ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಮಿಷನ್‌ ದಂಧೆ ಕಡಿವಾಣಕ್ಕೆ ಸಮಿತಿ’: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ

ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ
Last Updated 20 ಏಪ್ರಿಲ್ 2022, 21:23 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯಲ್ಲಿ ಭ್ರಷ್ಟಾಚಾರ, ಕಮಿಷನ್‌ ದಂಧೆಗೆ ಕಡಿವಾಣ ಹಾಕಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಒಳಗೊಂಡ ಉನ್ನತಮಟ್ಟದ ಸಮಿತಿ ರಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ನಿವೃತ್ತ ನ್ಯಾಯಮೂರ್ತಿಗಳ ಜತೆಗೆ, ಆರ್ಥಿಕ, ತಾಂತ್ರಿಕ ತಜ್ಞರು ಸಮಿತಿಯಲ್ಲಿ ಇರುತ್ತಾರೆ. ಆರಂಭದಲ್ಲಿ ₹ 50 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳ ಮೇಲೆ ನಿಗಾವಹಿಸಲಿದೆ. ಕಾಮಗಾರಿಯ ಕ್ರಿಯಾಯೋಜನೆ, ಅಂದಾಜು ಮೊತ್ತ, ನಿಗದಿತ ವೆಚ್ಚಗಳನ್ನು ಪರಿಶೀಲಿಸಿ 15 ದಿನಗಳ ಒಳಗೆ ಅನುಮೋದನೆ ನೀಡಲಿದೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಸಮಿತಿಯು ಅನುಮೋದನೆ ನೀಡಿದ ನಂತರವೇ ಕಾಮಗಾರಿ ಆರಂಭಿಸಬೇಕು. ಕಾರ್ಯಭಾರದ ಹೊರೆ ಹೆಚ್ಚಾದರೆ ಮತ್ತೊಂದು ಪರ್ಯಾಯ ಸಮಿತಿಗೆ ಅನುಮತಿ ನೀಡಲಾಗುವುದು. ಕಡಿಮೆ ಮೊತ್ತದ ಕಾಮಗಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ಸುಳಿವು ನೀಡಿದರು.

ಮೌಖಿಕ ಆದೇಶಕ್ಕೆ ಅಧಿಕಾರಿಗಳೇ ಹೊಣೆ: ‘ನಗರ, ಗ್ರಾಮೀಣ ಪ್ರದೇಶ ಸೇರಿ ಯಾವುದೇ ಕಾಮಗಾರಿ ಕೈಗೊಂಡರೂ ಕಾರ್ಯಾದೇಶ ಕಡ್ಡಾಯ. ಗುತ್ತಿಗೆದಾರ ಸಂತೋಷ್‌ ಪಾಟೀಲ ಪ್ರಕರಣ ಒಂದು ಪಾಠ’ ಎಂದು ಹೇಳಿದರು.

‘ಮೌಖಿಕ ಆದೇಶದ ಮೇಲೆ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರೂ ಅದಕ್ಕೆ ಆಯಾ ಎಂಜಿನಿಯರ್‌ಗಳು, ತಾಲ್ಲೂಕು ಪಂಚಾಯಿತಿ ಇಒ, ಪಿಡಿಒಗಳನ್ನು ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಕಠಿಣಕ್ರಮದ ಫಲವಾಗಿ ₹ 15ಸಾವಿರ ಕೋಟಿ ತೆರಿಗೆ ಸಂಗ್ರಹವಾಗಿದೆ. ಕೇಂದ್ರದ ಪಾಲು ನಿಯಮಿತವಾಗಿ ಬರುತ್ತಿದೆ. ವೆಚ್ಚ ಕಡಿಮೆ ಮಾಡಲಾಗಿದೆ. ಅವಕಾಶವಿದ್ದರೂ ₹ 4 ಸಾವಿರ ಕೋಟಿ ಸಾಲ ಪಡೆದಿಲ್ಲ’ ಎಂದರು.

‘ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ವಿತರಣೆಯಲ್ಲಿನ ಲೋಪದಿಂದಾಗಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಇದನ್ನು ತಡೆಯಲು ಹೆಚ್ಚು ಅನುದಾನ ನೀಡಲಾಗುವುದು. ಸುಗಮ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಅರಣ್ಯ ಸಮಸ್ಯೆಗಳ ಇತ್ಯರ್ಥಕ್ಕೆ ಸಭೆ

‘ಪಶ್ಚಿಮಘಟ್ಟ ವ್ಯಾಪ್ತಿಯ ಅರಣ್ಯ ವಿವಾದಗಳು, ಸಮಸ್ಯೆಗಳ ಇತ್ಯರ್ಥಕ್ಕಾಗಿ ಮೇ ಮೊದಲ ವಾರ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಅರಣ್ಯ ಹಕ್ಕು ಕಾಯ್ದೆಯ ನ್ಯೂನತೆ ಸರಿಪಡಿಸುವುದು, ಕೃಷಿ, ಬದುಕಿಗಾಗಿ ಮಾಡಿಕೊಂಡ ಸಣ್ಣ ಒತ್ತುವರಿಗಳನ್ನು ನಗರ ಪ್ರದೇಶಗಳ ಭೂ ಕಬಳಿಕೆ ಕಾನೂನಿನಿಂದ ಪ್ರತ್ಯೇಕಿಸುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು, ಅಡ್ವೊಕೇಟ್‌ ಜನರಲ್‌, ಕಾನೂನು ತಜ್ಞರು, ವಕೀಲರು ಭಾಗವಹಿಸುವರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT