ಸೋಮವಾರ, ಏಪ್ರಿಲ್ 19, 2021
31 °C
ಮಣ್ಣಿನ ಮನೆಗಳಿಗೆ ತಲಾ ₹5 ಲಕ್ಷ

‘ನಷ್ಟದ ಅಂದಾಜು ಶೀಘ್ರ’, ₹85 ಕೋಟಿ ತುರ್ತು ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತರ ಕರ್ನಾಟಕದ ಮಳೆ ಮತ್ತು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಆಗಿರುವ ನಷ್ಟದ ಅಂದಾಜಿಗೆ ಸಮರೋಪಾದಿಯಲ್ಲಿ ಸಮೀಕ್ಷೆ ನಡೆಸಿ,ಒಂದು ವಾರದಲ್ಲಿ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದರು.

ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಗೆ ಶುಕ್ರವಾರ ನಡೆದ ವಿಡಿಯೊ ಸಂವಾದದ ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಯಡಿಯೂರಪ್ಪ ಈ ಸೂಚನೆ ನೀಡಿದರು.

ಪೂರ್ಣ ಮತ್ತು ಭಾಗಶಃ ಕುಸಿದಿರುವ ಮಣ್ಣಿನ ಮನೆಗಳನ್ನು ನೆಲಸಮಗೊಳಿಸಿ, ಸಿಮೆಂಟ್‌ ಬಳಸಿ ಹೊಸ ಮನೆಗಳ ನಿರ್ಮಾಣಕ್ಕೆ ತಲಾ ₹ 5ಲಕ್ಷ ವಿತರಿಸಲು ಯೋಜನೆಯನ್ನು ರೂಪಿಸಬೇಕು ಎಂದು ಹೇಳಿದರು.

ಉತ್ತರ ಕರ್ನಾಟಕದ ಗ್ರಾಮಾಂತರ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಣ್ಣಿನ ಮನೆಗಳು ಇವೆ. ಮಳೆ ಮತ್ತು ಪ್ರವಾಹದಿಂದ ಕೆಲವು ಪೂರ್ಣ ಪ್ರಮಾಣದಲ್ಲೂ, ಮತ್ತೆ ಕೆಲವು ಭಾಗಶಃ ಕುಸಿದಿವೆ. ಭಾಗಶಃ ಕುಸಿದಿದ್ದರೂ, ಅವುಗಳನ್ನು ಪೂರ್ಣ ಕುಸಿದಿವೆ ಎಂದೇ ಪರಿಗಣಿಸಿ, ಕಾಂಕ್ರಿಟ್‌ ಮನೆಗಳನ್ನು ಕಟ್ಟಿಸಿಕೊಳ್ಳಲು ತಲಾ ₹ 5 ಲಕ್ಷ ವಿತರಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.

ಅಲ್ಪ ಪ್ರಮಾಣದ ಪರಿಹಾರ ನೀಡಿದರೆ, ಸಣ್ಣ ಪುಟ್ಟ ದುರಸ್ತಿ ಮಾಡಿಕೊಂಡು ಅಲ್ಲೇ ವಾಸ ಮಾಡುತ್ತಾರೆ. ಮತ್ತೆ ಮಳೆ ಬಂದಾಗ ಕುಸಿದು ಹೋಗುವ ಸಾಧ್ಯತೆ ಇರುತ್ತದೆ ಎಂದರು.

ಒಂದು ಬಾರಿಗೆ ಉತ್ತಮ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲೇ ಮನೆ ಕಟ್ಟಿಕೊಂಡು ನೆಮ್ಮದಿಯಾಗಿರಲಿ ಎಂದು ಅವರು ತಿಳಿಸಿದರು.

ಸಮರೋಪಾದಿಯಲ್ಲಿ ಸಮೀಕ್ಷೆ: ಕಳೆದ 15 ದಿನಗಳ ಮಳೆ ಮತ್ತು ಪ್ರವಾಹದಿಂದ ಆಗಿರುವ ಎಲ್ಲ ಬಗೆಯ ನಷ್ಟಗಳ ಸಮೀಕ್ಷೆ ನಡೆಸಬೇಕು. ಜನ, ಜಾನುವಾರುಗಳ ಪ್ರಾಣ ಹಾನಿ, ಮೂಲಸೌಕರ್ಯಗಳು, ಕಟ್ಟಡಗಳು, ರಸ್ತೆಗಳು ಮತ್ತು ವಿವಿಧ ರೀತಿಯ ಬೆಳೆಗಳ ನಷ್ಟ ಪರಿಶೀಲಿಸಬೇಕು. ಒಟ್ಟಾರೆ ಸಮೀಕ್ಷೆ ಮಾಡಿ ನಷ್ಟದ ಅಂದಾಜು ನೀಡುವ ಬದಲು, ಪ್ರತ್ಯೇಕವಾಗಿ ನಷ್ಟವನ್ನು ಅಂದಾಜು ಮಾಡಿ. ಇದರಿಂದ ನಿಖರವಾಗಿ ಪರಿಹಾರ ನೀಡಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಇದೇ 22 ರೊಳಗೆ ವರದಿ ಕೈ ಸೇರಬೇಕು. ಸಮೀಕ್ಷೆ ಕಾರ್ಯಕ್ಕೆ ಪ್ರವಾಹದಿಂದ ಬಾಧಿತವಾಗದ ಅಕ್ಕ ಪಕ್ಕದ ಜಿಲ್ಲೆಗಳ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಿ. 60 ವರ್ಷಗಳಲ್ಲೇ ಅಧಿಕ ಮಳೆಯಾಗಿರುವುದರಿಂದ ಅಲ್ಲಿನ ವಾಸ್ತವ ಚಿತ್ರಣ ನೀಡಬೇಕು. ಯಾರಾದರೂ ನಿರ್ಲಕ್ಷ್ಯ ತೋರಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದೂ ಎಚ್ಚರಿಕೆ ನೀಡಿದರು.

ಸಾಂತ್ವನ ಕೇಂದ್ರಗಳಲ್ಲಿ ಕೋವಿಡ್‌ ಹರಡದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ ಕೇಂದ್ರದಲ್ಲೂ ಇಬ್ಬರು ವೈದ್ಯರು ಇದ್ದು ಕೋವಿಡ್‌ ಪರೀಕ್ಷೆ ನಡೆಸಬೇಕು. ಇಲ್ಲಿ ಆಶ್ರಯ ಪಡೆದವರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಬಿಸಿ ಬಿಸಿಯಾಗಿಯೇ ನೀಡಬೇಕು ಎಂದರು.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ತುರ್ತು ಪರಿಹಾರಕ್ಕೆ ₹85.49 ಕೋಟಿ ಬಿಡುಗಡೆ ಮಾಡಲಾಗಿದೆ. ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್‌ 10 ರಿಂದ 15 ರವರೆಗೆ ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಭೀಮಾ ಮತ್ತು ಅದರ ಉಪನದಿಗಳಲ್ಲಿ ದಾಖಲೆ ಪ್ರಮಾಣದ ಒಳಹರಿವು ಬಂದಿದೆ ಎಂದು ಅಧಿಕಾರಿಗಳು ವಿವರಿಸಿದರು.

60 ವರ್ಷಗಳಲ್ಲೇ ಅಧಿಕ ಮಳೆ

ರಾಜ್ಯದಲ್ಲಿ ಕಳೆದ 60 ವರ್ಷಗಳ ಮುಂಗಾರು ಇತಿಹಾಸದಲ್ಲೇ ಈ ಬಾರಿಯ ಮಳೆಯ ಪ್ರಮಾಣ ಅತ್ಯಧಿಕ. 1960 ರಿಂದ 2020 ರವರೆಗಿನ ಅವಧಿಯಲ್ಲಿ ಇಷ್ಟೊಂದು ಪ್ರಮಾಣದ ಮಳೆ ಆಗಿರಲಿಲ್ಲ.

ರಾಜ್ಯದಲ್ಲಿ ಈ ಮುಂಗಾರು ಹಂಗಾಮಿನ ಒಟ್ಟು 122 ದಿನಗಳಲ್ಲಿ 50 ದಿನಗಳು ಮಳೆಯಾಗಿದೆ. 2010 ರಲ್ಲಿ ಒಟ್ಟು 52 ದಿನಗಳು ಮಳೆಯಾಗಿತ್ತು. ಈ ಬಾರಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ 36 ರಷ್ಟು ಹೆಚ್ಚು ಮಳೆಯಾಗಿದೆ.

ಉತ್ತರ ಒಳನಾಡಿನಲ್ಲಿ ಈ ವರ್ಷ ಒಟ್ಟು 46 ದಿನಗಳು ಮಳೆಯಾಗಿದ್ದರೆ, ದಕ್ಷಿಣ ಒಳನಾಡಿನಲ್ಲಿ 36 ದಿನಗಳು ಮಳೆಯಾಗಿದ್ದು, 60 ವರ್ಷಗಳಲ್ಲೇ 3ನೇ ಅತ್ಯಧಿಕ ಮಳೆ. ಆದರೆ, ಮಲೆನಾಡಿನಲ್ಲಿ ವಾಡಿಕೆಗಿಂತ ಶೇ 5 ರಷ್ಟು ಕೊರತೆಯಾಗಿದೆ. ಜೂನ್‌ 1 ರಿಂದ ಇಲ್ಲಿಯವರೆಗೆ ರಾಜ್ಯದ ಎಲ್ಲ ಭಾಗಗಳ ಅಂಕಿ–ಅಂಶ ಪರಿಶೀಲಿಸಿದಾಗ ವಾಡಿಕೆಗಿಂತ ಶೇ 16 ಅಧಿಕ ಮಳೆಯಾಗಿದೆ.

ಇನ್‌ಪುಟ್‌ ಸಬ್ಸಿಡಿ‌ ಜಮೆ

ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿರುವ 51,810 ಸಂತ್ರಸ್ತ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ₹36.57 ಕೋಟಿ ಇನ್‌ಪುಟ್‌ ಸಬ್ಸಿಡಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆನ್‌ಲೈನ್‌ ಮೂಲಕ ಜಮೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು