ಗುರುವಾರ , ಆಗಸ್ಟ್ 18, 2022
23 °C
ಲಸಿಕೆ ತಯಾರಿಕೆಗೆ ಅಗತ್ಯ ಒಪ್ಪಿಗೆ

ಮಾಲೂರಿನಲ್ಲಿ ಶೀಘ್ರವೇ ಕೋವ್ಯಾಕ್ಸಿನ್‌ ಘಟಕ: ಡಿಸಿಎಂ ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ್‌ ಬಯೋಟೆಕ್‌ ಕೋಲಾರ ಜಿಲ್ಲೆ ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಶೀಘ್ರವೇ ಕೋವ್ಯಾಕ್ಸಿನ್‌ ಲಸಿಕೆ ತಯಾರಿಕಾ ಘಟಕ ಸ್ಥಾಪಿಸಲಿದೆ.

ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ಈ ವಿಷಯ ತಿಳಿಸಿದರು.

‘ರಾಜಧಾನಿಗೆ ಹತ್ತಿರದಲ್ಲೇ ಇರುವ ಮಾಲೂರಿನಲ್ಲಿ ಕೋವ್ಯಾಕ್ಸಿನ್‌ ಸ್ಥಾಪನೆ ಆಗುತ್ತದೆ. ಅಲ್ಲಿಗೆ ರೈಲು ಸೇರಿದಂತೆ ಎಲ್ಲ ರೀತಿಯಿಂದ ಉತ್ತಮ ಸಂಪರ್ಕ ವ್ಯವಸ್ಥೆ ಇದೆ. ಲಸಿಕೆ ತಯಾರಿಕೆಗೆ ಅಗತ್ಯ ಒಪ್ಪಿಗೆ ನೀಡಲಿದ್ದೇವೆ. ಆಡಳಿತಾತ್ಮಕ ಕೆಲಸಗಳನ್ನು ಕಂಪನಿ ಪೂರ್ಣ ಮಾಡುತ್ತಿದ್ದು, ಸಿವಿಲ್‌ ಕಾಮಗಾರಿಗಳು ಆರಂಭವಾಗಿವೆ. ಆದಷ್ಟು ಬೇಗ ಲಸಿಕೆ ತಯಾರಿಕೆ ಆರಂಭವಾಗುತ್ತದೆ’ ಎಂದು ಹೇಳಿದರು.

ದೇಶದಲ್ಲಿ ಆಗಸ್ಟ್‌ ವೇಳೆಗೆ 40 ಕೋಟಿ ಡೋಸ್‌ ಲಸಿಕೆ ಉತ್ಪಾದನೆ ಆಗಲಿದೆ ಎಂದು ನೀತಿ ಆಯೋಗ ಹೇಳಿದೆ. ಇದು ಆಶಾದಾಯಕ ಬೆಳವಣಿಗೆ ಜೂನ್‌–ಜುಲೈನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತಯಾರಾಗುತ್ತದೆ. ದೇಶದಲ್ಲಿ ಈವರೆಗೆ 19 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರವು ಲಸಿಕೆ ತಯಾರಿಕೆ ಕಂಪನಿಗಳಿಗೆ ಸಾಕಷ್ಟು ಉತ್ತೇಜನ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಲಸಿಕೆಗಳ ಮೇಲಿನ ಪೇಟೆಂಟ್‌ ವಿನಾಯಿತಿ ಬಗ್ಗೆ ಪ್ರಧಾನಿ ಮೋದಿ ಅವರು ವಿವಿಧ ದೇಶಗಳ ನಾಯಕರ ಜತೆ ಮಾತುಕತೆ ನಡೆಸಿದ್ದು, ಅದು ಯಶಸ್ವಿಯಾಗಿದೆ. ಇದರಿಂದ ಇನ್ನಷ್ಟು ಲಸಿಕೆ ತಯಾರಿಕಾ ಘಟಕಗಳು ರಾಜ್ಯಕ್ಕೆ ಬರಲಿವೆ ಎಂದು ಅಶ್ವತ್ಥನಾರಾಯಣ ಹೇಳಿದರು.

ವಿಧಾನಸಭಾ ಕ್ಷೇತ್ರಕ್ಕೆ 100 ಹಾಸಿಗೆಗಳ ಆಸ್ಪತ್ರೆ: ಕೋವಿಡ್‌ ಎರಡನೇ ಮತ್ತು ಸಂಭವನೀಯ ಮೂರನೇ ಅಲೆ ಎದುರಿಸಲು ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸುವ ಚಿಂತನೆ ಇದೆ. ಅದರಲ್ಲಿ ಆಮ್ಲಜನಕ ಮತ್ತು ಐಸಿಯು ಬೆಡ್‌ಗಳು ಇರಲಿವೆ ಎಂದು ಅವರು ತಿಳಿಸಿದರು.

ಕೋವಿಡ್‌ಗಾಗಿ ಕಾರ್ಪೊರೇಟ್ ವಲಯದಿಂದ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಸಿಎಸ್‌ಆರ್‌ ನೆರವು ಬರುತ್ತಿದೆ. ನಗದು ಮತ್ತು ಸಾಮಗ್ರಿ ರೂಪದಲ್ಲಿ ನೆರವು ಹರಿದು ಬರುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಹಣ ಬರುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು