ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ವಿಸ್ತರಣೆ, ವಿಶೇಷ ಪ್ಯಾಕೇಜ್‌ ಬಗ್ಗೆ ಚರ್ಚಿಸಿ ತೀರ್ಮಾನ: ಯಡಿಯೂರಪ್ಪ

ಲಾಕ್‌ಡೌನ್ ವಿಸ್ತರಿಸಲು ಸಚಿವರ ಒಲವು *ಗ್ರಾಮೀಣ ಪ್ರದೇಶದಲ್ಲಿ ನಿಯಂತ್ರಕ್ಕೆ ಸೂಚನೆ
Last Updated 17 ಮೇ 2021, 20:17 IST
ಅಕ್ಷರ ಗಾತ್ರ

ಬೆಂಗಳೂರು: ಮೇ 24 ರ ಬಳಿಕ ಲಾಕ್‌ಡೌನ್‌ ವಿಸ್ತರಿಸುವ ಮತ್ತು ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡುವ ಸಂಬಂಧ ಸಚಿವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆ ಕೋವಿಡ್‌ ಕುರಿತಂತೆ ಸೋಮವಾರ ನಡೆದ ವರ್ಚುವಲ್ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಪರೀಕ್ಷಾ ವರದಿಗಳನ್ನು 24 ಗಂಟೆಯೊಳಗೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ಹೋಂ ಐಸೋಲೇಷನ್‌ ಮಾರ್ಗಸೂಚಿಯನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಅವರು ಹೇಳಿದರು.

ಗ್ರಾಮಗಳಲ್ಲಿ ಮನೆ ಮನೆ ಭೇಟಿ ನೀಡಿ, ಟ್ರಯಾಜ್‌ ಕೇಂದ್ರಗಳ ಮೂಲಕ ಸೋಂಕಿತರ ವರ್ಗೀಕರಣವನ್ನು ತ್ವರಿತವಾಗಿ ಮಾಡಬೇಕು. ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಕೋವಿಡ್‌ ನಿರ್ವಹಣೆಗೆ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಅನುಸರಿಸಬೇಕು ಎಂದು ಯಡಿಯೂರಪ್ಪ ತಿಳಿಸಿದರು.

ಅಧಿಕಾರಿಗಳಿಗೆ ತಾಕೀತು: ‘ನಿಮ್ಮ ಜಿಲ್ಲೆಗಳಲ್ಲಿ ಏನೆಲ್ಲ ಇದೆ, ಏನೆಲ್ಲ ಇಲ್ಲ ಎಂಬುದನ್ನು ಹೇಳಬೇಕು. ನೀವೇ ಸಮಸ್ಯೆಗಳನ್ನು ಹೇಳಿಕೊಳ್ಳದಿದ್ದರೆ ನಮಗೆ ಹೇಗೆ ಗೊತ್ತಾಗಬೇಕು’ ಎಂದು ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರು. ‘ಎಲ್ಲ ಜಿಲ್ಲೆಗಳಿಗೆ ಅಗತ್ಯವಿರುವ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಗೆಎಷ್ಟು ಪ್ರಮಾಣದ ಆಮ್ಲಜನಕ ಬೇಕು ಎಂಬುದನ್ನು ಮೊದಲೇ ಅಂದಾಜು ಮಾಡಿ ಹೇಳಬೇಕು’ ಎಂದರು.

‘ಸಕಾಲಕ್ಕೆ ತಲುಪುವಂತೆ ನೋಡಿಕೊಳ್ಳಬೇಕು. ತುರ್ತು ಸಂದರ್ಭಗಳಲ್ಲಿ ಪಕ್ಕದ ಜಿಲ್ಲೆಗಳ ಜತೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದೂ ಸಲಹೆ ನೀಡಿದರು.

ಪರಿಸ್ಥಿತಿಯ ಗಂಭೀರತೆಗೆ ಅನುಗುಣವಾಗಿ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಬಹುದು. ಅದಕ್ಕೆ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೋಂ ಐಸೊಲೇಷನ್‌ಗೆ ಸೂಕ್ತ ಸೌಲಭ್ಯ ಇಲ್ಲದಿದ್ದರೆ, ಪಿಎಚ್‌ಸಿಗಳು, ವಸತಿ ಶಾಲೆಗಳು ಮತ್ತು ಸಮುದಾಯ ಭವನಗಳನ್ನು ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಬೇಕು ಎಂದು ಹೇಳಿದರು.

ಲಾಕ್‌ಡೌನ್ ವಿಸ್ತರಣೆಗೆ ಒತ್ತಡ

ಸಭೆಯಲ್ಲಿ ಹಲವು ಸಚಿವರು ತಮ್ಮ ಜಿಲ್ಲೆಗಳ ಸಮಸ್ಯೆಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದರಲ್ಲದೆ, ಲಾಕ್‌ಡೌನ್‌ ವಿಸ್ತರಣೆ ಮಾಡುವುದು ಸೂಕ್ತ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ತರಬಹುದು ಎಂದು ಪ್ರತಿಪಾದಿಸಿದರು.

ಬಿಬಿಎಂಪಿ ಅಧಿಕಾರಿಗಳೂ ಲಾಕ್‌ಡೌನ್‌ ವಿಸ್ತರಣೆಗೆ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದು, ಲಾಕ್‌ಡೌನ್‌ ವಿಸ್ತರಿಸುವ ಬಗ್ಗೆ ಅವರು ಒಲವು ಹೊಂದಿದ್ದಾರೆ. ಇನ್ನೂ ಕಠಿಣ ನಿಯಮಗಳನ್ನು ಹೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT