ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಸಮಾವೇಶ: ಹೊತ್ತು ಬಂದಂತೆ ಕೊಡೆ ಹಿಡಿಯುತ್ತಿದ್ದಾರೆ- ಸಾಣೆಹಳ್ಳಿ ಶ್ರೀ

ಧರ್ಮಗುರು–ರಾಜಕಾರಣಿಗಳಿಗೆ ಸಾಣೇಹಳ್ಳಿ ಶ್ರೀ ಚಾಟಿ
Last Updated 6 ಮೇ 2022, 3:52 IST
ಅಕ್ಷರ ಗಾತ್ರ

ಬೆಂಗಳೂರು: ‘ಹೊನ್ನಿನ ಹೊಗೆ ಹಾಯಬೇಕಾದ ಜನಮಾನಸದ ಹೃದಯಗಳಲ್ಲಿ ಇವತ್ತು ಅವಿವೇಕವೇ ವಿಜೃಂಭಿಸುತ್ತಿದೆ. ಧರ್ಮ ರಾಜಕೀಯದ ಹೆಸರಿನಲ್ಲಿ ಹಗಲು ದರೋಡೆ ನಡೆಯುತ್ತಿದೆ. ಧರ್ಮ–ರಾಜಕೀಯದ ದುರಂಧರರು ಹೊತ್ತು ಬಂದಂತೆ ಕೊಡೆ ಹಿಡಿಯುತ್ತಿದ್ದಾರೆ’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ರಾಜ್ಯದ 20ಕ್ಕೂ ಹೆಚ್ಚು ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ, ಧರ್ಮ ಗುರುಗಳು ಮತ್ತು ಸಂವಿಧಾನ ತಜ್ಞರ ಸಂದೇಶ ಸಾರುವ ‘ಸೌಹಾರ್ದ ಸಂಸ್ಕೃತಿ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಎಲ್ಲ ಧರ್ಮಗಳಲ್ಲೂ ಸಣ್ಣ ಜನ ಇರುತ್ತಾರೆ. ಇಂತಹವರನ್ನು ಪ್ರತಿಭಟಿಸುವ ಮನೋಸ್ಥೈರ್ಯ ನಮಗೆ ಬೇಕಿದೆ. ಅಶಾಂತಿಯನ್ನು ನಮ್ಮ ಮನಸ್ಸಿನೊಳಗೆ ಯಾರು ನುಗ್ಗಿಸಿದರು, ಹೇಗೆ ನುಗ್ಗಿಸಿದರು, ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಲೆಯಲ್ಲಿ ಕೇವಲ ಗೊಬ್ಬರ, ಕಸ ತುಂಬಿಕೊಂಡು ಅಜ್ಞಾನಿಗಳಾಗಬಾರದು’ ಎಂದು ಎಚ್ಚರಿಸಿದರು.

‘ಸಂವಿಧಾನ ನಮ್ಮ ಧರ್ಮವಾಗಬೇಕು. ಸರಿದಾರಿಯಲ್ಲಿ ಸಾಗಿ ಎಲ್ಲರೂ ಬಯಸುವ ದೇಶ ಕಟ್ಟಬೇಕು.ವ್ಯಕ್ತಿಗತ ಶುದ್ಧಿಯಿಂದ ಲೋಕಶುದ್ಧಿಯ ಕಡೆಗೆ ಸಾಗಬೇಕು. ಇದನ್ನು ಎಲ್ಲ ಧರ್ಮದವರೂ ಅರಿಯಬೇಕು’ ಎಂದು ಕಿವಿಮಾತು ಹೇಳಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ‘ಸಂವಿಧಾನದ ಹಕ್ಕಗಳು ಕೋರ್ಟ್‌ನಲ್ಲಿರಬೇಕು. ಶಾಂತಿ ಸೌಹಾರ್ದತೆ ಸಾರುವ ದಿಸೆಯಲ್ಲಿ ಮಾನವ ಹಕ್ಕುಗಳು ಸಮಾಜದಲ್ಲಿರಬೇಕು’ ಎಂದು ಪ್ರತಿಪಾದಿಸಿದರು.

ಅಮೀರ್‌ ಎ ಷರಿಯತ್‌ನ ಮೌಲಾನ ಸಗೀರ್‌ ಅಹಮದ್‌ ಖಾನ್‌ ರಷಾದಿ, ‘ಅಧರ್ಮವನ್ನು ಯಾವುದೇ ಧರ್ಮ ಇಷ್ಟಪಡುವುದಿಲ್ಲ. ಇಂದು ನಮ್ಮನ್ನಾವರಿಸಿರುವ ಆತಂಕಗಳು ಬೇಗ ದೂರವಾಗಿ ಎಲ್ಲೆಡೆ ಶಾಂತಿ ನೆಲೆಗೊಳ್ಳಲಿ‘ ಎಂದು ಆಶಿಸಿದರು.

ಆಶಯ ನುಡಿಗಳನ್ನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಧರ್ಮ ದ್ವೇಷದ ಘಟನೆಗಳು ಕರ್ನಾಟಕ ಈತನಕ ಕಟ್ಟಿಕೊಂಡು ಬಂದಿರುವ ಸೌಹಾರ್ದ ಪರಂಪರೆಗೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕೂಡಲಿ ಶೃಂಗೇರಿ ಮಠದ ವಿದ್ಯಾಧರವಿದ್ಯಾರಣ್ಯ ಭಾರತೀ ಸ್ವಾಮೀಜಿ, ಬೆಂಗಳೂರಿನ ಆರ್ಚ್‌ ಬಿಷಪ್‌ ರೆ.ಫಾ.ಡಾ.ಪೀಟರ್‌ ಮಜಾದೊ, ಅಲ್‌ ಹಿದಾಯಿ ಮಸೀದಿಯ ಮೌಲಾನ ಶಾಹುಲ್‌ ಹಮೀದ್‌ ಮೌಲ್ವಿ, ರಾಜನ ಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ಹೊಸದುರ್ಗ ಶಾಖೆಯ ಈಶ್ವರಾನಂದಪುರಿ ಸ್ವಾಮೀಜಿ, ಹಿರಿಯೂರಿನ ಆದಿಜಾಂಬವ ಪೀಠದ ಷಡಕ್ಷರಿ ಮುನಿ ಸ್ವಾಮೀಜಿ, ಹೊಸದುರ್ಗ ಕುಂಚಟಿಗ ಪೀಠದ ಶಾಂತವೀರ ಸ್ವಾಮೀಜಿ ಮಾತನಾಡಿದರು.

ಸಂವಿಧಾನದ ಆಶಯಗಳನ್ನು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ವಿವರಿಸಿದರು. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ಎಂ.ಹನೀಫ್‌ ಕಾರ್ಯಕ್ರಮ ನಿರೂಪಿಸಿದರು.

ಧೂಲ್‌ ಚಹರೆ ಪರ್‌ ಥಿ...!

ಪ್ರಸಿದ್ಧ ಉರ್ದು ಕವಿ ಮಿರ್ಜಾ ಗಾಲಿಬ್‌ನ ಜನಪ್ರಿಯ ಪದ್ಯದ, ‘ಧೂಲ್‌ ಚಹರೇ ಪರ್ ಥಿ ಔರ್ ಹಮ್‌ ಆಯಿನಾ ಸಾಫ್‌ ಕರತೇ ರಹೆ... (ದೂಳು ಮಾರಿಯ ಮೇಲಿತ್ತು, ಆದರೆ ನಾವು ಕನ್ನಡಿಯನ್ನು ಒರೆಸುತ್ತಾ ಇದ್ದೆವು)’ ಸಾಲುಗಳನ್ನುಉದ್ಧರಿಸಿದ ಬೇಲಿಮಠದ ಶಿವರುದ್ರ ಸ್ವಾಮೀಜಿ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗರ ಪದ್ಯಗಳ ಮುಖಾಂತರ ಮಾರ್ಮಿಕವಾಗಿ ವಿಶ್ಲೇಷಿಸಿದರು.

‘ಯಾವುದೀ ಪ್ರವಾಹವು’ ಕವನದ ಸಾಲು, ‘ಎದೆ ಎದೆಗಳ ನಡುವೆ ಇರುವ, ಸೇತುವೆಗಳು ಮುರಿದಿವೆ, ಭಯ-ಸಂಶಯ-ತಲ್ಲಣಗಳ ಕಂದರಗಳು ತೆರೆದಿವೆ’ ಎಂಬುದನ್ನು ಉಲ್ಲೇಖಿಸಿದ ಅವರು, ‘ನಾವು ನಕಾರಾತ್ಮಕ ಧೋರಣೆಯಿಂದ ಹೊರಬರಬೇಕು. ವಿಶ್ವಾಸದ ಹಾದಿಯಲ್ಲಿ ದೋಷಗಳನ್ನು ಬಿಟ್ಟು ಸಾಗಬೇಕು.ಮನದ ದೌರ್ಬಲ್ಯ ಮತ್ತು ಬುದ್ಧಿಯ ದೌರ್ಜನ್ಯವನ್ನು ಮೆಟ್ಟಿ, ಎರಡಳಿದು ಕೂಡುವುದೇ ಸಮರಸದ ಜೀವನ ಎಂಬಂತಾಗಬೇಕು’ ಎಂದು ಆಶಿಸಿದರು.

‘ವಿಧಾನಸೌಧದಬಲ್ಬ್‌ಗಳನ್ನು ಬದಲಿಸಬೇಕು’

ವಿಧಾನ ಸೌಧದಲ್ಲಿರುವ ಬಲ್ಬ್‌ಗಳು (ಜನಪ್ರತಿನಿಧಿಗಳು) ಸರಿಯಿಲ್ಲ. ಕೆಲವು ಪಕ ಪಕ ಅಂತಿದ್ದರೆ, ಇನ್ನೂ ಕೆಲವು ಉರಿಯುತ್ತಲೇ ಇಲ್ಲ. ಹಾಗಾಗಿ ವಿದ್ಯುಚ್ಛಕ್ತಿ ಹಾಯಿಸುವ ಮತದಾರ ಇವುಗಳನ್ನು ಬದಲಾಯಿಸಬೇಕಿದೆ ಎಂದುಚಿತ್ರದುರ್ಗದ ಛಲವಾದಿ ಪೀಠಾಧ್ಯಕ್ಷ ಬಸವ ನಾಗಿದೇವ ಸ್ವಾಮೀಜಿ ಕುಟುಕಿದರು.

‘ನಮ್ಮ ಜನಪ್ರತಿನಿಧಿಗಳ ಆಯ್ಕೆಯಲ್ಲಿ ದೋಷವೇಇವತ್ತಿನ ಇಷ್ಟೆಲ್ಲಾ ಅಶಾಂತಿಗಳಿಗೆ ಪ್ರಮುಖ ಕಾರಣವಾಗಿದೆ’ ಎಂದ ಅವರು, ‘ಇಂದು ಕೆಲವು ಮಠಾಧೀಶರು ಮತಬ್ಯಾಂಕ್‌ಗಳ ಶಾಖೆಗಳಂತಾಗಿದ್ದಾರೆ. ರಾಜಕಾರಣಿಗಳು ವಿಧಾನಸೌಧದ ಪಶ್ಚಿಮ ದ್ವಾರದಲ್ಲೇ ವ್ಯವಹರಿಸುವ ಮೂಲಕ ವಾವಸ್ತವದಲ್ಲೂ ಹಿಂಬಾಗಿಲ ವ್ಯವಹಾರಗಳಲ್ಲಿ ಮುಳುಗಿದ್ದಾರೆ. ಈ ವ್ಯವಸ್ಥೆ ಸರಿಯಾಗಲು ಮತದಾರರು ಆಮಿಷಗಳಿಂದ ದೂರಾಗಿ ಉತ್ತಮರನ್ನು ಆಯ್ಕೆ ಮಾಡುವುದೇ ಸರಿಯಾದ ಮಾರ್ಗ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT