ಮಂಗಳವಾರ, ಸೆಪ್ಟೆಂಬರ್ 21, 2021
22 °C
ಹಲವು ಬಾರಿ ‘ಗೌರವ ರಕ್ಷೆ’ ಪದ್ಧತಿ ರದ್ದು ಮಾಡಲು ಬೊಮ್ಮಾಯಿ ಸೂಚನೆ

ಸಿ.ಎಂ ‘ಝೀರೊ ಟ್ರಾಫಿಕ್‌’ ವ್ಯವಸ್ಥೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಪ್ರಯಾಣಿಸುವ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದ ‘ಝೀರೊ ಟ್ರಾಫಿಕ್‌’ ವ್ಯವಸ್ಥೆ ರದ್ದುಪಡಿಸುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಡಿದ್ದಾರೆ.

ಮುಖ್ಯಮಂತ್ರಿ ಭೇಟಿ ವೇಳೆ ಹಲವು ಬಾರಿ ನೀಡಲಾಗುತ್ತಿದ್ದ ಗೌರವ ರಕ್ಷೆ ಪದ್ಧತಿಗೆ ವಿದಾಯ ಹೇಳಿದ ಬೆನ್ನಲ್ಲೇ, ಈ ಕುರಿತ ಸೂಚನೆಯೂ ಹೊರಬಿದ್ದಿದೆ.

‘ಬೆಂಗಳೂರಿನಲ್ಲಿ ಸಂಚರಿಸುವ ವೇಳೆ ನನ್ನ ವಾಹನಕ್ಕೆ ಝೀರೊ ಟ್ರಾಫಿಕ್‌ ನೀಡುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೆಲವು ಸಂದರ್ಭದಲ್ಲಿ ಆಂಬ್ಯುಲೆನ್ಸ್, ಅಗ್ನಿಶಾಮಕ ದಳದ ವಾಹನ ಸಿಲುಕಿ ಕೊಳ್ಳುವುದು ನೋವು ಮತ್ತು ಮುಜುಗರ ಉಂಟು ಮಾಡುತ್ತಿದೆ. ಹೀಗಾಗಿ, ನನ್ನ ವಾಹನಕ್ಕೆ ನೀಡುತ್ತಿರುವ ಝೀರೊ ಟ್ರಾಫಿಕ್‌ ವ್ಯವಸ್ಥೆ ರದ್ದುಪಡಿ ಸಬೇಕು’ ಎಂದು ಬೊಮ್ಮಾಯಿ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದನ್ನು ಆಧರಿಸಿ, ಆದೇಶ ಹೊರಡಿಸಿರುವ ಬೆಂಗಳೂರು ನಗರ ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌. ರವಿಕಾಂತೇಗೌಡ, ಮುಖ್ಯಮಂತ್ರಿ ಪ್ರಯಾಣ ವೇಳೆ ಝೀರೋ ಟ್ರಾಫಿಕ್ ವ್ಯವಸ್ಥೆ ರದ್ದುಪಡಿಸಬೇಕು. ಒಂದು ಜಂಕ್ಷನ್‌ನಿಂದ ಇನ್ನೊಂದು ಜಂಕ್ಷನ್‌ಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಅವರು ಸೂಚಿಸಿದ್ದಾರೆ.

ತುರ್ತು ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಝೀರೊ ಟ್ರಾಫಿಕ್‌ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದೂ ಅವರು ತಿಳಿಸಿದ್ದಾರೆ.

ಹಲವು ಬಾರಿ ‘ಗೌರವ ರಕ್ಷೆ’ ಪದ್ಧತಿ ರದ್ದು: ‘ಮುಖ್ಯಮಂತ್ರಿಗೆ ಇನ್ನು ಮುಂದೆ ಸರ್ಕಾರಿ ಕಚೇರಿಗಳ ಆವರಣದಲ್ಲಿ ಮಾತ್ರ ಗೌರವ ರಕ್ಷೆ (ಗಾರ್ಡ್‌ ಆಫ್‌ ಆನರ್‌) ಸಲ್ಲಿಸಬೇಕು. ನಿರ್ಗಮನ ಸಂದರ್ಭದಲ್ಲಿ ಗೌರವ ರಕ್ಷೆ ಸಲ್ಲಿಸುವ ಪದ್ಧತಿ ಕೈಬಿಡಬೇಕು’ ಎಂದು ಘಟಕಾಧಿಕಾರಿಗಳಿಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಗಳಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಸಂದ ರ್ಭದಲ್ಲಿ, ‘ಸಿಕ್ಕ ಸಿಕ್ಕಲ್ಲಿ ಗೌರವ ರಕ್ಷೆ ಬೇಡ. ಅದನ್ನು ತೆಗೆದುಹಾಕುವಂತೆ ಆದೇಶ ಹೊರಡಿಸಲಾಗುವುದು’ ಎಂದು ಬೊಮ್ಮಾಯಿ ಹೇಳಿದ್ದರು. ಆ ಬೆನ್ನಲ್ಲೆ, ಈ ಆದೇಶ ಹೊರಡಿಸಲಾಗಿದೆ.

‘ಗಣ್ಯರು ಬಂದಾಗ ಮಾತ್ರ ಗೌರವ ರಕ್ಷೆ ಸಲ್ಲಿಸಬೇಕು. ಅಲ್ಲದೆ, ದಿನದಲ್ಲಿ ಒಮ್ಮೆ ಮಾತ್ರ ಸಲ್ಲಿಸಬೇಕು. ಆದರೆ, ಈ ಸೂಚನೆಗಳು ರಾಜ್ಯಪಾಲರು ಮತ್ತು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ಭೇಟಿಯ ಸಂದರ್ಭಕ್ಕೆ ಅನ್ವಯಿಸುವುದಿಲ್ಲ’ ಎಂಬುದು ಆದೇಶದಲ್ಲಿದೆ.

‘ಪೊಲೀಸ್‌ ಕವಾಯತು ಕೈಪಿಡಿಯಲ್ಲಿರುವ ಗೌರವ ರಕ್ಷೆ ಸಲ್ಲಿಸುವ ಪದ್ಧತಿ ಬಹಳ ಹಳೆಯದು. ಕಾಲಕಾಲಕ್ಕೆ ನಿರ್ದಿಷ್ಟ ಸೂಚನೆ ನೀಡುತ್ತಿದ್ದರೂ, ಅದಕ್ಕೆ ವ್ಯತಿರಿಕ್ತವಾಗಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್‌ಗಳು, ಪ್ರವಾಸಿ ಮಂದಿರ, ಕಾರ್ಯಕ್ರಮ ನಡೆಯುವ ಸ್ಥಳ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ರಕ್ಷೆ ಸಲ್ಲಿಸಲಾಗುತ್ತಿದೆ. ಅಲ್ಲದೆ, ಒಂದೇ ದಿನ ಹಲವು ಸ್ಥಳಗಳಲ್ಲಿ ಗೌರವ ರಕ್ಷೆ ಸಲ್ಲಿಸಲಾಗುತ್ತಿದೆ. ಈ ಕ್ರಮದಿಂದ ಗೌರವ ರಕ್ಷೆಯ ಪಾವಿತ್ರ್ಯತೆಗೆ ಕುಂದು ಬರುವುದಲ್ಲದೆ, ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ. ಹೀಗಾಗಿ, ಈ ಆದೇಶ ಹೊರಡಿಸಲಾಗಿದೆ’ ಎಂದೂ ಆದೇಶದಲ್ಲಿ ಸೂದ್‌ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು