ಸೋಮವಾರ, ಜನವರಿ 24, 2022
28 °C

ಡಿ.ಕೆ.ಸುರೇಶ್, ಅಶ್ವತ್ಥನಾರಾಯಣ ಜಟಾಪಟಿ: ಪೊಲೀಸರ ವೈಫಲ್ಯದತ್ತ ಬೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಸೋಮವಾರ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಉಂಟಾದ ಬಿಗುವಿನ ಪರಿಸ್ಥಿತಿಗೆ ಪೊಲೀಸ್‌ ಹಾಗೂ ಗುಪ್ತಚರ ಇಲಾಖೆ ವೈಫಲ್ಯವೇ ಮೂಲ ಕಾರಣ ಎಂಬ ಆರೋಪ ಕೇಳಿಬಂದಿವೆ.

ಅಂಬೇಡ್ಕರ್, ಕೆಂಪೇಗೌಡರ ಪ್ರತಿಮೆ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ್ ಕಿತ್ತಾಡಿಕೊಂಡಿದ್ದರು. ಇದರಿಂದಾಗಿ ಇಡೀ ಕಾರ್ಯಕ್ರಮ ಅಸ್ತವ್ಯಸ್ತವಾಗಿದ್ದು, ಮುಖ್ಯಮಂತ್ರಿಗಳು ಮುಜುಗರಪಟ್ಟುಕೊಳ್ಳುವಂತೆ ಆಗಿತ್ತು.

ಗಣ್ಯರ ಭದ್ರತೆಗೆಂದು ಎಸ್‌.ಪಿ.ಗಿರೀಶ್‌ ‘ ಕೆಂಪೇಗೌಡ ಪಡೆ’ ರಚಿಸಿದ್ದರು. ವೇದಿಕೆಯಲ್ಲಿ ರಾಮನಗರ ಎಸ್‌.ಪಿ ಜೊತೆಗೆ ಐಜಿಪಿ ಚಂದ್ರಶೇಖರ್ ಸಹ ಇದ್ದರು. ಹೀಗಿದ್ದೂ ಪ್ರತಿಭಟನಾಕಾರರು ವೇದಿಕೆಗೆ ನುಗ್ಗಿದ್ದರು. ಇದರಿಂದ ಗಣ್ಯರಿಗೂ ಇರಿಸು ಮುರಿಸಾಗಿತ್ತು. ಕಾರ್ಯಕ್ರಮದ ಉದ್ದಕ್ಕೂ ಪ್ರತಿಭಟನಾಕಾರರು ಘೋಷಣೆ ಕೂಗಿದ್ದರು. ಇದರಿಂದ ಕೆರಳಿದ ಅಶ್ವತ್ಥನಾರಾಯಣ ಸಿಟ್ಟಿನಲ್ಲಿ ಮಾತನಾಡಿದ್ದರು. ಅದಕ್ಕೆ ಸುರೇಶ್ ಸಹ ಅಷ್ಟೇ ಸಿಟ್ಟಿನಿಂದ ಉತ್ತರ ನೀಡಲು ಮುಂದಾದ ಕಾರಣ ವಾಗ್ದಾದನಡೆದಿತ್ತು.

ಎಡವಿದ್ದು ಎಲ್ಲಿ?: ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಜಿಲ್ಲಾಡಳಿತ ದಲಿತ ಮುಖಂಡರನ್ನು ಕಡೆಗಣಿಸಿದೆ. ಕಾಟಾಚಾರಕ್ಕೆ ನಮ್ಮನ್ನು ಆಹ್ವಾನಿಸಿದೆ. ಇದನ್ನು ತಿದ್ದಿಕೊಳ್ಳದಿದ್ದರೆ ಪ್ರತಿಭಟಿಸುತ್ತೇವೆ ಎಂದು ಕೆಲ ಸಂಘಟನೆಗಳ ಮುಖಂಡರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದರು. ಅಂದೇ ರಾತ್ರಿ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದರು. ಬಹಿರಂಗವಾಗಿ ಅಸಮಾಧಾನ ಇದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸರು ಬಿಗಿ  ಭದ್ರತೆ ಕೈಗೊಂಡಿರಲಿಲ್ಲ. ಭದ್ರತೆ ನಡುವೆಯೂ ಪ್ರತಿಭಟನಾಕಾರರು ವೇದಿಕೆಗೆ ನುಗ್ಗಲು ಬಿಟ್ಟಿದ್ದು ಸರಿಯಲ್ಲ ಎಂದು ಹೇಳಲಾಗುತ್ತಿದೆ.

ತನಿಖೆ: ಘಟನೆ ಕುರಿತು ಗೃಹ ಸಚಿವರು ಈಗಾಗಲೇ ವರದಿ ಕೇಳಿದ್ದಾರೆ. ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್ ಹಾಗೂ ಎಸ್‌.ಪಿ ಗಿರೀಶ್ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಲಿದೆ.

‘ಡಿ.31ರಂದು ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ ಖಾತ್ರಿಯಾದ ಕೂಡಲೇ ಎಲ್ಲ ಜನಪ್ರತಿನಿಧಿಗಳು, ಮುಖಂಡರ ಗಮನಕ್ಕೂ ತರಲಾಗಿತ್ತು. ಕಡಿಮೆ ಸಮಯದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರೂ ಕೈ ಜೋಡಿಸಲು ಮನವಿ ಮಾಡಿದ್ದೆ. ಕಾರ್ಯಕ್ರಮದ ಹಿಂದಿನ ದಿನವೂ ಕೆಲವು ಮುಖಂಡರ ಜೊತೆ ಮಾತುಕತೆ ನಡೆಸಿದ್ದು, ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿ ತೆರಳಿದ್ದರು. ಹೀಗಾಗಿ ಪ್ರತಿಭಟನೆ ಸುಳಿವೂ ಇರಲಿಲ್ಲ. ಆದಾಗ್ಯೂ ಕೆಲವರು ಕಪ್ಪು ಪಟ್ಟಿ ಧರಿಸಿ ಕಾರ್ಯಕ್ರಮಕ್ಕೆ ಬಂದಿದ್ದು, ವೇದಿಕೆಗೆ ನುಗ್ಗಿ ಬಂದರು. ಪೊಲೀಸರು ತಡೆಯಬೇಕಿತ್ತು. ಇಲ್ಲಿ ಎಡವಿದ್ದೇವೆ. ಕಾರ್ಯಕ್ರಮದ ವಿಡಿಯೊಗಳನ್ನು ನಾನು ಹಾಗೂ ಎಸ್‌.ಪಿ ಗಿರೀಶ್‌ ವೀಕ್ಷಿಸಿದ್ದು, ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ತಿಳಿಸಿದರು.

ಐವರ ವಿರುದ್ಧ ಪ್ರಕರಣ

ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ರಾಮನಗರ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಾಂಪುರ ನಾಗೇಶ್, ಸಂಘಟನೆಗಳ ಮುಖಂಡರಾದ ಕೋಟೆ ಕುಮಾರ್, ಗುಡ್ಡೆ ವೆಂಕಟೇಶ್‌, ಜಿ. ಗೋವಿಂದಯ್ಯ, ಗೌಸ್ ಪಾಷಾ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಜೀನಾಮೆಗೆ ವಾಟಾಳ್‌ ಆಗ್ರಹ: ಸೋಮವಾರ ನಡೆದ ಘಟನೆಯು ಪ್ರಜಾಪ್ರಭುತ್ವಕ್ಕೆ ಎಸಗಿದ ಅಪಚಾರ. ಮುಖ್ಯಮಂತ್ರಿ ಇರುವ ವೇದಿಕೆಯಲ್ಲಿ ಆ ರೀತಿ ನಡೆದುಕೊಳ್ಳಬಾರದಿತ್ತು. ಸಂಸದ ಡಿ.ಕೆ. ಸುರೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜು ಆಗ್ರಹಪಡಿಸಿದ್ದಾರೆ.

ಮುಂದುವರಿದ ಪ್ರತಿಭಟನೆ: ಘಟನೆ ಖಂಡಿಸಿ ಜಿಲ್ಲೆಯಾದ್ಯಂತ ಮಂಗಳವಾರವೂ ಪ್ರತಿಭಟನೆಗಳು ಮುಂದುವರಿದವು. ಜಿಲ್ಲಾ ಕಚೇರಿಗಳ ಸಂಕೀರ್ಣದ ಬಳಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದು, ಸಂಸದ ಡಿ.ಕೆ. ಸುರೇಶ್ ಬಂಧನಕ್ಕೆ ಒತ್ತಾಯಿಸಿದರು. ಮಾಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಶ್ವತ್ಥನಾರಾಯಣ ವಿರುದ್ಧ ಪ್ರತಿಭಟನೆ ಕೈಗೊಂಡರು.

ಸಾಮಾಜಿಕ ಜಾಲತಾಣಗಳಲ್ಲಿ ‘ಸಮರ’

ಸೋಮವಾರ ವೇದಿಕೆಯಲ್ಲಿ ಜಟಾಪಟಿ ನಡೆಸಿದ್ದ ಇಬ್ಬರು ನಾಯಕರು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಿರುದ್ಧ ಕಿಡಿಕಾರಿದ್ದಾರೆ. 

‘ಡಿ.ಕೆ. ಸಹೋದರರಿಗೆ ಅಭದ್ರತೆ ಕಾಡುತ್ತಿದೆ. ಗೂಂಡಾಗಳನ್ನು ಕಟ್ಟಿಕೊಂಡು ಮೆರೆದವರನ್ನು ಮರೆಯಾಗಿಸುವ ಕಲೆ ನಮ್ಮ ರಾಮನಗರದ ಜನತೆಗೆ ಗೊತ್ತಿದೆ. ಇಲ್ಲಿ ಅಭಿವೃದ್ಧಿಗೆ ಮಾತ್ರ ಬೆಲೆ’ ಎಂದು ಸಚಿವ ಅಶ್ವತ್ಥನಾರಾಯಣ ಪೋಸ್ಟ್ ಹಾಕಿದ್ದಾರೆ.

ಇದಕ್ಕೆ ಪ್ರತಿಯಾಗಿ ಡಿ.ಕೆ.ಸುರೇಶ್, ‘ಕಾರ್ಯಕ್ರಮಕ್ಕೆ ದಲಿತಪರ ಸಂಘಟನೆಗಳು ಹಾಗೂ ಚಿಂತಕರನ್ನು ದೂರ ಇಟ್ಟಿದ್ದು ಸರಿಯೇ? ಇದು ಜಿಲ್ಲೆಗೆ ಆದ ಅವಮಾನ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು