದಾರೆ. ಅವರ ಬೋಧನೆಗಳಲ್ಲಿ ಪರಮಾತ್ಮನಲ್ಲಿ ಲೀನನಾಗುವ ದಾರಿಯನ್ನು ತೋರಿದ್ದಾರೆ ಎಂದರು. 

ಜಗತ್ತನ್ನು ಮೀರಿದ ಅಸ್ತಿತ್ವ: ಭಕ್ತಿಯ ಮಾರ್ಗವನ್ನು ತೋರಿಸಿದ್ದಾರೆ. ಭಗವಂತನೊಳಗೆ ಲೀನನಾಗುವುದು ಹೇಗೆಂದು ಬಾಬಾ ಅವರು ನಡೆದು ನಮಗೆ ತಿಳಿಸಿದ್ದಾರೆ. ಉದ್ದೇಶ ಪೂರ್ತಿ ಮಾಡಿ ಸೃಷ್ಟಿಕರ್ತನಲ್ಲಿ ಲೀನರಾಗಿದ್ದಾರೆ. ಬಾಬಾ ಅವರಿಗೆ ಹುಟ್ಟು ಸಾವು ಇಲ್ಲ. ಕಾಲಾತೀತವಾಗಿ ಇರುವವರು. ಜಗತ್ತನ್ನು ಮೀರಿ ಅವರ ಅಸ್ತಿತ್ವವಿದೆ. ಇವೆಲ್ಲವನ್ನು ಅನುಭವಿಸಬೇಕಾದರೆ ನಮ್ಮೊಳಗೆ ದೈವತ್ವದ ಅಂಶವಿರಬೇಕು. ದೈವತ್ವನ್ನು ದೈವತ್ವ ಮಾತ್ರ ಸಂಪರ್ಕಿಸಬಲ್ಲದು. ಹೃದಯ ಮತ್ತು ಆತ್ಮಗಳ ಪಾವಿತ್ರ್ಯತೆಯೇ ದೈವತ್ವ. ಕಾಮ, ಕ್ರೋಧ, ಮದ, ಮತ್ಸರಗಳ ಸಂಕೋಲೆಯಿಂದ ಆಚೆ ಬರುವುದೇ ಶುದ್ಧತೆ. ತಾಮಸ ಗುಣಗಳನ್ನು ಬಿಟ್ಟರೆ, ಶುದ್ಧತೆ ಉಂಟಾಗುತ್ತದೆ. ಅದನ್ನೇ ಸಾಯಿಬಾಬಾ ಬೋಧಿಸಿದರು. ಅವರ ಮಾರ್ಗದರ್ಶನದಲ್ಲಿ ನಡೆದರೆ, ನಾವು ದೈವತ್ವಕ್ಕೆ ಹತ್ತಿರವಾಗಬಹುದು ಎಂದು ಬೊಮ್ಮಾಯಿ ಹೇಳಿದರು. 

ಬಾಬಾ ಅವರ ಸಂದೇಶದಿಂದ ಸಸ್ಯಾಹಾರಿಯಾದೆ
ಇಲ್ಲಿಗೆ ಭೇಟಿ ನೀಡಿರುವುದು ನನ್ನ ಬದುಕಿನ ದಿವ್ಯ ಗಳಿಗೆಗಳನ್ನು ಮರುಕಳಿಸಿದೆ. 1998ರಲ್ಲಿ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಒಂದು ಆಹಾರ ಪದ್ದತಿಯ ಕುರಿತಾದ ಪುಸ್ತಕದ ನೂರು ಪುಟಗಳನ್ನು ಓದಿದ್ದೆ ಎಂದರು. ನಾನು ಹೇಳಬೇಕಾಗಿದ್ದು ಪುಸ್ತಕದಲ್ಲಿದೆ, ಅದೇ ನನ್ನ ಸಂದೇಶ ಎಂದು ಬಾಬಾ ಮಾತನಾಡದೆಯೇ ತಿಳಿಸಿದ್ದರು ಎಂದರು. ಅಂದಿನಿಂದ ತಾವು ಸಸ್ಯಾಹಾರಿಗಳಾಗಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.  ಸ್ಪೂರ್ತಿ ಮತ್ತು ದೈವತ್ವದ ಅನುಭೂತಿಯನ್ನು ಈ ಸ್ಥಳ ನೀಡಿದೆ ಎಂದರು.

 ‌ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಸಾಯಿ ಬಾಬಾ ಅವರಿಗೆ ಆರಂಭ, ಅಂತ್ಯಗಳಿಲ್ಲ.  ಆದರೆ ಅವರು ನಿತ್ಯ. ಪ್ರತಿಕ್ಷಣವೂ ಅವರು ಬದುಕುತ್ತಿದ್ದಾರೆ. ದೈವತ್ವ ಎನ್ನುವುದು ಅಮರ ಎಂದರು. ತಮ್ಮ ತಾಯಿಯವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಬಾಬಾ ಅವರನ್ನು ಪ್ರಾರ್ಥಿಸಿದಾಗ ಚೇತರಿಸಿಕೊಂಡರು ಎಂದು ನೆನಪು ಮಾಡಿಕೊಂಡ ಮುಖ್ಯಮಂತ್ರಿಗಳು  ಪ್ರಧಾನಮಂತ್ರಿಗಳೂ ಸಹ  ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಯಿಬಾಬಾ ಭಕ್ತರು ಎಂದು ತಿಳಿಸಿದ್ದರು ಎಂದರು.

ಶಾಸಕ ಅರವಿಂದ ಲಂಬಾವಳಿ, ಸತ್ಯಸಾಯಿ ಆಶ್ರಮ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ರತ್ನಾಕರ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಆಶ್ರಮದ ಟ್ರಸ್ಟಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು