ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.17ಕ್ಕೆ ಕಾಲೇಜು ಶುರು: ಆನ್‌ಲೈನ್‌, ಆಫ್‌ಲೈನ್‌ ಎರಡಕ್ಕೂ ಅವಕಾಶ

ಹಾಜರಾತಿ ಕಡ್ಡಾಯವಲ್ಲ
Last Updated 23 ಅಕ್ಟೋಬರ್ 2020, 21:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಶಾಲಾ– ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಪರ– ವಿರೋಧದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಪದವಿ, ಸ್ನಾತಕೋತ್ತರ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳನ್ನು ನವೆಂಬರ್‌ 17ರಿಂದ ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ನಡೆದ ಸಭೆಯ ಬಳಿಕ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ಕಾಲೇಜು ಆರಂಭವಾದ ಬಳಿಕ ವಿದ್ಯಾರ್ಥಿಗಳು ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ನಿಯಮ ಇರುವುದಿಲ್ಲ. ಆನ್‌ಲೈನ್‌ ಮೂಲಕವೂ ತರಗತಿಗಳಿಗೆ ಹಾಜರಾಗಬಹುದು. ಆಫ್‌ಲೈನ್‌ ಅಥವಾ ಆನ್‌ಲೈನ್‌ ಇವೆರಡರಲ್ಲಿ ಯಾವುದನ್ನು ಬೇಕಾದರೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಅಂತಿಮ ನಿರ್ಧಾರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಿಟ್ಟಿದ್ದು. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರ ಪಡೆದು ಪ್ರಾಂಶುಪಾಲರಿಗೆ ನೀಡಬೇಕು’ ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರದ ಅನ್‌ಲಾಕ್‌ ಮಾರ್ಗಸೂಚಿ ಮತ್ತು ಯುಜಿಸಿ ನಿರ್ದೇಶನದ ಮೇರೆಗೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕಾಲೇಜುಗಳ ಆರಂಭಕ್ಕೆ ಮೊದಲು ಕಾಲೇಜುಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು. ಯಾವುದೇ ವಿದ್ಯಾರ್ಥಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದರು.

ತರಗತಿಗಳನ್ನು ಎಷ್ಟು ಸಮಯ ನಡೆಸಬೇಕು, ಹಂತ ಹಂತವಾಗಿ ನಡೆಸಬೇಕೇ ಮೊದಲಾದ ವಿಚಾರಗಳ ಬಗ್ಗೆ ಶೀಘ್ರವೇ ಸುತ್ತೋಲೆ ಹೊರಡಿಸಲಾಗುವುದು. ಮೊದಲ ಹಂತದಲ್ಲಿ ಪ್ರಾಯೋಗಿಕ (ಪ್ರಾಕ್ಟಿಕಲ್ಸ್‌) ತರಗತಿ ಆರಂಭಿಸಲಾಗುವುದು. ಕಾಲೇಜಿಗೆ ಹೋಗಲೇಬೇಕು ಎಂಬ ಒತ್ತಡವನ್ನು ಸರ್ಕಾರವೂ ಹಾಕುವುದಿಲ್ಲ. ಶಿಕ್ಷಣ ಸಂಸ್ಥೆಗಳೂ ಒತ್ತಡ ಹೇರುವಂತಿಲ್ಲ ಎಂದು ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

‘ಸರ್ಕಾರವು ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಿದ್ದು, ಪೋಷಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಕೋವಿಡ್‌ ಮಾರ್ಗಸೂಚಿ ಅಳವಡಿಸಿಕೊಳ್ಳಲು ಕಾಲೇಜು ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗುವುದು. ಜಿಲ್ಲಾಧಿಕಾರಿಗಳು ಇದರ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸ್ಟೆಲ್‌ಗಳಲ್ಲೂ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಯಾವುದೇ ವಿದ್ಯಾರ್ಥಿಯ ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರದ ವತಿಯಿಂದಲೇ ಚಿಕಿತ್ಸೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಕಲಿಕಾ ನಿರ್ವಹಣೆ ಪೋರ್ಟಲ್‌

ನವೆಂಬರ್‌ 17 ರಂದು ‘ಕಲಿಕಾ ನಿರ್ವಹಣೆ ಆನ್‌ಲೈನ್‌ ಪೋರ್ಟಲ್‌’ಗೆ ಚಾಲನೆ ನೀಡಲಾಗುವುದು. ಇಂತಹ
ದ್ದೊಂದು ವ್ಯವಸ್ಥೆ ದೇಶದಲ್ಲೇ ಪ್ರಥಮ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪೋರ್ಟಲ್‌ ಉದ್ಘಾಟಿಸುವರು ಎಂದು ಅಶ್ವತ್ಥನಾರಾಯಣ ಹೇಳಿದರು.

ಸುಮಾರು 5 ಲಕ್ಷ ವಿದ್ಯಾರ್ಥಿಗಳು ಈ ಪೋರ್ಟಲ್‌ನ ಪ್ರಯೋಜನ ಪಡೆಯಲಿದ್ದಾರೆ. ಶಿಕ್ಷಕರ ಬೋಧನಾ ಮಟ್ಟ ಮತ್ತು ವಿದ್ಯಾರ್ಥಿಗಳ ಕಲಿಕಾ ಮಟ್ಟ ಇದರಿಂದ ಹೆಚ್ಚಲಿದೆ ಎಂದೂ ಅವರು ವಿವರಿಸಿದರು.

ಯಾರು, ಏನಂತಾರೆ ?

ಕಾಲೇಜುಗಳ ಪುನರಾರಂಭದ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆದರೆ ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಆರೋಗ್ಯದ ಬಗ್ಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.

-ಡಾ.ಟಿ.ಎಂ.ಮಂಜುನಾಥ, ಅಧ್ಯಕ್ಷರು, ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರ ಸಂಘ

***
ಆಫ್‌ಲೈನ್‌–ಆನ್‌ಲೈನ್‌ ಆಯ್ಕೆಯನ್ನು ವಿದ್ಯಾರ್ಥಿಗಳಿಗೇ ಬಿಡುವುದು ಸರಿಯಲ್ಲ. ಕಾಲೇಜಿಗೆ ಬಂದರೂ ಸೆಲ್ಫಿ ಅದೂ–ಇದೂ ಎಂದು ವಿದ್ಯಾರ್ಥಿಗಳು ಅಂತರ ಕಾಪಾಡಿಕೊಳ್ಳುವುದಿಲ್ಲ. ನಮ್ಮ ಮಾತನ್ನೂ ಕೇಳುವುದಿಲ್ಲ. ಇನ್ನೂ ಎರಡು ತಿಂಗಳು ಕಾಲೇಜು ಬೇಡ

-ಡಾ.ಟಿ. ಶಶಿಕಲಾ, ಸಹಾಯಕ ಪ್ರಾಧ್ಯಾಪಕಿ, ಸರ್ಕಾರಿ ಕಲಾ ಕಾಲೇಜು

***
ಆಫ್‌ಲೈನ್‌ ಮತ್ತು ಆನ್‌ಲೈನ್‌ ಎರಡೂ ಆಯ್ಕೆಗಳನ್ನು ಕೊಟ್ಟು, ಹಂತ–ಹಂತವಾಗಿ ಕಾಲೇಜು ಪ್ರಾರಂಭಿಸುತ್ತಿರುವುದು ಉತ್ತಮ ನಿರ್ಧಾರ. ಶೈಕ್ಷಣಿಕವಾಗಿ ಹೆಚ್ಚು ಅಂತರ ಇರಬಾರದು. ಆರೋಗ್ಯ ಮತ್ತು ಶಿಕ್ಷಣ ಎರಡೂ ಮುಖ್ಯ.

-ಡಿ.ಕೆ. ಮೋಹನ್‌, ಕೇಂಬ್ರಿಜ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥರು

***
ಮಾಡುವುದಾದರೆ ಪೂರ್ತಿ ಆನ್‌ಲೈನ್‌ ತರಗತಿ ನಡೆಸಲಿ, ಇಲ್ಲದಿದ್ದರೆ ಸಂಪೂರ್ಣ ಆಫ್‌ಲೈನ್‌ ಮಾಡಲಿ. ಕಾಲೇಜು ಪ್ರಾರಂಭವಾದರೆ ಉಪನ್ಯಾಸಕರು ಆನ್‌ಲೈನ್‌ ತರಗತಿಯ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ.

-ಸೌಮ್ಯಾ ಸುಧಾಕರ್, ಪದವಿ ವಿದ್ಯಾರ್ಥಿನಿ, ಕೆಎಲ್‌ಇ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT