ಶುಕ್ರವಾರ, ನವೆಂಬರ್ 27, 2020
24 °C
ನೆಹರು ಜಯಂತಿ ಕಾರ್ಯಕ್ರಮ

ಆರ್‌ಎಸ್‌ಎಸ್‌ ಹಿಂದೂ ಸಂಘಟನೆಯಲ್ಲ; ಜಾತಿ ಸಂಘಟನೆ: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರ್‌ಎಸ್ಎಸ್‌ ಅಂದರೆ ಅದೊಂದು ಜಾತಿ ಸಂಘಟನೆ. ಅದೊಂದು‌ ಹಿಂದೂ‌ ಸಂಘಟನೆಯಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜವಾಹರ್ ಲಾಲ್ ನೆಹರು‌ ಜನ್ಮದಿನ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ನೆಹರುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮಾತನಾಡಿದ ಅವರು, ‘ನಾವೆಲ್ಲ ಹಿಂದೂಗಳಲ್ವಾ, ಅವರೊಬ್ಬರೇನಾ ಹಿಂದೂ. ನೀವು ಹೇಳ್ಬೇಕು ಕೂತ್ಕೊಳ್ರಯ್ಯಾ ನಾವು ಹಿಂದೂ ಅಂತ. ಗಾಂಧೀಜಿ‌ ಹಿಂದೂ‌ ಅಲ್ವಾ, ನೆಹರು ಹಿಂದೂ ಅಲ್ವಾ’ ಎಂದು ತಮ್ಮದೇ ಶೈಲಿಯಲ್ಲಿ ಪ್ರಶ್ನಿಸಿದರು.

‘ಸ್ವಾತಂತ್ರ್ಯಕ್ಕೂ ಮೊದಲು ಬಿಜೆಪಿ ಎಲ್ಲಿತ್ತು. ಬಿಜೆಪಿಯವರು ಚರಿತ್ರೆಯನ್ನೇ ತಿರುಚಿ ಬಿಡುತ್ತಾರೆ. ಸಂವಿಧಾನ ವಿಕೃತಗೊಳಿಸಲು ಹೊರಟವರು ಯಾರು. ಹೆಡಗೆವಾರ್ , ಗೋಲ್ವಾಲ್ಕರ್ ಪ್ರಧಾನಿ ಆಗಿದ್ದಿದ್ದರೆ ದೇಶ ಸರ್ವಾಧಿಕಾರಿ ಧೋರಣೆ ತಾಳುತ್ತಿತ್ತು. ಭಾರತದ ಅತ್ಯಂತ ಸುಳ್ಳಿನ ಪ್ರಧಾನಿ ನರೇಂದ್ರ ಮೋದಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಲ್ಪಸಂಖ್ಯಾತರನ್ನು ತಳವೂರುವಂತೆ ನೆಹರು ಮಾಡಿದ್ದರು. ಅಲ್ಪಸಂಖ್ಯಾತರ ವಿರೋಧಿಗಳು ಬಿಜೆಪಿಯವರು. ಸ್ವಾತಂತ್ರ್ಯಕ್ಕೆ ಆರ್‌ಎಸ್‌ಎಸ್‌ ಕೊಡುಗೆಯೇನು. ಸ್ವಾತಂತ್ರ್ಯಕ್ಕಾಗಿ ಅವರ ಬಲಿದಾನವೇನು. ಭಗತ್ ಸಿಂಗ್‌, ವಿವೇಕಾನಂದರ ಹೆಸರನ್ನು ಮುಂದೆ ತರುತ್ತಾರೆ. ಪಟೇಲರ ಪ್ರತಿಮೆ ಹಾಕಿ ಆರ್‌ಎಸ್‌ಎಸ್‌ ಎನ್ನುತ್ತಾರೆ. ಇವರೆಲ್ಲ ಆರ್‌ಎಸ್‌ಎಸ್‌ನಿಂದ ಬಂದವರಾ. ಎಲ್ಲರೂ‌ ಸ್ವಾತಂತ್ರ ಸೇನಾನಿಗಳು. ಅವರೆಲ್ಲರನ್ನು ಆರ್‌ಎಸ್‌ಎಸ್ ನಮ್ಮವರೆಂದು ಬಿಂಬಿಸಿಕೊಳ್ಳುತ್ತಿದೆ. ಸುಳ್ಳು ಹುಟ್ಟಿರುವುದೇ ಆರ್‌ಎಸ್‌ಎಸ್‌ನವರಿಂದ. ಅವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ನೆಹರು ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ಆದರೆ, ಬಿಜೆಪಿಯವರು ಅದನ್ನು ಎಲ್ಲೂ ಹೇಳುವುದಿಲ್ಲ. ನೆಹರು ನಿಧನ ವೇಳೆ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ ಭಾರತ ನಿರ್ಮಾತೃ ಎಂದು ಬರೆದಿತ್ತು. ವರ್ಡ್ ಟೈಮ್ಸ್ ಕೂಡ ನೆಹರು ಬಗ್ಗೆ ಬರೆದಿದೆ. ಅದನ್ನು ನೆಹರು ಹೇಳಿ‌ ಬರೆಸಿದ್ದಾರಾ. ಇದನ್ನು ಬಿಜೆಪಿಯವರು ಯಾಕೆ ಒಪ್ಪಲ್ಲ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ‘ನಾಯಕತ್ವ ಬೆಳೆಸಿಕೊಂಡು ಜನರ ಸೇವೆ ಮಾಡಬೇಕು. ಹೆಣ್ಣು ಮಕ್ಕಳ ಶೋಷಣೆಯನ್ನು ನೆಹರು ತಪ್ಪಿಸಿದ್ದರು. ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ತಂದವರು. ಕೈಗಾರಿಕೆಗೆ ಒತ್ತು ಕೊಟ್ಟಿದ್ದರು. ಆದರೆ, ಈಗಿನ ಕೇಂದ್ರ ಉದ್ಯೋಗ ಸೃಷ್ಟಿಗೆ ಯಾವ ಕ್ರಮಕೈಗೊಂಡಿದೆ. ಸಣ್ಣ ಕೈಗಾರಿಕೆಗಳನ್ನು ಸರ್ವನಾಶ ಮಾಡಿದ್ದೇ ಬಿಜೆಪಿ’ ಎಂದು ದೂರಿದರು.

‘ಬಿಎಸ್ಎನ್ಎಲ್ ಮುಚ್ಚಲು ಹೊರಟಿದ್ದಾರೆ. ಈಗ ರೈಲ್ವೆಯನ್ನೂ ಖಾಸಗಿಯವರಿಗೆ ಕೊಡುತ್ತಿದ್ದಾರೆ. ಇನ್ನೂ ಹಲವು ಕೈಗಾರಿಕೆಗಳನ್ನು ಮುಚ್ಚುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಆರ್‌ಎಸ್‌ಎಸ್‌ ಸಿದ್ಧಾಂತದ ಮೇಲೆ ಮೋದಿಯವರ ಸರ್ಕಾರ ನಡೆಯುತ್ತಿದೆ. ನೆಹರು ಸಿದ್ಧಾಂತವನ್ನು ನಾಶ ಮಾಡಲು ಈ ಸರ್ಕಾರ ಹೊರಡಿಸಿದೆ. ನೆಹರು ಅವರ ಹೆಸರು ನೆನಪಿನಲ್ಲಿಡದಂತೆ ಮಾಡಲು ಹೊರಟಿದೆ. ನೆಹರು ಅಭಿವೃದ್ಧಿ ಜನರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ಅವರ ಹೆಸರು ಕೆಡಿಸಲು ಹೊರಟಿದ್ದಾರೆ’ ಎಂದು ದೂರಿದರು.

‘ನೆಹರು ಅಧಿಕಾರದಲ್ಲಿದ್ದಾಗ ಏನು ಬೇಕಾದರೂ ಮಾಡಬಹುದಿತ್ತು. ರಷ್ಯಾ ಮಾದರಿಯನ್ನು ಬೇಕಾದರೂ ತರಬಹುದಿತ್ತು. ಆದರೆ, ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆಯಿತ್ತು. ಹೀಗಾಗಿಯೇ ದೇಶದಲ್ಲಿ ಪ್ರಜಾಪ್ರಭುತ್ವ ಬಂದಿದೆ. ಅದರಿಂದಲೇ ಇವತ್ತು ಮೋದಿಗೆ ಅಧಿಕಾರ ಸಿಕ್ಕಿದ್ದು. ಇಲ್ಲವಾದರೆ ಇವತ್ತು ಅದೇಗೆ ಅಧಿಕಾರ ಸಿಗುತ್ತಿತ್ತು. ಆದರೆ,  ಅಧಿಕಾರ ಸಿಕ್ಕಿದೆ ಎಂದು ಎಲ್ಲರನ್ನು ತುಳಿಯುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ವಿರೋಧಿಸಬೇಕಿದೆ’ ಎಂದರು.

ಬಿಹಾರ ಚುನಾವಣೆ ಬಗ್ಗೆ ಮಾತನಾಡಿದ ಖರ್ಗೆ, ‘ಬಿಹಾರದಲ್ಲಿ ಹೆಚ್ಚಿನ ಮತಗಳು ನಮಗೆ ಬಂದಿದೆ. ಎನ್‌ಡಿಎಯವರು ಬೇರೆ ರೀತಿಯಿಂದ ಅಧಿಕಾರಕ್ಕೆ ಬಂದಿದ್ದಾರೆ ಎನ್ನುವುದು ದೇಶದ ಜನರಿಗೂ‌ ಗೊತ್ತಾಗಿದೆ. ನಾವು ಒಗ್ಗಟ್ಟಾಗಿಯೇ ಎದುರಿಸಬೇಕು. ಬೇರೆ ಅಭಿಪ್ರಾಯ ಬಿಟ್ಟು ತತ್ವ, ಸಿದ್ಧಾಂತದಡಿ ಕೆಲಸ ಮಾಡಬೇಕು. ಆಗ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ. ಪಕ್ಷದಲ್ಲಿ ಒಗ್ಗಟ್ಟು ಅಗತ್ಯ’ ಎಂದು ಖರ್ಗೆ ಪ್ರತಿಪಾದಿಸಿದರು.

ರಾಜ್ಯಸಭಾ ಕಾಂಗ್ರೆಸ್‌ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ‘ಗಾಂಧೀಜೀಯವರು‌ ನಂಬಿಕೆ ಇಟ್ಟಿದ್ದ ವ್ಯಕ್ತಿ‌ ನೆಹರು. ಅಂಥವರ ಜನ್ಮದಿನವನ್ನು ನಾವು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದಿದೆ. ನಿಜ. ಆದರೆ, ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿಲ್ಲ. ಎಲ್ಲರಿಗೂ‌ ಸಮಾನತೆ ತಂದುಕೊಡುವ ಪ್ರಯತ್ನವನ್ನು ನೆಹರು ಮಾಡಿದ್ದರು’ ಎಂದರು.

‘ಸ್ವಾತಂತ್ರ್ಯ ಬಂದ ಹೊಸದರಲ್ಲಿ ಬಡತನವಿತ್ತು. ನೆಹರು ಹೊಸ ಅಭಿವೃದ್ಧಿ ದೃಷ್ಟಿಕೋನ ತಂದರು. ಯುವಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರು. ಬಾಕ್ರಾನಂಗಲ್ ಅಣೆಕಟ್ಟು ಕಟ್ಟಿದವರು ಅವರು. ಅಂದೇ ನೀರಾವರಿ ಯೋಜನೆಗೆ ಒತ್ತು ನೀಡಿದ್ದರು. ಇವತ್ತು ಕೆಲವರು ಕಾಂಗ್ರೆಸ್ ಏನು‌ ಮಾಡಿದೆ ಎಂದು ಕೇಳುತ್ತಾರೆ. ಸೋಮನಾಥ್ ದೇಗುಲಗಳ ಯಾಕೆ ಕಟ್ಟಲಿಲ್ಲ ಎಂದೂ ಕೇಳುತ್ತಾರೆ. ಆದರೆ, ದೇಗುಲಕ್ಕಿಂತ ಅಣೆಕಟ್ಟು ಮುಖ್ಯವಾಗಿತ್ತು. ಲಕ್ಷಾಂತರ ರೈತರಿಗೆ ಜೀವ ನೀಡಬೇಕಿತ್ತು. ಅದಕ್ಕೆ ಮೊದಲು ನೀರಾವರಿಗೆ ಒತ್ತು ಕೊಟ್ಟಿದ್ದು. ಈ ಬಗ್ಗೆ ಆರೋಪ ಮಾಡುವವರು ಇದನ್ನು ತಿಳಿದುಕೊಳ್ಳಬೇಕು’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿದ, ‘ಸೆಕ್ಯುಲರಿಸಂ ಅಂದರೆ ಸುಳ್ಳು ವದಂತಿ ಹರಡುತ್ತಾರೆ. ಖಾಕಿ ಚೆಡ್ಡಿ, ಕರಿ ಟೋಪಿಯವರು ವಿರೋಧಿಸುತ್ತಾರೆ. ಸತ್ಯ ಹೇಳಲು ನಾವು ಅಂಜಬೇಕಿಲ್ಲ. ಸುಳ್ಳನ್ನೇ ಸತ್ಯವೆಂದು ಕರಿಟೋಪಿಯವರು ಬಿಂಬಿಸುತ್ತಾರೆ. ಸ್ವಾತಂತ್ರ್ಯ ಧ್ವಜ ಹಾರಿಸದವರು ದೇಶದ್ರೋಹಿಗಳು. ಸಂವಿಧಾನವನ್ನು ಒಪ್ಪದವರು ದೇಶದ್ರೋಹಿಗಳು’ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

‘ನೆಹರು ಆಧುನಿಕ ಭಾರತದ ಶಿಲ್ಪಿ. ಈ ಮಾತನ್ನು ಖಾಕಿ ಚೆಡ್ಡಿ ಕರಿ ಟೋಪಿಯವರು ಒಪ್ಪಿಕೊಳ್ಳಲ್ಲ. ಖಾಕಿ ಚೆಡ್ಡಿ, ಕರಿ ಟೋಪಿಯವರು ವಿರೋಧಿಸುತ್ತಲೇ ಬರುತ್ತಿದ್ದಾರೆ’ ಎಂಷದರು.

ಮಾಜಿ ಸಂಸದ ಕೆ. ಎಚ್.ಮುನಿಯಪ್ಪ ಮಾತನಾಡಿ, ‘ಬಿಹಾರ ಚುನಾವಣೆಯಲ್ಲಿ‌ ಅಕ್ರಮ ನಡೆದಿದೆ 15ರಿಂದ 20 ಕ್ಷೇತ್ರಗಳಲ್ಲಿ ಏರಿಳಿತ ಮಾಡಿದ್ದಾರೆ. ಅಕ್ರಮ ಮಾಡಿ ಬಿಜೆಪಿಯವರು ಅಧಿಕಾರ ಹಿಡಿದಿದ್ದಾರೆ’ ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ಕೃಚ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಮಾಜಿ ಎಚ್‌. ಶಾಸಕ ಆಂಜನೇಯ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು