ಶನಿವಾರ, ಮೇ 21, 2022
25 °C
ತೀರ್ಪು ಅಧ್ಯಯನಕ್ಕೆ ಕಾನೂನು ಇಲಾಖೆಗೆ ಸೂಚನೆ

ಎಲ್ಲಾ ಚುನಾವಣೆಗಳಿಗೂ ಸಿದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸೇರಿ ಎಲ್ಲ ಚುನಾವಣೆಗಳಿಗೂ ಬಿಜೆಪಿ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ನವದೆಹಲಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ನವರು ಚುನಾವಣೆಗೆ ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ನಾವು ಎಲ್ಲ ಚುನಾವಣೆಗಳಿಗೂ ಸಿದ್ಧರಿದ್ದೇವೆ. ಚುನಾವಣೆಗೆ ಹಿಂದೇಟು ಹಾಕುವುದಿಲ್ಲ. ಕಾಂಗ್ರೆಸ್‌ ಪಕ್ಷ ಅವರದ್ದನ್ನು ಅವರು ನೋಡಿಕೊಳ್ಳಲಿ’ ಎಂದರು.

‘ನಾವು ಇಡೀ ರಾಜ್ಯ ಸುತ್ತಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ತಯಾರಿ ಮಾಡಿದ್ದೆವು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸಭೆಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ತೀರ್ಪಿನ ಅಧ್ಯಯನ: ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶವನ್ನು ಕಾನೂನು ಇಲಾಖೆ ಮತ್ತು ಅಡ್ವೊಕೇಟ್‌ ಜನರಲ್‌ ಅವರಿಗೆ ಸಂಪೂರ್ಣ ಅಧ್ಯಯನ ಮಾಡುವಂತೆ ತಿಳಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದರು. 

‘ಸುಪ್ರೀಂಕೋರ್ಟ್‌ ಆದೇಶದ ಪ್ರತಿ ನಮಗೆ ಬಂದಿಲ್ಲ. ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಏನು ತೀರ್ಮಾನ ಮಾಡುತ್ತವೆಯೋ ಅದನ್ನು ಪಾಲಿಸಬೇಕಾಗುತ್ತದೆ. ಸುಪ್ರೀಂಕೋರ್ಟ್‌ ಆದೇಶ ಎಲ್ಲಾ ರಾಜ್ಯಗಳಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಹೇಳಲಾಗಿದ್ದು, ಚುನಾವಣಾ ಆಯೋಗದೊಂದಿಗೆ ಚರ್ಚೆ ಮಾಡಲಾಗುವುದು. ಅವರ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಬೊಮ್ಮಾಯಿ ತಿಳಿಸಿದರು.

ನಮಗೆ ಪ್ರತಿಸ್ಪರ್ಧಿಗಳಿಲ್ಲ’

‘ಬಿಬಿಎಂಪಿ ಚುನಾವಣೆಯಲ್ಲಿ ನಮಗೆ ಪ್ರತಿಸ್ಪರ್ಧಿಗಳಿಲ್ಲ. ಮತ್ತೆ ಬಿಜೆಪಿಯೇ ಗೆಲ್ಲುತ್ತದೆ. ನಾವು ಯಾವುದೇ ಸಂದರ್ಭದಲ್ಲೂ ಚುನಾವಣೆಗೆ ಸಿದ್ಧರಾಗಿದ್ದೇವೆ. ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆಯಷ್ಟೇ ಬಾಕಿ ಇದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು