ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಬಳಿಕ ಪದವಿ ತರಗತಿ: ತಜ್ಞರ ಶಿಫಾರಸು

ಡಾ.ದೇವಿ ಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಶಿಫಾರಸು
Last Updated 22 ಜೂನ್ 2021, 20:42 IST
ಅಕ್ಷರ ಗಾತ್ರ

ಬೆಂಗಳೂರು: 18 ವರ್ಷಕ್ಕಿಂತ ಮೇಲಿನ ವಿದ್ಯಾರ್ಥಿಗಳಿಗೆ ಕೋವಿಡ್‌ ಲಸಿಕೆ ನೀಡಿದ ಬಳಿಕವೇ ಪದವಿ ಕಾಲೇಜುಗಳ ತರಗತಿಗಳನ್ನು ಆರಂಭಿಸುವಂತೆ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್‌ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕೋವಿಡ್‌ ಮೂರನೇ ಅಲೆ ನಿಯಂತ್ರಣ ಮತ್ತು ಚಿಕಿತ್ಸಾ ಸಿದ್ಧತೆಗಳ ಕುರಿತು ಅಧ್ಯಯನ ನಡೆಸಿ, ಸಲಹೆ ನೀಡಲು ನೇಮಿಸಿರುವ ತಜ್ಞರ ಸಮಿತಿಯು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಂಗಳವಾರ ತನ್ನ ಮಧ್ಯಂತರ ವರದಿ ಸಲ್ಲಿಸಿತು.

ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವರದಿಯಲ್ಲಿನ ಶಿಫಾರಸುಗಳ ಕುರಿತು ವಿಸ್ತೃತ ಚರ್ಚೆಯೂ ನಡೆಯಿತು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಿದ ಬಳಿಕ ಪದವಿ ಕಾಲೇಜುಗಳನ್ನು ತೆರೆಯುವಂತೆ ಸಮಿತಿ ಶಿಫಾರಸು ಮಾಡಿದೆ. 18 ವರ್ಷಕ್ಕಿಂತ ಕೆಳಗಿನವರಿಗೆ ಇನ್ನೂ ಲಸಿಕೆ ಲಭ್ಯ ಇಲ್ಲ. ಆದ್ದರಿಂದ, ಪದವಿಗಿಂತ ಕೆಳಗಿನ ಹಂತದ ಎಲ್ಲ ಶಾಲಾ, ಕಾಲೇಜುಗಳನ್ನು ಹಂತ ಹಂತವಾಗಿ ತೆರೆಯುವಂತೆ ಸಮಿತಿ ಸಲಹೆ ನೀಡಿದೆ’ ಎಂದರು.

ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಆದ್ಯತೆಯ ಮೇಲೆ ಲಸಿಕೆ ನೀಡಬೇಕು. ಶಾಲೆ, ಕಾಲೇಜುಗಳಲ್ಲಿ ತರಗತಿ ಆರಂಭಿಸುವ ಪ್ರಕ್ರಿಯೆಯನ್ನು ಬಹು ಹಂತಗಳಲ್ಲಿ ಅನುಷ್ಠಾನಕ್ಕೆ ತರುವಂತೆ ಸಮಿತಿ ಶಿಫಾರಸು ಮಾಡಿದೆ. ಈ ಎಲ್ಲ ವಿಷಯಗಳ ಬಗ್ಗೆಯೂ ಚರ್ಚಿಸಿ, ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

ವಿಶೇಷ ಆಸ್ಪತ್ರೆಗಳ ಆರಂಭಕ್ಕೆ ಸಲಹೆ:
ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ತೊಂದರೆ ಆಗಬಹುದು ಎಂಬ ಅಂದಾಜು ಇದೆ. ಈ ಕಾರಣಕ್ಕಾಗಿಯೇ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಶೇಷ ಆಸ್ಪತ್ರೆಗಳು, ಮಕ್ಕಳ ಚಿಕಿತ್ಸಾ ವಾರ್ಡ್‌ಗಳನ್ನು ಸಜ್ಜುಗೊಳಿಸುವಂತೆ ಸಮಿತಿ ಸಲಹೆ ನೀಡಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಮಕ್ಕಳ ಚಿಕಿತ್ಸಾ ವಿಭಾಗಗಳಲ್ಲಿ ಹೆಚ್ಚುವರಿಯಾಗಿ ‘ಹೈ ಡಿಪೆಂಡೆನ್ಸಿ’ ವಾರ್ಡ್‌, ಮಕ್ಕಳ ತೀವ್ರ ನಿಗಾ ಘಟಕಗಳನ್ನು ಆರಂಭಿಸುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಎಲ್ಲ ಆಸ್ಪತ್ರೆಗಳಲ್ಲೂ ಕೊರೊನಾ ವೈರಾಣು ಸೋಂಕಿತ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ಮನೋವೈದ್ಯರನ್ನು ಒದಗಿಸಬೇಕು ಎಂಬ ಸಲಹೆಯನ್ನೂ ನೀಡಿದೆ.

ಅಪೌಷ್ಟಿಕತೆ ನಿವಾರಣೆಗೆ ಆದ್ಯತೆ ನೀಡಬೇಕು. ಆಮ್ಲಜನಕದ ಕೊರತೆ ನೀಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್‌ ನಂತರದ ದಿನಗಳಲ್ಲಿ ಎದುರಾಗುವ ಇತರ ಆರೋಗ್ಯದ ಸಮಸ್ಯೆಗಳು ಹಾಗೂ ಕೋವಿಡೇತರ ರೋಗಗಳ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಬೇಕು. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಮತ್ತು ಮಕ್ಕಳ ಕೋವಿಡ್‌ ಪರೀಕ್ಷೆಗೆ ವಿಶೇಷ ವ್ಯವಸ್ಥೆ ಮಾಡಬೇಕು ಎಂಬ ಶಿಫಾರಸುಗಳು ವರದಿಯಲ್ಲಿವೆ.

ಖಾಸಗಿ ನೆರವು ಬಳಕೆಗೆ ಸಲಹೆ:
ಕೋವಿಡ್‌ ಮೂರನೇ ಅಲೆ ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ಕಾರ್ಪೋರೇಟ್‌ ವಲಯಯವೂ ಸೇರಿದಂತೆ ಖಾಸಗಿ ನೆರವನ್ನು ಸರ್ಕಾರ ಬಳಕೆ ಮಾಡಿಕೊಳ್ಳಬೇಕು. ಅಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ ಮತ್ತು ಹಣಕಾಸಿನ ನೆರವನ್ನು ಬಳಸಿಕೊಳ್ಳಬೇಕು ಎಂದು ತಜ್ಞರ ಸಮಿತಿ ಸಲಹೆ ನೀಡಿದೆ.

ವೈದ್ಯರು, ನರ್ಸ್‌ಗಳು ಮತ್ತಿತರ ವೈದ್ಯಕೀಯ ಸಿಬ್ಬಂದಿಯ ಕೊರತೆಗೆ ಪರಿಹಾರ ಕಂಡುಕೊಳ್ಳಲು ವಿವಿಧ ವೈದ್ಯಕೀಯ ಸಂಘಟನೆಗಳ ಜತೆಗೂಡಿ ಕೆಲಸ ಮಾಡಬೇಕು. ಸರ್ಕಾರೇತರ ಸಂಸ್ಥೆಗಳನ್ನೂ ಈ ಕೆಲಸದಲ್ಲಿ ಬಳಸಿಕೊಳ್ಳಬೇಕು. ಸೋಂಕು ಹರಡುವುದನ್ನು ತಡೆಯುವ ದಿಸೆಯಲ್ಲಿ ಸಾರ್ವಜನಿಕರನ್ನೂ ಈ ಪ್ರಕ್ರಿಯೆಯಲ್ಲಿ ಜತೆಗೆ ಸೇರಿಸಿಕೊಳ್ಳಬೇಕು ಎಂದು ಸಮಿತಿ ಹೇಳಿದೆ.

ತರಾತುರಿ ಇಲ್ಲ: ಡಾ.ಕೆ. ಸುಧಾಕರ್‌

ಶಾಲೆ, ಕಾಲೇಜುಗಳನ್ನು ತೆರೆಯಲು ಸರ್ಕಾರಕ್ಕೆ ಯಾವುದೇ ರೀತಿಯ ತರಾತುರಿ ಇಲ್ಲ. ಮಕ್ಕಳ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

ಪತ್ರಕರ್ತರ ಜತೆ ಮಾತನಾಡಿದ ಅವರು, ‘ಒಂದು ಕಡೆಯಿಂದ ಶಾಲೆ, ಕಾಲೇಜು ತರಗತಿ ಆರಂಭಕ್ಕೆ ಒತ್ತಡವಿದೆ. ಪೋಷಕರು ಯಥಾಸ್ಥಿತಿ ಮುಂದುವರಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಕ್ಕಳಿಗೆ ಶಿಕ್ಷಣದಷ್ಟೇ ಆರೋಗ್ಯವೂ ಮುಖ್ಯ. ಈ ವಿಚಾರದಲ್ಲಿ ಸಾಧಕ– ಬಾಧಕಗಳನ್ನು ಚರ್ಚಿಸಿದ ಬಳಿಕವೇ ನಿರ್ಧಾರಕ್ಕೆ ಬರಬೇಕಿದೆ’ ಎಂದರು. ಮಕ್ಕಳಿಗೆ ಬೇಗ ಸೋಂಕು ಹರಡುತ್ತದೆ. ಒತ್ತಡಕ್ಕೆ ಮಣಿದು ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ, ತಜ್ಞರ ಸಮಿತಿ, ಕಾರ್ಯಪಡೆ ಸಭೆಗಳನ್ನು ನಡೆಸಿ, ಚರ್ಚಿಸಿದ ಬಳಿಕವೇ ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

ನಾಲ್ಕು ಜಿಲ್ಲೆಗಳಲ್ಲಿ ಮತ್ತಷ್ಟು ಸಡಿಲಿಕೆ:

ಭಾಗಶಃ ಲಾಕ್‌ಡೌನ್‌ ಸಡಿಲಿಕೆಯ ವ್ಯಾಪ್ತಿಯಲ್ಲಿದ್ದ ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಎಲ್ಲ ಬಗೆಯ ಅಂಗಡಿಗಳನ್ನೂ ತೆರೆಯಲು ಅನುಮತಿ ನೀಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ.

ಸೋಮವಾರದವರೆಗೂ ಈ ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ನಿರ್ಬಂಧವನ್ನು ತೆರವುಗೊಳಿಸಿ, ನಾಲ್ಕೂ ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೂ ಎಲ್ಲ ಅಂಗಡಿಗಳೂ ವಹಿವಾಟು ನಡೆಸಲು ಅವಕಾಶ ನೀಡಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

ಹವಾ ನಿಯಂತ್ರಣ ವ್ಯವಸ್ಥೆ ಹೊಂದಿರುವ ಅಂಗಡಿ ಮಳಿಗೆಗಳನ್ನು ತೆರೆಯುವಂತಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ನೀಡುವುದಕ್ಕೆ ಮಾತ್ರ ಅವಕಾಶ ಇರಲಿದೆ.ಮಂಗಳವಾರದಿಂದ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸುವ ಭಾಗಶಃ ಲಾಕ್‌ಡೌನ್‌ ಇರಲಿದೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ ಸಂಪೂರ್ಣ ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳು ಮುಂದುವರಿಯಲಿವೆ.

‘ಶಾಲೆ ಆರಂಭ: ಸ್ಪಷ್ಟ ನಿರ್ಧಾರ ಅಗತ್ಯ’:

‘ಡಾ. ದೇವಿ ಪ್ರಸಾದ್‌ ಶೆಟ್ಟಿ ವರದಿ ಅಭಿಪ್ರಾಯದಂತೆ ಶಾಲೆಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಖಾಸಗಿ ಶಾಲಾಡಳಿತ ಮಂಡಳಿಗಳು ಶಿಕ್ಷಕ, ಶಿಕ್ಷಕೇತರ ಸಮನ್ವಯ ಸಮಿತಿಯ ಸಂಚಾಲಕ ಡಿ. ಶಶಿಕುಮಾರ್ ಒತ್ತಾಯಿಸಿದ್ದಾರೆ.

‘ಮಕ್ಕಳನ್ನು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಶಾಲೆಗಳನ್ನು ಆರಂಭಿಸಲೇಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದಕ್ಕೂ ಮೊದಲು ಶಾಲೆಗೆ ಹೋಗುವ ಮಕ್ಕಳ ಪಾಲಕ–ಪೋಷಕರಿಗೆ, ಶಿಕ್ಷಕರಿಗೆ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಆದ್ಯತೆಯಲ್ಲಿ ಲಸಿಕೆ ನೀಡಬೇಕು. ಬಳಿಕ ಶಾಲೆ ಆರಂಭಿಸುವ ದಿನ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT