ಶನಿವಾರ, ಆಗಸ್ಟ್ 13, 2022
26 °C

ಪರಿಷ್ಕೃತ ಪಠ್ಯಕ್ಕೆ ಸುಳ್ಳಿನ ಸಮರ್ಥನೆ, ನಾಚಿಕೆಗೇಡು: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರವು ತಾನೇ ಮಾಡಿಕೊಂಡಿರುವ ಎಡವಟ್ಟುಗಳನ್ನು ಗೌರವಯುತವಾಗಿ ಒಪ್ಪಿಕೊಂಡು ಪರಿಷ್ಕೃತ ಪಠ್ಯವನ್ನು ತಿರಸ್ಕರಿಸಬೇಕಿತ್ತು. ಅದರ ಬದಲು, ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕುರಿತಂತೆ ಮಾತನಾಡಿದ್ದ ಕಂದಾಯ ಸಚಿವ ಆರ್‌.ಅಶೋಕ ಅವರು, ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಹೇಳಿದ್ದರು.

ಅಷ್ಟಲ್ಲದೆ, ‘ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಏಳೆಂಟು ಸಣ್ಣ– ಪುಟ್ಟ ದೋಷಗಳು ಉಳಿದಿವೆ. ದೊಡ್ಡ ಮಟ್ಟದ ತಪ್ಪುಗಳು ಆಗಿಲ್ಲ. ಅವುಗಳನ್ನು ಸರಿಪಡಿಸಿ ಮುಂದಿನ ಎಂಟು– ಹತ್ತು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುತ್ತೇವೆ. ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಣೆ ಮಾಡಿದಾಗ ಪಠ್ಯಗಳಲ್ಲಿ 150 ತಪ್ಪುಗಳಿದ್ದವು. ಆಗಲೂ ಸಿದ್ದರಾಮಯ್ಯ ಸರ್ಕಾರ ಹೊಸದಾಗಿ ಪುಸ್ತಕ ಮುದ್ರಿಸಿ ವಿತರಿಸಿಲ್ಲ. ಹೆಚ್ಚುವರಿ ಪುಟಗಳನ್ನಷ್ಟೇ ಸೇರಿಸಿದ್ದರು. ಅದೇ ಮಾದರಿ ಅನುಸರಿಸುತ್ತೇವೆ’ ಎಂದು ತಿಳಿಸಿದ್ದರು.

ಮುಂದುವರಿದು, ‘ಸಿದ್ದರಾಮಯ್ಯ ಅವರು ಬರಗೂರು ರಾಮಚಂದ್ರಪ್ಪ ಮೂಲಕ ಪಠ್ಯಪುಸ್ತಕಗಳಲ್ಲಿ ಕಮ್ಯುನಿಸ್ಟ್‌ ಸಿದ್ಧಾಂತವನ್ನು ಹೇರಿದರು. ಹಿಂದೂ ಧರ್ಮ, ಹಿಂದೂ ಅಸ್ಮಿತೆಯ ಪದಗಳು, ರಾಮಾಯಣ, ಮಹಾಭಾರತದ ಅಂಶಗಳು, ಈಶ್ವರ, ರಾಮ, ಕೃಷ್ಣರ ಕುರಿತು ಇದ್ದ ಅಂಶಗಳು ಮತ್ತು ಹೆಸರುಗಳನ್ನೂ ಪಠ್ಯಪುಸ್ತಕಗಳಿಂದ ತೆಗೆಸಿ ಹಾಕಿದರು. ಹಿಂದೂ ರಾಜರು, ಚಕ್ರವರ್ತಿಗಳನ್ನು ಕಡೆಗಣಿಸಿ, ಟಿಪ್ಪು ಮತ್ತು ಮೊಗಲರನ್ನು ವೈಭವೀಕರಿಸಿದರು. ತಮ್ಮ ಸೈದ್ಧಾಂತಿಕ ಕಾರ್ಯಸೂಚಿಗೆ ಹೊಂದದ ವ್ಯಕ್ತಿಗಳು ಮತ್ತು ವಿಷಯಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಿದರು’ ಎಂದು ಆರೋಪಿಸಿದ್ದರು.

ಇದನ್ನೂ ಓದಿ: 

ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಆರ್‌.ಅಶೋಕ ಅವರು ಹೇಳಿರುವ ಸುಳ್ಳುಗಳನ್ನು ವಾಪಸ್‌ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಬೇಕು. ಇಲ್ಲವಾದರೆ, ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು