ಆರೋಪ ಮಾಡುವವರು ದಾಖಲೆ ಒದಗಿಸಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಆರೋಪ ಮಾಡುವವರು ಆಧಾರವಿಲ್ಲದೇ ಮಾತನಾಡಬಾರದು. ಯಾರು ಏನು ಬೇಕಾದರೂ ಹೇಳಿಕೆ ಕೊಡಲಿ. ಆದರೆ, ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ನೀಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಆರೋಪಕ್ಕೆ ತಕ್ಕ ದಾಖಲೆಗಳನ್ನು ನೀಡುವುದು ಹೇಳಿಕೆ ಕೊಡುವವರ ಕರ್ತವ್ಯ. ಆಗ ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸುತ್ತೇವೆ’ ಎಂದರು.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಅಕ್ರಮದಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಕುಮಾರಸ್ವಾಮಿ ಕೂಡ ದಾಖಲೆಗಳನ್ನು ಒದಗಿಸಿದರೆ ಆ ಬಗ್ಗೆ ತನಿಖೆ ನಡೆಸುತ್ತೇವೆ’ ಎಂದರು.
ರಾಜ್ಯ ಸರ್ಕಾರದಲ್ಲಿ ವಿವಿಧ ಹುದ್ದೆಗಳಿಗೆ ದರ ನಿಗದಿಯಾಗಿದೆ ಎಂಬ ಅರ್ಥದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿರುವ ಕುರಿತು ಕೇಳಿದಾಗ, ‘ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ. ಖರ್ಗೆ ಮೂಲ ಕಾಂಗ್ರೆಸ್ಸಿಗರು. ಅವರಿಗೆ ಇದೆಲ್ಲ ಕರಗತ ಆಗಿದೆ. ಖರ್ಗೆಯವರಿಂದ ಪಾಠ ಕಲಿಯುವ ಅಗತ್ಯವಿಲ್ಲ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.