ಬುಧವಾರ, ಫೆಬ್ರವರಿ 1, 2023
18 °C

ಚಾಕುವಿನಿಂದ ಇರಿದು ವಿದ್ಯಾರ್ಥಿನಿ ಕೊಲೆ, ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾರ್ಥಿ ಲಯಸ್ಮಿತಾ (19) ಎಂಬುವರನ್ನು ಸೋಮವಾರ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. 

ಕೃತ್ಯ ಎಸಗಿದ್ದಾರೆ ಎನ್ನಲಾದ ಆರೋಪಿ ಪವನ್ ಕಲ್ಯಾಣ ಸಹ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಲಯಸ್ಮಿತಾ ಎಂದಿನಂತೆ ಸೋಮವಾರ ಕಾಲೇಜಿಗೆ ಬಂದಿದ್ದರು. ನೃಪತುಂಗ ವಿಶ್ವವಿದ್ಯಾಲಯದ ಬಿಸಿಎ ವಿದ್ಯಾರ್ಥಿ ಪವನ್‌ ಕಲ್ಯಾಣ, ಲಯಸ್ಮಿತಾ ಜೊತೆ ಮಾತನಾಡಲು ಬಂದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಲಯಸ್ಮಿತಾ ಜೊತೆ ಗಲಾಟೆ ಮಾಡಿದ್ದ ಆರೋಪಿ, ಏಕಾಏಕಿ ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದಿದ್ದ. ನಂತರ, ತಾನೂ ಚಾಕುವಿನಿಂದ ಇರಿದುಕೊಂಡಿದ್ದ. ಅದನ್ನು ನೋಡಿದ್ದ ಸಹಪಾಠಿಗಳು ಹಾಗೂ ಭದ್ರತಾ ಸಿಬ್ಬಂದಿ, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ತೀವ್ರ ರಕ್ತಸ್ರಾವದಿಂದ ಲಯಸ್ಮಿತಾ ಮೃತಪಟ್ಟಿದ್ದಾರೆ. ಪವನ್ ಕಲ್ಯಾಣ ಆರೋಗ್ಯ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ತಿಳಿಸಿವೆ.

ಲಯಸ್ಮಿತಾ ಹಾಗೂ ಪವನ್, ಕೋಲಾರದವರು. ಹಲವು ವರ್ಷಗಳಿಂದ ಪರಿಚಿತರು. ಲಯಸ್ಮಿತಾ ಅವರ ತಂದೆ ತೀರಿಕೊಂಡಿದ್ದು, ತಾಯಿ ಮಾತ್ರ ಇದ್ದಾರೆ.

‘ಪ್ರೇಮದ ವಿಚಾರವಾಗಿ ಈ ಕೃತ್ಯ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳೂ ಹೇಳಿವೆ.

ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು