ಶನಿವಾರ, ಸೆಪ್ಟೆಂಬರ್ 24, 2022
24 °C
ವಿಧಾನಸಭೆ ವಿರೋಧ ಪಕ್ಷದ

ಶೇ 10ರ ಮೀಸಲಾತಿ ವಿರುದ್ಧ ಧ್ವನಿ ಎತ್ತದ ಒಬಿಸಿ: ಸಿದ್ದರಾಮಯ್ಯ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮೀಸಲಾತಿ ವಿರೋಧಿಸುತ್ತಿದ್ದವರು ಶೇ 10ರಷ್ಟು ಮೀಸಲಾತಿ ದೊರೆತ ಮೇಲೆ ಸುಮ್ಮನಾದರು. ಆರ್ಥಿಕತೆಯ ಆಧಾರದಲ್ಲಿ ಮೇಲ್ವರ್ಗಗಳಿಗೆ ನೀಡಿದ ಮೀಸಲಾತಿ ವಿರುದ್ಧ ಪರಿಶಿಷ್ಟರು, ಹಿಂದುಳಿದ ವರ್ಗಗಳು ಧ್ವನಿಯನ್ನೇ ಎತ್ತಲಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಸೋಮವಾರ ಹಮ್ಮಿ ಕೊಂಡಿದ್ದ ಹಾವನೂರು ಆಯೋಗದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾವನೂರು, ಮಂಡಲ್‌ ಆಯೋಗದ ವರದಿ ಸೇರಿದಂತೆ ಒಟ್ಟಾರೆ ಮೀಸಲಾತಿ ವಿರೋಧಿಸಿದ್ದು ಇದೇ ಸಂಘ ಪರಿವಾರ, ಬಿಜೆಪಿ. ಮೀಸಲಾತಿ ವಿರೋಧಿಸಿದ್ದ ರಾಮಾಜೋಯಿಸ್ ಅವರ ನಡೆ ಸಮರ್ಥಿಸಿಕೊಂಡಿದ್ದ ಅಂತಹ ಪಕ್ಷದ ಜತೆಗೆ ಹಿಂದುಳಿದ ವರ್ಗಗಳು ಗುರುತಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.

ಸಾವಿರಾರು ವರ್ಷಗಳಿಂದಲೂ ಶೇ 90ರಷ್ಟು ಮೀಸಲಾತಿಯನ್ನು ಅಲಿಖಿತವಾಗಿ ಅನುಭವಿಸುತ್ತಾ ಬಂದ ವರ್ಗ ಹೇಗೆ ತಾನೆ ತಮ್ಮ ಸೌಲಭ್ಯ ಬಿಟ್ಟಕೊಡಲು ಸಾಧ್ಯ? ಬಹುಸಂಖ್ಯಾತ ಶೂದ್ರರು, ದಲಿತರು, ಮಹಿಳೆಯರು ಅಕ್ಷರ ಸಂಸ್ಕೃತಿ, ಸಂಪತ್ತಿನ ಹಿಡಿತದಿಂದ ವಂಚಿತರಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್‌ ಸಮಿತಿ ಮೂಲಕ ಮೀಸಲಾತಿ ಕ್ರಾಂತಿಗೆ ಮುನ್ನುಡಿ ಬರೆದರು. ನಂತರ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದರು. 50 ವರ್ಷಗಳ ಹಿಂದೆ ಎಲ್‌.ಜಿ.ಹಾವನೂರು ಅವರು ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾದರು ಎಂದು ಬಣ್ಣಿಸಿದರು.

ಹಿರಿಯ ವಕೀಲ ರವಿವರ್ಮ ಕುಮಾರ್, ಹಾವನೂರು ಆಯೋಗದ ವರದಿಯ ಹಲವು ಶಿಫಾರಸುಗಳನ್ನು ಇಂದಿಗೂ ಜಾರಿಗೆ ತಂದಿಲ್ಲ ಎಂದರು.

ದಕ್ಷಿಣ ಆಫ್ರಿಕಾ ಸಂವಿಧಾನದಲ್ಲೂ ಹಾವನೂರು ವರದಿಯ ಹಲವು ಅಂಶ ಅಳವಡಿಸಿಕೊಳ್ಳಲಾಗಿದೆ. ವರ್ಣಭೇದ ನೀತಿ ವಿರುದ್ಧದ ನೀತಿಗಳು, ಶೋಷಿತ ವರ್ಗಗಳ ಗುರುತಿಸುವಿಕೆ, ಮಾಹಿತಿ ಸಂಗ್ರಹದ ಅಂಶಗಳು ಪ್ರಭಾವ ಬೀರಿವೆ ಎಂದರು. ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶಂಕರಪ್ಪ, ಕಾಂತರಾಜ್‌, ಒಕ್ಕೂಟದ ಅಧ್ಯಕ್ಷ ಬಿ.ಕೆ.ರವಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು