ಬುಧವಾರ, ಆಗಸ್ಟ್ 10, 2022
20 °C
ಗೊಂದಲ ಸೃಷ್ಟಿಸಬೇಡಿ: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ತಾಕೀತು

ಭಾವಿ ಸಿ.ಎಂ ಹೇಳಿಕೆ: ಕಾಂಗ್ರೆಸ್ ರಾಜ್ಯ ಮುಖಂಡರಿಗೆ ಹೈಕಮಾಂಡ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಮುಂದಿನ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬುದನ್ನು ಬಿಂಬಿಸುತ್ತಾ ಗೊಂದಲ ಸೃಷ್ಟಿಸುವ ಕೆಲಸ ಬಿಟ್ಟು, ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು’ ಎಂದು ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಮುಖಂಡರಿಗೆ ಎಚ್ಚರಿಕೆ ನೀಡಿದೆ.

ಶಾಸಕರಾದ ಜಮೀರ್ ಅಹಮದ್‌ ಹಾಗೂ ರಾಘವೇಂದ್ರ ಹಿಟ್ನಾಳ್‌, ಮತ್ತಿತರರು ‘ಸಿದ್ದರಾಮಯ್ಯನವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ’ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಕೆಲವು ಮುಖಂಡರು ವಿರೋಧಿಸಿರುವ ಕಾರಣ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಸೋಮವಾರ ಪ್ರಕಟಣೆ ಮೂಲಕ ಈ ಎಚ್ಚರಿಕೆ ನೀಡಿದ್ದಾರೆ.

‘ಇತ್ತೀಚೆಗೆ ಪಕ್ಷದ ಕೆಲವು ರಾಜ್ಯ ಮುಖಂಡರು ನಾಯಕತ್ವದ ಬಗ್ಗೆ ಹಾಗೂ ಕಾಂಗ್ರೆಸ್ ಸರ್ಕಾರ ರಚನೆ ಆದರಲ್ಲಿ ಮುಖ್ಯಮಂತ್ರಿ ಯಾರು ಆಗಲಿದ್ದಾರೆ ಎಂಬ ಬಗ್ಗೆ ಕಳವಳಕಾರಿ ಹೇಳಿಕೆ ನೀಡುತ್ತಿರುವುದನ್ನು ಗಮನಿಸುತ್ತಲೇ ಇದ್ದೇನೆ. ಮುಖ್ಯಮಂತ್ರಿ ಆಯ್ಕೆಯ ವಿಚಾರವು ಪಕ್ಷ ಹಾಗೂ ಶಾಸಕರ ನಿರ್ಧಾರಕ್ಕೆ ಬಿಟ್ಟದ್ದು’ ಎಂದಿದ್ದಾರೆ.

ಈ ರೀತಿ ಹೇಳಿಕೆ ನೀಡುವುದನ್ನು ಪಕ್ಷ ಖಂಡಿತ ಸಹಿಸುವುದಿಲ್ಲ. ಗೊಂದಲ ಉಂಟುಮಾಡುವ ಹೇಳಿಕೆ ನೀಡುವವರಿಗೆ ಇದು ಮುನ್ನೆಚ್ಚರಿಕೆಯಾಗಿದೆ. ರಾಜ್ಯದ ಪ್ರಗತಿ ಮತ್ತು ಜನರ ಹಿತವೇ ಸದ್ಯ ಕಾಂಗ್ರೆಸ್‌ ಎದುರಿಗಿರುವ ಏಕೈಕ ಗುರಿ’ ಎಂದೂ ಅವರು ಒತ್ತಿ ಹೇಳಿದ್ದಾರೆ.

‘ರಾಜ್ಯದ ಜನರ ಹಿತ ಕಾಯುವ ಉದ್ದೇಶದೊಂದಿಗೆ ಪಕ್ಷದ ಎಲ್ಲ ನಾಯಕರು ಒಂದಾಗಿ ಮಹಾಭಾರತದ ‘ಅರ್ಜುನ’ನಂತೆ ಹೋರಾಡಲಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವುದೇ ನಮ್ಮ ಏಕೈಕ ಗುರಿ’ ಎಂದಿದ್ದಾರೆ.

‘ಕಾಂಗ್ರೆಸ್‌ನ ಉತ್ತಮ ಆಡಳಿತವನ್ನು ನೆನಪಿಟ್ಟುಕೊಂಡಿರುವ ಕರ್ನಾಟಕದ ಜನತೆ, ಜನಪರ ಯೋಜನೆಗಳ ಜಾರಿಯ ನಿಟ್ಟಿನಲ್ಲಿ ಮತ್ತೆ ನಮ್ಮತ್ತ ಗಮನ ಹರಿಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಜನರ ಆಶೋತ್ತರಗಳಗೆ ಸ್ಪಂದಿಸುವತ್ತ ಗಮನ ಹರಿಸಬೇಕಿದೆ’ ಎಂದೂ ಅವರು ಪಕ್ಷದ ಶಾಸಕರು ಮತ್ತು ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು